ಕೆ.ಎಚ್. ಪಾಟೀಲರು ಅಗಲಿ 33 ವರ್ಷಗಳು ಸಂದಿವೆ. ಆದರೆ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಹಾಗೆಯೇ ಉಳಿದಿದ್ದಾರೆ. ಪಾಟೀಲ ಸರಳ ಸಜ್ಜನಿಜೆ ವ್ಯಕ್ತಿತ್ವ, ಉತ್ತಮ ಆಡಳಿತವೇ ಇದಕ್ಕೆಲ್ಲ ಮೂಲ ಕಾರಣ.
1990ರ ಸಮಯ. ಕಂದಾಯ ಸಚಿವರಾಗಿದ್ದ ಕೆ.ಎಚ್.ಪಾಟೀಲರಿಗೆ ಸಬ್ ರಿಜಿಸ್ಟ್ರಾರ್ ವರ್ಗಾವಣೆ ಕುರಿತು ಅಂದಿನ ತುಮಕೂರು ಸಂಸದರಾಗಿದ್ದ ಜಿ.ಎಸ್.ಬಸವರಾಜ್ ಮನವಿ ಮಾಡಿದ್ದರು. ಎರಡು ದಿನಗಳ ನಂತರ ಬಸವರಾಜ್, ‘ಸಬ್ ರಿಜಿಸ್ಟ್ರಾರ್ ಮೇಲೆ ಗಂಭೀರ ಅಪಾದನೆಗಳಿವೆ’ ಎಂದು ಅಮಾನತು ಮಾಡಿ ವಿಚಾರಣೆಗೆ ಆದೇಶಿಸಿದ್ದರು. ಇದು ಕೆ.ಎಚ್.ಪಾಟೀಲರ ದಕ್ಷತೆ ಹಾಗೂ ಆಡಳಿತ ವೈಖರಿ.
ಕೇವಲ ಮೆಟ್ರಿಕ್‌ವರೆಗೆ ವಿದ್ಯಾಭ್ಯಾಸ ಮಾಡಿದ್ದ ದಿ. ಕೆ.ಎಚ್.ಪಾಟೀಲರು ಜನಿಸಿದ್ದು 1925ರ ಮಾ.16ರಂದು ಗದಗ ಜಿಲ್ಲೆಯ ಹುಲಕೋಟಿಯಲ್ಲಿ. ಈಗ ಅವರ ಜನ್ಮಶತಮಾನದ ಸಂಭ್ರಮ. 1992ರ ಫೆಬ್ರವರಿ 9ರಂದು ನಿಧನರಾದ ಅವರು 67 ವರ್ಷಗಳ ಜೀವನ ನಡೆಸಿದ್ದರು. 4 ಸಲ ಶಾಸಕರಾಗಿದ್ದರು. ರಾಜ್ಯದ ಕೃಷಿ, ಅರಣ್ಯ, ಆಹಾರ, ಕಂದಾಯ, ಗ್ರಾಮೀಣಾಭಿವೃದ್ಧಿ ಖಾತೆಯ ಮಂತ್ರಿಗಳಾಗಿ, 3 ಸಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೆ.ಎಚ್.ಪಾಟೀಲರು ಇಂದು ಕೂಡ ಜನಪರ ನಾಯಕನಾಗಿಯೇ ಉಳಿದಿದ್ದಾರೆ. ತೀರಿಕೊಂಡು 33 ವರ್ಷಗಳ ನಂತರವೂ ಜನರ ಮನಸ್ಸಿನಲ್ಲಿ ಇಂದಿಗೂ ಸ್ಮರಣೀಯರಾಗಿದ್ದಾರೆ.
