
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಸಮನ್ವಯದ ಮಾತುಗಳು ಕೇಳಿಬಂದರೂ, ಆಂತರಿಕ ರಾಜಕೀಯ ಗುದ್ದಾಟ ಮತ್ತು ಅಧಿಕಾರದ ರೇಸ್ ಸದ್ದು ಮಾಡುತ್ತಲೇ ಇದೆ. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಇತ್ತೀಚಿನ ಟ್ವೀಟ್ ಈ ರಾಜಕೀಯ ಪರಿಸ್ಥಿತಿಗೆ ಮತ್ತಷ್ಟು ತುಪ್ಪ ಸುರಿದಿದ್ದು, ಸಿಎಂ ಸಿದ್ದರಾಮಯ್ಯನವರು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗಿಂತ ಹೆಚ್ಚಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಬಿಂಬಿಸಲು ಹೊಸ ನಾಟಕವನ್ನೇ ಆಡಿಸುತ್ತಿದ್ದಾರೆ ಎಂದು ನೇರವಾಗಿ ಗಂಭೀರ ಆರೋಪ ಮಾಡಿದ್ದಾರೆ.
ಅಶೋಕ್ ಅವರು ಟ್ವೀಟ್ ಮಾಡಿರುವ ಪ್ರಕಾರ, ಸಚಿವ ಪ್ರಿಯಾಂಕ್ ಖರ್ಗೆ ಅವರು ಪದೇ ಪದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿರೋಧಿ ಪತ್ರಗಳನ್ನು ಬರೆಯುವುದು ಮತ್ತು ಸಂಘದ ಬಗ್ಗೆ ನಿಂದನೀಯ ಹೇಳಿಕೆಗಳನ್ನು ನೀಡುವುದು ಕೇವಲ ರಾಜಕೀಯ ನಡೆಯಲ್ಲ. ಇದು, ಕಾಂಗ್ರೆಸ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಓವರ್‌ಟೇಕ್ ಮಾಡಿ ಮುಖ್ಯಮಂತ್ರಿ ಹುದ್ದೆಗೆ ಏರುವ ಕನಸು ಕಾಣುತ್ತಿರುವ ಪ್ರಯತ್ನದ ಭಾಗವಾಗಿದೆ ಎಂದು ತಿಳಿದಿದ್ದಾರೆ.
ಈ ನಾಟಕಕ್ಕೆ ಪೂರಕವೆಂಬಂತೆ ಡಿ.ಕೆ. ಶಿವಕುಮಾರ್ ಅವರ ಕೆಲವು ನಡೆಗಳನ್ನು ಅಶೋಕ್ ಉಲ್ಲೇಖಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಸಂಘ ಗೀತೆ ಹಾಡುವುದು, ಇಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು, ಕುಂಭ ಮೇಳಕ್ಕೆ ಭೇಟಿ ನೀಡುವುದು ಮತ್ತು ಸಂಸ್ಕೃತ ಶ್ಲೋಕಗಳನ್ನು ಉಚ್ಚರಿಸುವಂತಹ ಕಾರ್ಯಕ್ರಮಗಳು ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗರ ಉಂಟು ಮಾಡುತ್ತಿವೆ. ಇದನ್ನೇ ನೆಪವಾಗಿಟ್ಟುಕೊಂಡು ಡಿಕೆಶಿ ಅವರಿಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಬದ್ಧತೆ ಇಲ್ಲ ಎಂಬ ಹಣೆಪಟ್ಟಿ ಕಟ್ಟಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದರ ಜೊತೆಗೆ ಪ್ರಿಯಾಂಕ್ ಖರ್ಗೆ ಅವರನ್ನೇ 'ಕಟ್ಟರ್ ಆರ್‌ಎಸ್‌ಎಸ್ ವಿರೋಧಿ' ಎಂದು ಬಿಂಬಿಸುವ ಮೂಲಕ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುವ ಚಾಣಾಕ್ಷ ರಾಜಕೀಯ ತಂತ್ರಗಾರಿಕೆಯನ್ನು ಸಿದ್ದರಾಮಯ್ಯನವರು ರೂಪಿಸಿದಂತೆ ಕಾಣುತ್ತದೆ ಎಂಬುದು ಆರ್. ಅಶೋಕ್ ಅವರ ನೇರ ಆರೋಪವಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವುದು ಮತ್ತು ಸಿಎಂ ಸಿದ್ದರಾಮಯ್ಯನವರೊಂದಿಗೆ ನಿಕಟ ಸಂಪರ್ಕ ಹೊಂದಿರುವುದು, ಅವರಿಗೆ ರಾಜಕೀಯದಲ್ಲಿ ಸಿಎಂ ಆಶೀರ್ವಾದದ ಹಿನ್ನೆಲೆಯಲ್ಲಿ ಪ್ರಮುಖ ಸ್ಥಾನ ನೀಡುವ ಸೂಚನೆಯನ್ನು ನೀಡುತ್ತಿದೆ. ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಅವರು ತಮ್ಮ 'A symbol of loyality' ಎಂಬ ಪುಸ್ತಕ ಬರೆಸಿ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು ಹೈಕಮಾಂಡ್ ಮಟ್ಟದಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬಾರ್ಥದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ನಡುವೆ ನಡೆಯುತ್ತಿರುವ ಅಧಿಕಾರದ ಈ ಆಂತರಿಕ ಕಾದಾಟವು ಕರ್ನಾಟಕದ ಕಾಂಗ್ರೆಸ್ ರಾಜಕೀಯದಲ್ಲಿ ಅತ್ಯಂತ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ಅಂತಿಮವಾಗಿ ಯಾರು ಸಿಎಂ ಕುರ್ಚಿಯತ್ತ ಸಾಗುತ್ತಾರೆ ಎಂಬ ನಿರ್ಣಾಯಕ ಕ್ಲೈಮ್ಯಾಕ್ಸ್‌ಗೆ ಕಾರಣವಾಗಲಿದೆ ಎಂಬುದಂತೂ ಗ್ಯಾರಂಟಿ. ಈ ರಾಜಕೀಯ ರಣರಂಗದ ಮುಂದಿನ ಹೆಜ್ಜೆಗಳು ಕೇವಲ ಕಾಂಗ್ರೆಸ್ ಮಾತ್ರವಲ್ಲದೆ ಇಡೀ ರಾಜ್ಯ ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.