ಜಾತಿ ಗಣತಿ ಅಂತ್ಯವೋ? ವಿಸ್ತರಣೆಯೋ? ಇಂದು ಸಿಎಂ ಸಿದ್ದರಾಮಯ್ಯ ತೀರ್ಮಾನ

Published : Oct 19, 2025, 04:33 AM IST
CM Siddaramaiah

ಸಾರಾಂಶ

ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ಮಹತ್ವದ ಸಭೆ ನಡೆಸಲಿದ್ದು, ಜಿಬಿಎ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆ ಭಾನುವಾರ ಅಂತ್ಯಗೊಳ್ಳಲಿದೆಯೇ ಅಥವಾ ಮುಂದುವರೆಯಲಿದೆಯೇ ಎಂಬ ಬಗ್ಗೆ ನಿರ್ಧಾರವಾಗಲಿದೆ.

ಬೆಂಗಳೂರು (ಅ.19): ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಂಜೆ ಮಹತ್ವದ ಸಭೆ ನಡೆಸಲಿದ್ದು, ಜಿಬಿಎ ವ್ಯಾಪ್ತಿ ಹೊರತುಪಡಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಸಮೀಕ್ಷೆ ಭಾನುವಾರ ಅಂತ್ಯಗೊಳ್ಳಲಿದೆಯೇ ಅಥವಾ ಮುಂದುವರೆಯಲಿದೆಯೇ ಎಂಬ ಬಗ್ಗೆ ನಿರ್ಧಾರವಾಗಲಿದೆ. ರಾಜ್ಯದಲ್ಲಿ ಜಿಬಿಎ ಹೊರತುಪಡಿಸಿ ಉಳಿದೆಡೆ ಶನಿವಾರದ ವೇಳೆಗೆ ಶೇ. 96.35 ಕುಟುಂಬಗಳ ಸಮೀಕ್ಷೆ ನಡೆಸಿದ್ದು, ಶೇ.87.32 ರಷ್ಟು ಜನರ ಗಣತಿ ಮಾತ್ರ ಪೂರ್ಣಗೊಂಡಿದೆ.

ಭಾನುವಾರ ಎಂದಿನಂತೆ ಸಮೀಕ್ಷೆ ನಡೆಯಲಿದ್ದು, ಭಾನುವಾರ ಸಂಜೆ 4.30 ಗಂಟೆಗೆ ಹಿಂದುಳಿದ ವರ್ಗಗಳ ಆಯೋಗ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಈ ವೇಳೆ ಸಮೀಕ್ಷೆಯನ್ನು ಮುಂದುವರೆಸಬೇಕೆ ಅಥವಾ ಪೂರ್ಣಗೊಳಿಸಬೇಕೆ ಎಂದು ತೀರ್ಮಾನಿಸಲಿದ್ದಾರೆ ಎಂದು ಹೇಳಲಾಗಿದೆ. ಪೂರ್ವ ನಿಗದಿಯಂತೆ ಅ.18ರ ಶನಿವಾರವೇ ಸಮೀಕ್ಷೆ ಪೂರ್ಣಗೊಳ್ಳಬೇಕಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಜನಸಂಖ್ಯೆಯ (ಶೇ.85ರಷ್ಟು ಮಾತ್ರ ಆಗಿತ್ತು) ಗಣತಿ ಆಗಿಲ್ಲ. ಹೀಗಾಗಿ ಅ.19 ರಂದು ಭಾನುವಾರವೂ ಸಮೀಕ್ಷೆ ಮುಂದುವರೆಸಲು ತಿಳಿಸಲಾಗಿದೆ.

