ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹಾಗು ಮಾಜಿ ಸಂಸದ ರಮೇಶ್ ಕತ್ತಿಗೆ ಬಿಗ್ ಶಾಕ್ ನೀಡಿರುವ ಬಿಜೆಪಿ ಹೈಕಮಾಂಡ್, ಪ್ರಾಮಾಣಿಕ ಕಾರ್ಯಕರ್ತರರಾದ ಅಶೋಕ್ ಗಸ್ತಿ ಹಾಗು ಈರಣ್ಣ ಕಡಾಡಿ ಅವರಿಗೆ ಮಣೆ ಹಾಕಿದೆ. ಹಾಗಾದ್ರೆ ಈ ಇಬ್ಬರು ಯಾರು? ಎಲ್ಲಿವರು? ಎನ್ನುವ ಸಂಪಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು, (ಜೂನ್.08): ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು,ರಾಜ್ಯಸಭಾ ಚುನಾವಣೆಗೆ ಬಿಜೆಪಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡಿದೆ.
ರಾಜ್ಯಸಭಾ ಚುನಾವಣೆಗೆ ಕರ್ನಾಟಕ ಬಿಜೆಪಿ ಕಳುಹಿಸಿದ ಪಟ್ಟಿಯನ್ನು ಹರಿದು ಎಸೆದ ಹೈಕಮಾಂಡ್, ಸಾಮಾನ್ಯರಲ್ಲಿ ಸಾಮಾನ್ಯರನ್ನು ಆಯ್ಕೆ ಮಾಡಿದೆ. ಇಂಥ ಸರ್ಪ್ರೈಸುಗಳೇ ರಾಜಕಾರಣದ ಥ್ರಿಲ್ಲುಗಳು.
ರಾಜ್ಯಸಭೆ ಚುನಾವಣೆ: ಬಿಜೆಪಿಯಿಂದ ಅನಿರೀಕ್ಷಿತ ಅಭ್ಯರ್ಥಿಗಳ ಘೋಷಣೆ!
ಹೈಕಮಾಂಡ್ ಪ್ರಕಟಿಸಿದ ಹೆಸರುಗಳಿಂದ ರಾಜ್ಯ ನಾಯಕರಿಗೆ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ ರಾಜ್ಯಸಭೆಗೆ ಹೈಕಮಾಂಡ್ ಸೂಚಿಸಿರುವ ಅಭ್ಯರ್ಥಿಗು ಪಕ್ಷದ ನಾಯಕರಿಗೇ ಗೊತ್ತಿಲ್ಲ ಅನ್ಸುತ್ತೆ. ಹಾಗಾದ್ರೆ ಈ ಇಬ್ಬರು ಯಾರು? ಎಲ್ಲಿವರು? ಎನ್ನುವ ಸಂಪಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.
ಬಿಜೆಪಿ ಅಭ್ಯರ್ಥಿ ಅಶೋಕ ಗಸ್ತಿ ಯಾರು?
ರಾಯಚೂರು ಮೂಲದ ಅಶೋಕ ಗಸ್ತಿಯವರಿಗೆ ರಾಜ್ಯಸಭಾ ಟಿಕೆಟ್ ಘೋಷಣೆ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಅಚ್ಚರಿಯ ನಡೆ ಪ್ರದರ್ಶನ ಮಾಡಿದೆ. ಸವಿತ ಸಮಾಜದವರಾಗಿರುವ ಅಶೋಕ್ ಗಸ್ತಿ ಅವರು ಬಿಎ.ಎಲ್‌ಎಲ್‌ಬಿ ಮುಗಿಸಿದ್ದು, ಮೊದಲಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿದ್ದರು.
ಇದೀಗ ಪ್ರಸ್ತುತ ಬಿಜೆಪಿ ಬಳ್ಳಾರಿ ಪ್ರಭಾರಿಗಳಾಗಿದ್ದಾರೆ. ಹಾಗೂ ರಾಜ್ಯ ಬಿಜೆಪಿ ಹಿಂದುಳಿದ ವರ್ಗ ಮೋರ್ಚದ ಮಾಜಿ ಪ್ರಧಾನ ಕಾರ್ಯದರ್ಶಿಗಳು. ಮತ್ತು ರಾಜ್ಯ ಹಿಂದುಳಿದ ವರ್ಗ ಆಯೊಗದ ಅಧ್ಯಕ್ಷರು. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಗಸ್ತಿ ಅವರು ಬಿಜೆಪಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ಹೈಕಮಾಂಡ್ ಮಣೆ ಹಾಕಿದೆ.
ಈರಣ್ಣ ಕಡಾಡಿ ಮಾಹಿತಿ:
ಈರಣ್ಣ ಕಡಾಡಿ ಮೊದಲಿನಿಂದಲೂ ಆರ್‌ಎಸ್‌ಎಸ್, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದಲ್ಲಿ ಈರಣ್ಣ ಕಡಾಡಿ ಅವರು 1966ರ ಜೂನ್ 01 ಜನಿಸಿದ್ದಾರೆ. 1989 ರಿಂದಲೂ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಅರಭಾಂವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. ಜೊತೆಗೆ ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ನಂತರ 2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿ.ಪಂ.ಅಧ್ಯಕ್ಷರಾಗಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಈರಣ್ಣ ಕಡಾಡಿ ಅವರು, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿದ್ದಾರೆ.