ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಮುಂದಿನ ಹತ್ತು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಫೆ.09): ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ. ಮುಂದಿನ ಹತ್ತು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆ.ಸಿ.ನಾರಾಯಣಗೌಡರು ಭೇಟಿ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಜೊತೆ ಮಾತನಾಡಿದ ಕೂಡಲೇ ಕಾಂಗ್ರೆಸ್ ಸೇರುತ್ತಾರೆಂದು ಹೇಳಲಾಗುವುದಿಲ್ಲ. ಮುಂದಿನ ಹತ್ತು ದಿನಗಳಲ್ಲಿ ಚಿತ್ರಣ ಸಿಗಲಿದೆ. ಪಕ್ಷ ಸೇರುವ ವಿಚಾರವಾಗಿ ನಾರಾಯಣಗೌಡರು ಯಾವುದೇ ಬೇಡಿಕೆ ಇಟ್ಟಿಲ್ಲ.
ನಾವೂ ಯಾವುದೇ ಭರವಸೆ ಕೊಟ್ಟಿಲ್ಲ. ಈ ಹಿಂದೆಯೇ ಹೇಳಿದಂತೆ ಮಂಡ್ಯ ಜಿಲ್ಲೆಯಲ್ಲಿ ಒಂದಷ್ಟು ಜನ ಕಾಂಗ್ರೆಸ್ ಸೇರುತ್ತಾರೆ. ನಾರಾಯಣಗೌಡ ಜೆಡಿಎಸ್ ಸರಿ ಇಲ್ಲ ಎಂದು ಬಿಜೆಪಿಗೆ ಹೋದರು. ಈಗ ಅವರಿಬ್ಬರೂ ಒಂದಾಗಿದ್ದಾರೆ ಎಂದು ಕಾಂಗ್ರೆಸ್ ಕಡೆ ಬರುತ್ತಿದ್ದಾರೇಂತ ಕಾಣುತ್ತೆ ಎಂದು ನುಡಿದರು. ಎರಡು ತಲೆ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪಾಪ ಅವರಿಗೆ ಮಾತ್ರ ಒಂದೇ ತಲೆ ಇರೋದು. ಈ ದೇಶದಲ್ಲಿ ಮಹಾತ್ಮಗಾಂಧಿ ಬಿಟ್ಟರೆ ಸತ್ಯ ಹೇಳೋರು ಅವರೊಬ್ಬರೆ. ಹುಟ್ಟಿದಾಗಲೇ ಅವರು ಎಲ್ಲ ರೀತಿಯಲ್ಲೂ ಪರಿಣಿತಿ ಪಡೆದಿದ್ದಾರೆ ಎಂದು ಎಂದು ವ್ಯಂಗ್ಯವಾಡಿದರು.
ದೆಹಲಿಯ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿರುವ ಕುರಿತು ಮಾತನಾಡಿ, ರಾಜ್ಯಕ್ಕೆ ಬರಬೇಕಿರುವ ಅನುದಾನ ಕುರಿತಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪತ್ರ ವ್ಯವಹಾರ ಮಾಡಿದೆ. ಕೇಂದ್ರದಿಂದ ನಮಗೆ ಸ್ಪಂದನೆ ಸಿಗದಿದ್ದರಿಂದ ನಾವು ಪ್ರತಿಭಟನೆ ಮಾಡಿದ್ದೇವೆ. ಹಣಕಾಸಿನ ಅಂಕಿ-ಅಂಶಗಳ ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು. ನಾವು ೧೫ ಸಾವಿರ ಕೋಟಿ ರು. ಕೇಳಿದ್ದೆವು. ಅವರು ಎಷ್ಟಾದರೂ ಕೊಡಲಿ. ನಾವು ಇಷ್ಟೇ ಕೊಡಿ ಎಂದು ಒತ್ತಡ ಹಾಕಿಲ್ಲ.
ಸಿಎಂ ಸಿದ್ದರಾಮಯ್ಯ ಬಳಿ ಹಲವು ಸುಳ್ಳಿನ ಅಸ್ತ್ರಗಳಿವೆ: ಸಿ.ಟಿ.ರವಿ ಕಿಡಿ
ಆ ಹಣವನ್ನಾದರೂ ನಿರ್ದಿಷ್ಟ ಸಮಯದೊಳಗೆ ಬಿಡುಗಡೆ ಮಾಡದಿದ್ದರೆ ಹೇಗೆ. ಬಿಜೆಪಿ ಸಂಸದರಿಗೆ ನಾವು ಯಾವ ಭಾಷೆಯಲ್ಲಿ ಹೇಳಬೇಕು. ಐದು ತಿಂಗಳು ಕಳೆದರೂ ಬರಪರಿಹಾರ ಹಣ ಕೊಟ್ಟಿಲ್ಲ. ಬಿಜೆಪಿಗೆ ನೈತಿಕತೆ ಇದ್ದರೆ ಸಂಸದರು ಯಾರೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಾರದು ಎಂದು ನೇರವಾಗಿ ಹೇಳಿದರು. ನಮ್ಮ ರಾಜ್ಯದಿಂದ ರಾಜ್ಯಸಭಾ ಸದಸ್ಯರಾಗಿರೊ ನಿರ್ಮಲಾ ಸೀತಾರಾಮ್ ಅವರಿಗೆ ಬದ್ಧತೆ ಇರಬೇಕಿತ್ತು. ನಮ್ಮ ಹೋರಾಟಕ್ಕೆ ಡಿ.ಕೆ.ಸುರೇಶ್ ಹೊರತುಪಡಿಸಿ ಸ್ವಾಭಿಮಾನಿ ಸಂಸದರೂ ಬರಲಿಲ್ಲ ಯಾರೂ ಬರಲಿಲ್ಲ.