1.42 ಕೋಟಿ ಕುಟುಂಬಗಳ ಸಮೀಕ್ಷೆ ಪೂರ್ಣ: ಜಿಬಿಎ ಹೊರತುಪಡಿಸಿ ರಾಜ್ಯಾದ್ಯಂತ ಒಟ್ಟು 1,48,14,286 ಕುಟುಂಬಗಳ ಸಮೀಕ್ಷೆ ಗುರಿ ನೀಡಲಾಗಿತ್ತು. ಈ ಪೈಕಿ ಶನಿವಾರ 1.60 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದ್ದು, ಒಟ್ಟು 1.42 ಕೋಟಿ ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಿದೆ. ಹೀಗಾಗಿ ಮನೆಗಳ ಪೈಕಿ ಶೇ.96.35 ರಷ್ಟು ಉತ್ತಮ ಪ್ರಗತಿ ಸಾಧಿಸಲಾಗಿದೆ. ಆದರೆ ಜನಸಂಖ್ಯೆ ಪೈಕಿ 5,29,63,614 ಜನರ ಸಮೀಕ್ಷೆ ಮಾತ್ರ ನಡೆಸಿದ್ದು, ಒಟ್ಟು ಗುರಿಯ ಶೇ.87.32 ರಷ್ಟು ಸಾಧನೆ ಮಾತ್ರ ಮಾಡಲಾಗಿದೆ.

ಕೆಲ ಮನೆಗಳ ಮರು ಸಮೀಕ್ಷೆಗೆ ನಿರ್ಧಾರ: ಸಮೀಕ್ಷೆಯ ಆರಂಭದಲ್ಲಿ ಕುಟುಂಬಗಳ ಒಟ್ಟು ಜನರ ಮಾಹಿತಿಯನ್ನು ಸಂಗ್ರಹಿಸಿಲ್ಲ. ಬದಲಿಗೆ 2-3 ಮಂದಿಯ ಮಾಹಿತಿ ಮಾತ್ರ ಪಡೆಯಲಾಗಿತ್ತು. ಕೆಲವೆಡೆ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿ ಪಡೆದಿಲ್ಲ. ಇದನ್ನು ಪುನರ್ ಸಮೀಕ್ಷೆ ನಡೆಸಿ ಎಲ್ಲರ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ. ಹೀಗಾಗಿ ಭಾನುವಾರದವರೆಗೂ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಜನಸಂಖ್ಯೆವಾರು ಪ್ರಗತಿ ಹೆಚ್ಚಾಗುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ಬರೀ 40% ಸಮೀಕ್ಷೆ: ದಿನಾಂಕ ವಿಸ್ತರಣೆ?

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯಲ್ಲಿ ಒಟ್ಟು 39,82,335 ಕುಟುಂಬಗಳ ಸಮೀಕ್ಷೆ ಗುರಿ ನಿಗದಿ ಮಾಡಲಾಗಿತ್ತು. ಶನಿವಾರ 58,672 ಕುಟುಂಬಗಳ ಸಮೀಕ್ಷೆ ನಡೆಸಿದ್ದು ಒಟ್ಟು 17,84,312 ಕುಟುಂಬಗಳ ಸಮೀಕ್ಷೆ ಪೂರ್ಣಗೊಂಡಂತಾಗಿದೆ. ಈ ಮೂಲಕ ಶೇ.39.76 ರಷ್ಟು ಪ್ರಗತಿ ಸಾಧಿಸಿದೆ. ಜಿಬಿಎ ವ್ಯಾಪ್ತಿಯಲ್ಲಿ ಅ.24 ರವರೆಗೂ ಸಮೀಕ್ಷೆ ಮುಂದುವರೆಯಲಿದೆ ಎಂದು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ. ಆದರೆ, ದೀಪಾವಳಿ ಹಿನ್ನೆಲೆಯಲ್ಲಿ ನಗರದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಸಮೀಕ್ಷೆಯ ವೇಗ ಮತ್ತಷ್ಟು ಕುಂಠಿತಗೊಳ್ಳಲಿದೆ. ಅ.24 ರ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಜಿಬಿಎಗೆ ಸೀಮಿತವಾಗಿ ದಿನಾಂಕ ಅ.24ರ ಬಳಿಕವೂ ವಿಸ್ತರಣೆ ಮಾಡುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