ಸ್ಮಗ್ಲಿಂಗ್‌ನಲ್ಲಿ ಪ್ರಮುಖ ರಾಜಕಾರಣಿ ಪಾತ್ರವಹಿಸಲ್ಲ: ಜಿ.ಬಿ.ಈಶ್ವರಪ್ಪ
ಪಂಚಾಯತ್‌ನಿಂದ ರಾಜಕೀಯ: ಹುಲಕೋಟಿ ಗ್ರಾಮದ ಪಂಚಾಯತ್ ಅಧ್ಯಕ್ಷರಾಗಿ ರಾಜಕೀಯ ರಂಗ ಪ್ರವೇಶಿಸಿದ ಕೆ.ಎಚ್.ಪಾಟೀಲರು 1967ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. ಮೊದಲ ಸಲ ಶಾಸಕರಾಗಿದ್ದರೂ ವಿರೋಧಿ ಪಕ್ಷದ ದಿಟ್ಟ ಧ್ವನಿಯಾಗಿದ್ದರು. ಕಾಂಗ್ರೆಸ್ 1969ರಲ್ಲಿ ವಿಭಜನೆಯಾದ ನಂತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿ, ಪಕ್ಷದ ಅಧ್ಯಕ್ಷರಾಗಿದ್ದ ದೇವರಾಜ ಅರಸರ ಜೊತೆಗೂಡಿ 1971ರ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 27 ಸ್ಥಾನ ಗೆಲ್ಲುವಂತೆ ಪಕ್ಷ ಸಂಘಟನೆಯನ್ನು ಮಾಡುವ ಮೂಲಕ ಇಂದಿರಾ ಗಾಂಧಿಯವರಿಂದ ಪ್ರಶಂಸೆಗೆ ಒಳಗಾಗಿದ್ದರು. 1983ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಅಧಿಕಾರ ಕಳೆದುಕೊಂಡಾಗ ಇಂದಿರಾ ಗಾಂಧಿ ಅವರು ಪಾಟೀಲರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿದ್ದರು.
ಕ್ಯಾಂಪ್ಕೋ ಸಂಸ್ಥೆ ಹಿಂದಿನ ರೂವಾರಿ: ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಕೇರಳ-ಕರ್ನಾಟಕ ವ್ಯಾಪ್ತಿಯ ಬಹುಜನರ ಅಡಿಕೆ ಸಹಕಾರಿ ಸಂಸ್ಥೆ ‘ಕ್ಯಾಂಪ್ಕೋ’ ಸ್ಥಾಪಿಸಿದವರು ಕೆ.ಎಚ್. ಪಾಟೀಲರು. ವಾರಾಣಸಿ ಸುಬ್ರಾಯ ಭಟ್ಟರಿಗೆ ಇದರ ಹೊಣೆಗಾರಿಕೆ ನೀಡಿದ ಅವರ ದೂರದೃಷ್ಟಿಯ ಕಾರಣದಿಂದ ಇಂದು ಅಡಿಕೆ, ತೆಂಗು ಬೆಳೆಗಾರರು ಆರ್ಥಿಕ ಶಕ್ತಿ ಪಡೆದಿದ್ದಾರೆ. ಅದೇ ಮಾದರಿಯಲ್ಲಿ ಸಾಗರದ ಆಫ್ನಕೋಸ್ ಹಾಗೂ ಶಿರಶಿಯ ಕಡವೆ ಹೆಗ್ಡೆ ನೇತೃತ್ವದ ‘ಟಿ.ಎಸ್.ಎಸ್’ ಯಶಸ್ವಿ ಸಂಸ್ಥೆಗಳಾಗುವುದರಲ್ಲಿ ಕೆ.ಎಚ್. ಪಾಟೀಲರ ಸೇವೆ ಎಲ್ಲಾ ಕಾಲಕ್ಕೂ ಶಾಶ್ವತ.
70ರ ದಶಕದಲ್ಲಿ ಕಟ್ಟಿಗೆ ಗಾಡಿಗಳು 5 ರು. ಲೈಸೆನ್ಸ್‌ನಲ್ಲಿ ನಡೆಸುತಿದ್ದ ಅರಣ್ಯ ನಾಶವನ್ನು ತಡೆಗಟ್ಟಿ ಕರ್ನಾಟಕದ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದು ಕೂಡ ಕೆ.ಎಚ್. ಪಾಟೀಲರು. ‘ಅವರಂತಹ ಅರಣ್ಯ ಸಚಿವರು ಹಾಗೂ ಪರಿಸರ ಪ್ರೇಮಿಯನ್ನು ನೋಡಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ರಾಜ್ಯದ ನಿವೃತ ಮುಖ್ಯ ಅರಣ್ಯಾಧಿಕಾರಿ ಎ.ಎನ್. ಯಲ್ಲಪ್ಪರೆಡ್ಡಿ. ಹತ್ತನೇ ತರಗತಿ ತನಕ ಓದಿದ್ದ ಪಾಟೀಲರು 80ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪಧವೀಧರರಾಗುತ್ತಾರೆ. ಆದರೆ ಅವರ ಹೆಸರಿನಲ್ಲಿ ಅಸಂಖ್ಯ ಪ್ರೌಢಶಾಲೆಗಳು, ಕಾಲೇಜುಗಳು ಹಾಗೂ ಕಾನೂನು ಕಾಲೇಜುಗಳು ಗದಗ, ಹುಬ್ಬಳ್ಳಿ, ಬೆಳಗಾವಿಯಲ್ಲಿವೆ. ಈಗ ಬೆಂಗಳೂರಿನಲ್ಲಿ ಕೂಡ ಸ್ಕೂಲ್ ಆಫ್ ಲಾ ಉದ್ಘಾಟನೆಯಾಗುತ್ತಿದೆ.
