'ಸಚಿವನಾಗಿಲ್ಲ ಅಂತ ನಿರಾಶೆಯಾಗಿಲ್ಲ, ನಾನು ಆಶಾವಾದಿ, ರಾಜಕೀಯ ನಿವೃತ್ತಿಯಾಗಲ್ಲ'

By Suvarna NewsFirst Published Aug 11, 2021, 11:54 AM IST
Highlights

* ದೆಹಲಿಯಲ್ಲಿ ಶಾಸಕ ಎಂಪಿ ರೇಣುಕಚಾರ್ಯ ಹೇಳಿಕೆ

* ಸಚಿವ ಸಂಪುಟ ರಚನೆ ವಿಚಾರ, ಸಿಗದ ಅವಕಾಶ

* ಸಚಿವನಾಗಿಲ್ಲ ಅಂತ ನಿರಾಶೆಯಾಗಿಲ್ಲ, ನಾನು ಜೀವನದಲ್ಲಿ ಆಶಾವಾದಿ 

* ನಾನು ರಾಜಕೀಯ ನಿವೃತ್ತಿಯಾಗಲ್ಲ

ಬೆಂಗಳೂರು(ಆ.11): ತಾವು ಬಯಸಿದ ಖಾತೆ ಸಿಗಲಿಲ್ಲ ಎಂದು ಅಸಮಾಧಾನಗೊಂಡಿರುವ ಆನಂದ್ ಸಿಂಗ್ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ ಮತ್ತೊಂದು ಮಾಹಿತಿ ಅನ್ವಯ ಈಗಾಗಲೇ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನದ ಜೊತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ. ಇದಕ್ಕೆ ತಕ್ಕಂತೆ ಹೊಸಪೇಟೆಯ ರಾಣಿಪೇಟೆಯಲ್ಲಿರುವ ಅವರ ಶಾಸಕರ ಕಚೇರಿಯ ಫಲಕವೂ ತೆರವುಗೊಂಡಿದೆ. ಸದ್ಯ ಈ ಎಲ್ಲಾ ವದಂತಿಗಳ ಮಧ್ಯೆ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕೂಡಾ ತಮಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಮಾತನಾಡಿದ್ದಾರೆ. ಆದರೆ ಸಚಿವ ಸ್ಥಾನ ಸಿಗದ್ದಕ್ಕೆ ನಿರಾಶೆಯಾಗಿಲ್ಲ, ನಾನು ಜೀವನದಲ್ಲಿ ಆಶಾವಾದಿ ಎಂದಿದ್ದಾರೆ. ಜೊತೆಗೇ ಆನಂದ್ ಸಿಂಗ್ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹೌದು ಕರ್ನಾಟಕ ಸಂಪುಟ ರಚನೆ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಶಾಸಕ ಎಂ. ಪಿ. ರೇಣುಕಾಚಾರ್ಯ ಸಚಿವನಾಗಿಲ್ಲ ಅಂತ ನಿರಾಶೆಯಾಗಿಲ್ಲ, ನಾನು ಜೀವನದಲ್ಲಿ ಆಶಾವಾದಿ. ಸಚಿವ ಸ್ಥಾನ ಸಿಗುತ್ತೆ ಅಂತ ನನಗೆ ಮತ್ತು ನನ್ನ ಜನರಿಗೆ ನಿರೀಕ್ಷೆ ಇತ್ತು. ಹೀಗಂತ ಯಾವುದೇ ಕಾರಣಕ್ಕೂ ನಾನು ರಾಜಕೀಯ ನಿವೃತ್ತಿಯಾಗಲ್ಲ. ನಾನು ಜೀವನದಲ್ಲಿ ಯಾವತ್ತು ಅವಕಾಶವಾದಿ ರಾಜಕೀಯ ಮಾಡಿಲ್ಲ ಎಂದಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಬಂದಿದ್ದೇನೆ

ಅಲ್ಲದೇ ಸಂಪುಟ ರಚನೆ ವಿಚಾರವಾಗಿ ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಬಂದಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಅವಕಾಶ ಸಿಕ್ಕರಷ್ಟೇ ವರಿಷ್ಠರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಯಡಿಯೂರಪ್ಪ ಬಿಜೆಪಿಯ ಪ್ರಮುಖ ನಾಯಕರು. ಮಂತ್ರಿಯಾಗದಿದ್ದರೇನು ಶಾಸಕನಾಗಿದ್ದೇನೆ, ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆನಂದ್ ಸಿಂಗ್ ಜೊತೆ ಮಾತು

ಇನ್ನು ಅಸಮಾಧಾನಗೊಂಡಿರುಉವ ಆನಂದ್ ಸಿಂಗ್ ವಿಚಾರವಾಗಿ ಮಾತನಾಡಿದ ರೇಣುಕಾಚಾರ್ಯ 'ಆನಂದ ಸಿಂಗ್ ಜೊತೆಗೆ ನಾನು ಮತ್ತು ರಾಜುಗೌಡರು ಮಾತನಾಡುತ್ತೇನೆ. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಅಂತ ವಿನಂತಿ ಮಾಡುತ್ತೇವೆ. ಅವರು ನಮ್ಮ ಸ್ನೇಹಿತರು, ಈಗಾಗಲೇ ಸಿಎಂ, ಬಿಎಸ್‌ವೈ ಎಲ್ಲ ಮಾತನಾಡಿದ್ದಾರೆ ನಾವೂ ಮಾತನಾಡಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

ಆನಂದ್ ಸಿಂಗ್ ಪರ ರೇಣು ಮಾತು

ಇದೇ ವೇಳೆ ಆನಂದ್ ಸಿಂಗ್ ಪರವಾಗಿ ಮಾತನಾಡಿದ ರೇಣುಕಾಚಾರ್ಯ ಸಮ್ಮಿಶ್ರ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಆನಂದ್ ಸಿಂಗ್ ಪಾತ್ರ ಮಹತ್ವದಾಗಿತ್ತು. ನಾನು ಅವರ ಪರ ಬ್ಯಾಟಿಂಗ್ ಮಾಡ್ತಿಲ್ಲ. ಆದರೆ ಆನಂದ್ ಸಿಂಗ್ ರಾಜಿನಾಮೆ ಕೊಟ್ಟ ಮೇಲೆ ಎಲ್ಲರು ರಾಜೀನಾಮೆ ಕೊಟ್ಟಿದ್ದರು. ಕೆಲಸ ಮಾಡಲು ಯಾವ ಖಾತೆ ಆದ್ರೆ ಏನು? ಆದ್ರೆ ಅವರಿಗೆ ದೊಡ್ಡ ಖಾತೆ ಸಿಗುತ್ತೆ ಅಂತ ಇತ್ತು ಅದು ಸಿಕ್ಕಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಮೂರ್ನಾಲ್ಕು ಬಾರಿ ಖಾತೆ ಬದಲಾಗಿತ್ತು. ಆ ಸಂದರ್ಭದಲ್ಲಿ ಅವರಿಗೆ ನೋವಿತ್ತು. ಯಡಿಯೂರಪ್ಪನವರು ನೋಡಣ ಅಂತ ಹೇಳಿದ್ರು. ಆದರೀಗ ಮತ್ತೆ ಬೇರೆ ಖಾತೆ ಸಿಗಬಹುದು ಅಂತ ಇತ್ತು, ನೋವಾಗಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪನವರು, ಅರುಣ್ ಸಿಂಗ್ ಎಲ್ಲಾ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. 
 

click me!