
ಕಲಬುರಗಿ (ಅ.19): ‘ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಿ ಸರ್ಕಾರ ಆದೇಶಿಸಬೇಕು’ ಎಂದು ಅರ್ಜಿ ಸಲ್ಲಿಸಿ ಅದರಲ್ಲಿ ಪರೋಕ್ಷವಾಗಿ ಯಶ ಕಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ವಿಧಾನಸಭಾ ಕ್ಷೇತ್ರ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್, ಭಾನುವಾರ ಬೃಹತ್ ಪಥಸಂಚಲನ ನಡೆಸಲು ಮುಂದಾಗುವ ಮೂಲಕ, ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಆದರೆ, ಇದಕ್ಕೆ ಸೂಕ್ತ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ, ಪಥ ಸಂಚಲನಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಅಳಡಿಸಲಾಗಿದ್ದ ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್, ಬಂಟಿಂಗ್‌ಗಳನ್ನೆಲ್ಲ ಅಲ್ಲಿನ ಪುರಸಭೆಯ ಸಿಬ್ಬಂದಿ ರಾತ್ರೋರಾತ್ರಿ ತೆರವು ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೀಗಾಗಿ ಭಾನುವಾರ ಪಥಸಂಚಲನ ನಡೆಯುವುದೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ, ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಶನಿವಾರ ನಡೆದ ಆರ್‌ಎಸ್‌ಎಸ್ ಪಥ ಸಂಚಲನದ ವೇಳೆ ಮಸೀದಿಯೊಂದರ ಮುಂದೆ ‘ಅಲ್ಲಾ ಹು ಅಕ್ಬರ್’ ಘೋಷಣೆ ಮೊಳಗಿದ್ದು, ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಪಥ ಸಂಚಲನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ತುಮಕೂರಿನಲ್ಲೂ ಮೊದಲು ಅನುಮತಿ ಸಿಕ್ಕಿರಲಿಲ್ಲವಾದರೂ, ನಂತರ ಅನುಮತಿ ದೊರೆತು ಪಥಸಂಚಲನ ಸಂಪನ್ನಗೊಂಡಿದೆ.
ಚಿತ್ತಾಪುರದಲ್ಲಿ ಪಥ ಸಂಚಲನ ನಡೆಯುತ್ತಾ?: ಆರ್‌ಎಸ್‌ಎಸ್ ಶತಾಬ್ದಿ ಸಂಭ್ರಮದ ಹಿನ್ನೆಲೆಯಲ್ಲಿ ಭಾನುವಾರ ಆರ್‌ಎಸ್ಎಸ್ ಪಥ ಸಂಚಲನ ಕಾರ್ಯಕ್ರಮ ಆಯೋಜಿಸಲಾಗಿದೆ. ನೂರಾರು ಗಣವೇಷಧಾರಿಗಳಿಂದ ಭವ್ಯ ಪಥ ಸಂಚಲನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್, ಬಂಟಿಂಗ್‌ಗಳನ್ನು ಅಳವಡಿಸಲಾಗಿತ್ತು. ಆದರೆ, ‘ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ಸ್, ಬಂಟಿಂಗ್ಸ್‌ಗಳನ್ನು ಅಳವಡಿಸಲು ಸೂಕ್ತ ಅನುಮತಿ ಪಡೆದಿಲ್ಲ’ ಎಂಬ ಕಾರಣ ನೀಡಿ, ಅಳವಡಿಸಿದ್ದ ಬ್ಯಾನರ್‌ಗಳನ್ನು ಅಲ್ಲಿನ ಪುರಸಭೆಯ ಸಿಬ್ಬಂದಿ ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ. ಇದು ವಿವಾದ ಹುಟ್ಟು ಹಾಕಿದೆ.
ಈ ಮಧ್ಯೆ, ಬಂಟಿಂಗ್ಸ್, ಬ್ಯಾನರ್ಸ್ ತೆರವು ಖಂಡಿಸಿ ಚಿತ್ತಾಪುರ ಪುರಸಭೆಯ ಮುಖ್ಯಾಧಿಕಾರಿ ಕಚೇರಿ ಎದುರು ಹಿಂದು ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಪುರಸಭೆಯ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಮುಖ್ಯಾಧಿಕಾರಿ, ಸಿಬ್ಬಂದಿಗಳ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ಹೊರಹಾಕಿದರು.
