
ದೇವನಹಳ್ಳಿ (ಮಾ.08): ನಾನು ನನ್ನ ರಾಜಕೀಯ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಸಚಿವನಾಗಲು ಅನೇಕ ನಾಯಕರ ಸಹಕಾರ, ಆಶೀರ್ವಾದ ನನ್ನ ಮೇಲಿದ್ದು, ಅವರನ್ನು ನಾನು ಪ್ರತಿದಿನ ಸ್ಮರಿಸತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪನವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆ 10 ದಿನ ಇರುವಾಗ ನಾನು ದೇವನಹಳ್ಳಿಗೆ ಬಂದಾಗ ತಾಲೂಕಿನ ಜನತೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ನನಗಾಗಿ ಶ್ರಮಿಸಿ ನನ್ನನ್ನು ಗೆಲ್ಲಿಸಿದ್ದಾರೆ. ತಾಲೂಕಿನ ಜನತೆಗೆ ನಾನು ಅಭಾರಿಯಾಗಿದ್ದೇನೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇನೆ. ಇರುವ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತಾಲೂಕಿನ ಜನತೆಯ ಖುಣ ತೀರಿಸುತ್ತೇನೆ ಎಂದು ಹೇಳಿದರು.
ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ಸಮಾಜದಲ್ಲಿ ದೊಡ್ಡಹೆಸರು ಪಡೆದವರು. ಆದಿಚುಂಚನಗಿರಿ ಮಠದಲ್ಲಿ ಎಲ್ಲಾ ವರ್ಗದವರಿಗೂ ದಾಸೋಹ, ಶಿಕ್ಷಣ ನೀಡುತ್ತಿದ್ದಾರೆ. 1.75 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಏಕೈಕ ಸಂಸ್ಥೆ ಆದಿಚುಂಚನಗಿರಿ ಮಠ. ಎಲ್ಲಾ ಸಮಾಜಗಳನ್ನು ಒಗ್ಗೂಡಿಸಿಕೊಂಡು ಬಸವಣ್ಣನವರ ಚಿಂತನೆಯನ್ನು ಪಾಲಿಸುತ್ತಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಅನೇಕ ಸಚಿವರು ಒಳಗೊಂಡಂತೆ ಒಳಮೀಸಲಾತಿ ನೀಡುವ ನಿರ್ಣಯ ಮಾಡಲಾಗಿದೆ. ಈ ನಿರ್ಣಯಕ್ಕೆ ಎಲ್ಲರು ಒಪ್ಪಿದ್ದಾರೆ. ಶೋಷಿತ ಸಮುದಾಯಗಳಿಗೆ ನ್ಯಾಯ ಕಲ್ಪಿಸಬೇಕೆಂಬುದೇ ಎಲ್ಲರು ತೀರ್ಮಾನ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ತಡವಾಗಿದೆ. ಸಂವಿಧಾನಬದ್ದವಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಆದಷ್ಟು ಬೇಗ ಒಳಮೀಸಲಾತಿ ಸಮಸ್ಯೆ ಬಗೆಹರಿಸುತ್ತೇವೆ. ನನ್ನ ಹುಟ್ಟುಹಬ್ಬಕ್ಕೆ ಆಶೀರ್ವಾದ ಮಾಡಲು ಬೇರೆ ಜಿಲ್ಲೆಗಳಿಂದ ರಾಜ್ಯಗಳಿಂದ ಅನೇಕ ಸ್ವಾಮೀಜಿಗಳು ಬಂದಿದ್ದು, ಅವರೆಲ್ಲರಿಗೂ ಕೋಟಿಕೋಟಿ ನಮನಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಕಾಶ್ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನೆಚ್ಚಿನ ನಾಯಕನ ಮೇಲೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂವಿನ ಹಾರ, ಉಡುಗೊರೆ ನೀಡಿ ಹೂವಿನ ಸುರಿಮಳೆ ಸುರಿಸಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರೆಲ್ಲರಿಗೂ ಊಟದ ವ್ಯವಸ್ಥೆ ಮತ್ತು ಮಜ್ಜಿಗೆ ವಿಶೇಷವಾಗಿ ಮಹಿಳೆಯರಿಗೆ ಬಾಗಿನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಈಶ್ವರ್ ಖಂಡ್ರೆ, ಸತೀಶ್ ಜಾರಕಿ ಹೋಳಿ, ಆಂಜನೇಯ, ಸುಬ್ಬಾರೆಡ್ಡಿ, ಶಾಸಕ ಶರತ್ ಬಚ್ಚೇಗೌಡ, ವಸಂತಪ್ಪ, ಮಾದಾರ ಚನ್ನಯ್ಯಸ್ವಾಮಿ, ಶ್ರೀ ನಿರ್ಮಾಲನಂದ ಸ್ವಾಮೀಜಿ, ಬಯಪಾ ಶಾಂತಕುಮಾರ್, ನಿರ್ದೇಶಕ ಎಸ್.ಪಿ.ಮುನಿರಾಜು, ಬಯಪ ನಿರ್ದೇಶಕರಾದ ಪ್ರಸನ್ನಕುಮಾರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ.ಮಂಜುನಾಥ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರಾಧಾರೆಡ್ಡಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಮುಖಂಡರು, ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.