ದೇವರಾಜ ಅರಸರ ಜತೆಗಿನ ಭಿನ್ನಾಭಿಪ್ರಾಯದ ಕಾರಣ ಸುಮಾರು 60ಕ್ಕೂ ಹೆಚ್ಚು ಶಾಸಕರು ಬೆಂಬಲವನ್ನು ವಾಪಸ್ ಪಡೆದ ಕಾರಣ 1977ರ ಡಿಸೆಂಬರ್ 31ರಂದು ರಾಜ್ಯವು ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತು. ದೇವರಾಜ ಅರಸರ ವಿರುದ್ಧ ಸ್ವಪಕ್ಷೀಯ 70 ಶಾಸಕರನ್ನು ಒಟ್ಟುಗೂಡಿಸಿದ್ದ ದಿ. ಎಸ್.ಎಂ ಕೃಷ್ಣ, ನಾಗರತ್ನಮ್ಮ, ಮಲ್ಲಿಕಾರ್ಜುನಸ್ವಾಮಿ, ಚನ್ನಬಸಪ್ಪ, ಸಿದ್ಧವೀರಪ್ಪ ಸಂಪುಟ ತೊರೆಯುವಾಗ ಅವರೆಲ್ಲರ ನಾಯಕ ಕೆ.ಎಚ್. ಪಾಟೀಲರಾಗಿದ್ದರು. 1985 ರಿಂದ 89ರವರೆಗೆ ವಿರೋಧಿಪಕ್ಷದ ಶಾಸಕರಾಗಿದ್ದ ಕೆ.ಎಚ್. ಪಾಟೀಲರು ಒಂದು ದಿನವೂ ಕಲಾಪಗಳಿಂದ ದೂರ ಉಳಿಯದ ಜನಪ್ರತಿನಿಧಿಯಾಗಿದ್ದರು.
ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ನಾಯಕರ ನೇಮಿಸಿಲ್ವಾ: ಗ್ಯಾರಂಟಿ ಸಮಿತಿ ಪ್ರಶ್ನಿಸಿದ ಬಿಜೆಪಿಗೆ ಸಿದ್ದು ಟಾಂಗ್
ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿ ಕೆ.ಎಚ್. ಪಾಟೀಲರ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತಿದ್ದರು. ಇಂದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಕೂಡ ಕೆ.ಎಚ್. ಪಾಟೀಲರ ಸಲಹೆ. ವಿಧಾನ ಮಂಡಲದ ಚರ್ಚೆಗಳನ್ನು ಅವಲೋಕಿಸಿದಾಗ ಇದು ತಿಳಿಯುತ್ತದೆ. ಕೆ.ಎಚ್. ಪಾಟೀಲರು ಮುಖ್ಯಮಂತ್ರಿಯಾಗಲಿಲ್ಲವೆಂಬ ಕೊರಗು ಉತ್ತರ ಕರ್ನಾಟಕದ ಅನೇಕ ಮುಖಂಡರಿಗೆ ಇದೆ. ಆದರೆ ಅರಣ್ಯನಾಶ ತಡೆದ ಪರಿಸರ ಪ್ರೇಮಿ ಕೆ.ಎಚ್. ಪಾಟೀಲರು ಎಲ್ಲಾ ಕಾಲಕ್ಕೂ ಸ್ಮರಣೀಯ. ಇಂದು ಅವರ ಶತಮಾನದ ಸ್ಮರಣೆ ವಿಧಾನಸೌಧದಲ್ಲಿ ನಡೆಯುತ್ತಿದೆ.