
ಬೆಂಗಳೂರು: ರಾಜ್ಯ ಚುನಾವಣಾ ಆಯೋಗ ಜೂನ್ ತಿಂಗಳಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ತನ್ನ ನಿಲುವನ್ನು ಮತ್ತೊಮ್ಮೆ ದೃಢಪಡಿಸಿದೆ. ಇದೇ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಹತ್ವದ ಹಾಗೂ ಹೈವೋಲ್ಟೇಜ್ ಸಭೆ ನಡೆಯಲಿದ್ದು, ಚುನಾವಣಾ ದಿನಾಂಕ ಘೋಷಣೆಗೆ ವೇದಿಕೆ ಸಜ್ಜಾಗಿದೆ.
ಇನ್ನೊಂದೆಡೆ, ಕರ್ನಾಟಕ ರಾಜ್ಯ ಸರ್ಕಾರ ಜನಗಣತಿ ಕಾರ್ಯಾಚರಣೆ ಹಿನ್ನೆಲೆ ಸಿಬ್ಬಂದಿಗಳ ಕೊರತೆಯನ್ನು ಉಲ್ಲೇಖಿಸಿ ಸೆಪ್ಟೆಂಬರ್ ವರೆಗೆ ಕಾಲಾವಕಾಶ ನೀಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಆದರೆ, ನಾವು ಜೂನ್‌ನಲ್ಲೇ ಚುನಾವಣೆಗೆ ಸಿದ್ಧ, ಸರ್ಕಾರವೇ ಸಿದ್ಧವಾಗಿಲ್ಲ ಎಂದು ಆಯೋಗವು ನ್ಯಾಯಾಲಯದ ಗಮನಕ್ಕೂ ತಂದಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 334ರಲ್ಲಿ ಈ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಮೂಲತಃ ರಾಜ್ಯ ಚುನಾವಣಾ ಆಯೋಗದ ಸಭಾಂಗಣದಲ್ಲಿ ನಡೆಯಬೇಕಿದ್ದ ಈ ಸಭೆಯನ್ನು ನಂತರ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗಿದೆ. ಇದಕ್ಕೂ ಮೊದಲು ಎರಡು ಬಾರಿ ಸಭೆ ಮುಂದೂಡಲ್ಪಟ್ಟಿದ್ದು, ನಿನ್ನೆ ನಡೆಯಬೇಕಿದ್ದ ಸಭೆಯೂ ಮುಖ್ಯಮಂತ್ರಿ ಇತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಹಿನ್ನೆಲೆ ಮುಂದೂಡಲಾಗಿತ್ತು. ಇದೀಗ ಅದೇ ಸಭೆಯನ್ನು ಇಂದು ಮರುನಿಗದಿಪಡಿಸಲಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರು, ಸದಸ್ಯರು, ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಭಾಗವಹಿಸಲಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ-2024ರ ಕಲಂ 34(4) ಪ್ರಕಾರ, ಚುನಾವಣಾ ದಿನಾಂಕ ನಿಗದಿ ಮಾಡುವ ಮೊದಲು ರಾಜ್ಯ ಚುನಾವಣಾ ಆಯೋಗವು ಜಿಬಿಎ ಜೊತೆ ಸಮಾಲೋಚನೆ ನಡೆಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೇ ವೇಳೆ, ಸುಪ್ರೀಂ ಕೋರ್ಟ್ ಜಿಬಿಎ ರಚನೆಯ ನಂತರ ಹೊಸದಾಗಿ ಸ್ಥಾಪಿತವಾಗಿರುವ ಐದು ನಗರ ಪಾಲಿಕೆಗಳಿಗೆ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಆದೇಶ ನೀಡಿರುವುದು ಈ ಪ್ರಕ್ರಿಯೆಗೆ ವೇಗ ನೀಡಿದೆ.
ಇಂದಿನ ಸಭೆಯಲ್ಲಿ ಚುನಾವಣಾ ವೇಳಾಪಟ್ಟಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮತದಾರರ ಪಟ್ಟಿ ಸಿದ್ಧತೆ, ವಾರ್ಡ್‌ಗಳ ಪುನರ್‌ವ್ಯವಸ್ಥೆ, ಮೀಸಲಾತಿ ಪ್ರಕ್ರಿಯೆ ಹಾಗೂ ಆಡಳಿತಾತ್ಮಕ ಸಿದ್ಧತೆಗಳ ಕುರಿತು ಸಮಗ್ರ ವಿಮರ್ಶೆ ನಡೆಯಲಿದೆ. ಚುನಾವಣಾ ದಿನಾಂಕ ಘೋಷಣೆಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಕೂಡ ಹೆಚ್ಚಿದೆ.
ಆದರೆ ಜನಗಣತಿ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ಉಲ್ಲೇಖಿಸಿ ಜಿಬಿಎ ನೀಡಿರುವ ಮನವಿಗೂ ಸಭೆಯಲ್ಲಿ ಮಹತ್ವ ಸಿಗಬಹುದು. ಈ ಅಂಶದ ಮೇಲೆ ಚರ್ಚೆ ನಡೆಸಿ ಸರ್ಕಾರದ ಬೇಡಿಕೆಯನ್ನು ಭಾಗಶಃ ಪರಿಗಣಿಸುವ ಸಾಧ್ಯತೆಯೂ ತಳ್ಳಿ ಹಾಕಲಾಗುವುದಿಲ್ಲ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾತನಾಡಿ, “ರಾಜ್ಯ ಚುನಾವಣಾ ಆಯೋಗ ಕರೆದಿರುವ ಸಭೆಯಲ್ಲಿ ನಾವು ಭಾಗವಹಿಸುತ್ತಿದ್ದೇವೆ. ಜನಗಣತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೋ ಅದಕ್ಕೆ ಬದ್ದರಾಗಿರುತ್ತೇವೆ. ಆಯೋಗ ಸೂಚನೆ ನೀಡಿದರೆ ಚುನಾವಣೆ ನಡೆಸಲು ನಾವು ಸಿದ್ಧ” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಜೂನ್‌ನಲ್ಲಿ ಚುನಾವಣೆ ನಡೆಸುವ ಆಯೋಗದ ಹಠ ಹಾಗೂ ಸೆಪ್ಟೆಂಬರ್ ವರೆಗೆ ಕಾಲಾವಕಾಶ ಕೋರುವ ಸರ್ಕಾರದ ಮನವಿ ನಡುವಿನ ಸಂಘರ್ಷದ ನಡುವೆ ಇಂದಿನ ಸಭೆ ಅತ್ಯಂತ ನಿರ್ಣಾಯಕವಾಗಿದ್ದು, ರಾಜ್ಯ ರಾಜಕೀಯದ ಗಮನ ಸಂಪೂರ್ಣವಾಗಿ ಈ ಸಭೆಯತ್ತ ನೆಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.