ಇದರ ನಡುವೆ, ಕಾರ್ಯಕ್ರಮಕ್ಕೆ ಅನುಮತಿ ನೀಡಲು ಅಧಿಕಾರಿಗಳು ಮತ್ತಷ್ಟು ವಿವರಣೆ ಕೋರಿದ್ದಾರೆ. ‘ಪಥ ಸಂಚಲನದ ವೇಳೆ ಲಾಠಿ, ಆಯುಧಗಳ ಬಳಕೆ ಮಾಡುವ ಬಗ್ಗೆ ಉಲ್ಲೇಖವಿಲ್ಲ. ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲ. ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿ ಸಲ್ಲಿಸಿಲ್ಲ’ ಎಂಬ 11 ಅಂಶಗಳ ಬಗ್ಗೆ ತಹಸೀಲ್ದಾರ್ ವಿವರಣೆ ಕೋರಿದ್ದಾರೆ. ಹೀಗಾಗಿ ಶನಿವಾರ ರಾತ್ರಿಯವರೆಗೂ ಕಾರ್ಯಕ್ರಮಕ್ಕೆ ಇನ್ನೂ ಅನುಮತಿ ದೊರಕಿಲ್ಲ. ಹೀಗಾಗಿ ಭಾನುವಾರ ಪಥಸಂಚಲನ ನಡೆಯುವುದೇ ಇಲ್ಲವೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
6 ಸಾವಿರ ರು.ಜಾಹೀರಾತು ಶುಲ್ಕ ಕಟ್ಟಿದ್ದೇವೆ: ಧ್ವಜ, ಬ್ಯಾನರ್ ತೆರವು ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದು ಕಾರ್ಯಕರ್ತರು, ‘ಪುರಸಭೆಗೆ ಈಗಾಗಲೇ 6 ಸಾವಿರ ರು. ಜಾಹೀರಾತು ಶುಲ್ಕ ಪಾವತಿಸಿದ್ದೇವೆ. ಆದರೂ, ಮಧ್ಯರಾತ್ರಿ ಬ್ಯಾನರ್ ತೆರವುಗೊಳಿಸಿದ್ದಾರೆ. ಹೀಗಾಗಿ, ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಮತ್ತೆ ಬ್ಯಾನರ್, ಬಟ್ಟಿಂಗ್ಸ್ ಅಳವಡಿಸಲು ಅನುಮತಿ ಕೋರಿ ಪುರಸಭೆಗೆ ಶನಿವಾರ ಮನವಿ ಮಾಡಿದ್ದಾರೆ. ಅ.18, 19 ಬಾಗೂ 20ನೇ ತಾರೀಖಿನವರೆಗೆ ಧ್ವಜ, ಪರಾರಿ, ಬ್ಯಾನರ್ ಕಟ್ಟಲು ಅನುಮತಿ ನೀಡುವಂತೆ ಕೋರಿದ್ದಾರೆ.
ನಾವೂ ಲಾಠಿ ಹಿಡೀತೇವೆ: ‘ದಲಿತ ಸಂಘಟನೆಗಳಾದ ಭೀಮ್ ಆರ್ಮಿ, ದಲಿತ ಪ್ಯಾಂಥರ್ ಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಚಿತ್ತಾಪುರದಲ್ಲಿ ಪಥ ಸಂಚಲನಕ್ಕೆ ಅನುಮತಿ ಕೊಡಬಾರದು. ಒಂದು ವೇಳೆ, ಅವರಿಗೆ ಅನುಮತಿ ನೀಡುವುದಾದರೆ, ನಾವೂ ಲಾಠಿ ಹಿಡಿದು ಪಥ ಸಂಚಲನ ಮಾಡುತ್ತೇವೆ, ನಮಗೂ ಅನುಮತಿ ಕೊಡಿ’ ಎಂದು ಮನವಿ ಮಾಡಿದ್ದಾರೆ.
- ಪಥ ಸಂಚಲನದ ವೇಳೆ ಲಾಠಿ, ಆಯುಧಗಳ ಬಳಕೆ ಮಾಡುವ ಬಗ್ಗೆ ಉಲ್ಲೇಖವಿಲ್ಲ ಏಕೆ?
- ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬ ಮಾಹಿತಿ ಇಲ್ಲ. ಈ ವಿವರ ನೀಡಿ
- ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಸಿಲ್ಲ
- ಭಾಷಣಕಾರರ ಬಗ್ಗೆ ವಿವರ ಸಲ್ಲಿಸಿಲ್ಲ, ಈ ಪಥಸಂಚಲನದ ಮೂಲ ಉದ್ದೇಶ ಬಗ್ಗೆ ತಿಳಿಸಿಲ್ಲ
- ಕೇಸರಿ ಧ್ವಜ, ಭಗವಾ ಧ್ವಜ, ಬ್ಯಾನರ್, ಬಂಟಿಂಗ್ ಅಳವಡಿಸಲು ಸೂಕ್ತ ಅನುಮತಿ ಪಡೆದಿಲ್ಲ
ಹಿಂದಿನ ಸರ್ಕಾರದ ಅವಧಿಯಲ್ಲಿ ಅನುಮತಿ ಪಡೆಯದೆ ನಮ್ಮವರು ಹಾಕಿದ್ದ ಪೋಸ್ಟರ್ ತೆರವುಗೊಳಿಸಿದ್ದರು. ಅನುಮತಿ ಸಿಕ್ಕರೆ ನಮ್ಮ ಅಡ್ಡಿ ಇಲ್ಲ. ಯಾವುದೇ ಅನಾಹುತ ಆದರೂ ಇಂತಹ ವ್ಯಕ್ತಿ ಹೊಣೆ ಹೊರುತ್ತಾರೆ ಎಂದು ಅನುಮತಿ ಅರ್ಜಿಯಲ್ಲಿ ಆರೆಸ್ಸೆಸ್ ನಮೂದಿಸಲಿ. ಈ ನಿಯಮ ಪಾಲನೆ ಮಾಡಲು ಏನು ಸಮಸ್ಯೆ?
- ಪ್ರಿಯಾಂಕ್ ಖರ್ಗೆ, ಸಚಿವ/ ಚಿತ್ತಾಪುರ ಶಾಸಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.