
ರಾಣೆಬೆನ್ನೂರು[ನ.27]: ಸಾಲ ಮನ್ನಾ ವಿಚಾರವಾಗಿ ತಮ್ಮ ವಿರುದ್ಧ ಕಿಡಿಕಾರಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನಾನು ನನ್ನ ಅಪ್ಪನ ಹಣದಿಂದ ಸಾಲ ಮನ್ನಾ ಮಾಡಲಿಲ್ಲ. ಆದರೆ, ‘ಮಿಸ್ಟರ್ ಯಡಿಯೂರಪ್ಪ ನೀನೇನು ಮಾಡಿದ್ದೀಯಪ್ಪ? ಹರಕಲು ಸೀರೆ, ಮುರುಕಲು ಸೈಕಲ್ ಕೊಟ್ಟೆ’ ಎಂದು ಕಿಡಿಕಾರಿದ್ದಾರೆ.
ರಾಣೆಬೆನ್ನೂರಿನಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಸಿದ್ದರಾಮಯ್ಯ ತಮ್ಮ ಅಪ್ಪನ ಹಣದಿಂದ ಸಾಲ ಮನ್ನಾ ಮಾಡಲಿಲ್ಲ ಎಂಬ ಯಡಿಯೂರಪ್ಪ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ನಾನು ನನ್ನ ಅಪ್ಪನ ಮನೆಯಿಂದ ಹಣ ತಂದು ರೈತರ ಸಾಲ ಮನ್ನಾ ಮಾಡಿಲ್ಲ. ನಿಮ್ಮ (ಜನರ) ಹಣವನ್ನು ನಿಮಗೇ (ಜನರಿಗೆ) ಖರ್ಚು ಮಾಡಿದ್ದೇನೆ. ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ .30 ಸಾವಿರ ಕೋಟಿ ಸಾಲ ಮನ್ನಾ ಮಾಡಿ ಹೋದರು. ನಂತರ ನಾನು ಮುಖ್ಯಮಂತ್ರಿ ಆಗಿ ಆ ಹಣ ತೀರಿಸಬೇಕಾಯಿತು. ಮಿಸ್ಟರ್ ಯಡಿಯೂರಪ್ಪ ನೀನೇನು ಮಾಡಿದ್ದೀಯಪ್ಪ? ಹರಕಲು ಸೀರೆ, ಮುರುಕಲು ಸೈಕಲ್ ಕೊಟ್ಟೆ’ ಎಂದು ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆಪರೇಷನ್ ಮಾಡಿದ್ದೇ ಯಡಿಯೂರಪ್ಪ ಸಾಧನೆ ಎಂದು ಲೇವಡಿ ಮಾಡಿದರು.
ಉಪಚುನಾವಣೆಯನ್ನು ಯಾರೂ ಬಯಸಿರಲಿಲ್ಲ. 17 ಶಾಸಕರ ಕೈಯಿಂದ ರಾಜೀನಾಮೆ ಕೊಡಿಸಿದ್ದರಿಂದ ಚುನಾವಣೆ ಬಂದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಚುನಾಯಿತ ಪ್ರತಿನಿಧಿಗಳಿಗೆ ಹಣ ಕೊಟ್ಟು, ಆಮಿಷವೊಡ್ಡಿ ಪಕ್ಷಾಂತರ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಂಟಿದ ರೋಗ. ಇದಕ್ಕಾಗಿಯೇ 1985ರಲ್ಲಿ ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ಸಂವಿಧಾನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದರು. ಸಂವಿಧಾನದ 10ನೇ ಶೆಡ್ಯೂಲ್ ಉಲ್ಲಂಘನೆ ಮಾಡಿದ್ದಾರೆಂದು 17 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರು. ಈ 17 ಜನ ಅನರ್ಹರು ಶಾಸಕರಾಗಲು ನಾಲಾಯಕ್ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.