ಸಿದ್ದು ಒಂಟಿಯಲ್ಲ, ಜೊತೆಗೆ ನಾವಿದ್ದೇವೆ: ಪರಮೇಶ್ವರ್

By Web DeskFirst Published Dec 2, 2019, 7:47 AM IST
Highlights

ಸಿದ್ದು ಒಂಟಿಯಲ್ಲ, ಜೊತೆಗೆ ನಾವಿದ್ದೇವೆ: ಪರಂ| ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಏಕಾಂಗಿ ಎಂಬುದು ಸುಳ್ಳು| ನನಗೆ ಹುಷಾರಿರಲಿಲ್ಲ, ಹೀಗಾಗಿ ಪ್ರಚಾರದಿಂದ ದೂರ ಉಳಿದಿದ್ದೆ

ಬೆಂಗಳೂರು[ಡಿ.02]: ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಏಕಾಂಗಿಯಾಗಿಲ್ಲ, ಅವರು ಏಕಾಂಗಿಯಾಗಲು ಬಿಡುವುದೂ ಇಲ್ಲ. ನಾವೆಲ್ಲರೂ ಸಿದ್ದರಾಮಯ್ಯ ಜತೆಯಲ್ಲೇ ಇದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ ಎಂಬುದು ಸುಳ್ಳು. ನಾವೆಲ್ಲರೂ ಅವರ ಜೊತೆಯೇ ಇದ್ದೇವೆ. ನನಗೆ ಆರೋಗ್ಯ ಸಮಸ್ಯೆ ಉಂಟಾಗಿ ಪ್ರಚಾರದಿಂದ ದೂರ ಉಳಿದಿದ್ದೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದರೂ ರೈಲಿನಲ್ಲೇ ಹೋಗಿ ಹುಣಸೂರಿನಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ನಾವೆಲ್ಲರೂ ಸಿದ್ದರಾಮಯ್ಯ ಜತೆಯಲ್ಲೇ ಇದ್ದೇವೆ ಎಂದು ಸ್ಪಷ್ಡಪಡಿಸಿದರು.

ರಾಜ್ಯದ ಭವಿಷ್ಯ ನಿರ್ಧರಿಸುವುದರಿಂದ ಕಾಂಗ್ರೆಸ್‌ ಪಾಲಿಗೆ ಉಪಚುನಾವಣೆ ಬಹಳ ಗಂಭೀರ ಚುನಾವಣೆ. ಬಿಜೆಪಿಯವರು ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿದ್ದು ಏಕೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಉತ್ತಮ ಆಡಳಿತ ಕೊಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿ ಸರ್ಕಾರ ರಚನೆಯಾದ ಬಳಿಕ ನಡೆದ ಬೆಳವಣಿಗೆಗಳಿಂದ ರೋಸಿ ಹೋಗಿದ್ದಾರೆ. ಪ್ರವಾಹ ಸಂತ್ರಸ್ತರ ನಿಭಾಯಿಸಿದ ರೀತಿಯನ್ನು ಜನರು ಗಮನಿಸಿದ್ದೀರಿ. ಇಂತಹ ದುರಾಡಳಿತ ನಿಮಗೆ ಬೇಕಾ ಎಂದು ಪರಮೇಶ್ವರ್‌ ಜನರನ್ನು ಪ್ರಶ್ನಿಸಿದರು.

ಪ್ರಸ್ತುತ ಸರ್ಕಾರದಲ್ಲಿ ತೆರಿಗೆ ಸಂಗ್ರಹವೇ ಶೇ.40 ದಾಟಿಲ್ಲ. ಹಣ ಇದ್ದರೆ ಮಾತ್ರ ಖರ್ಚು ಮಾಡಬಹುದು. ಆದರೆ ತೆರಿಗೆ ಸಂಗ್ರಹವನ್ನೇ ಮಾಡದಿದ್ದರೆ ಅಧಿಕಾರ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಕಷ್ಟುಯೋಜನೆ ನೀಡಿದ್ದರು. ನಾವು ಮೈತ್ರಿ ಸರ್ಕಾರದಲ್ಲಿ ಸಹ ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದೆವು. ಆದರೆ ಪ್ರಸ್ತುತ ಅಭಿವೃದ್ಧಿ ಸ್ಥಗಿತಗೊಂಡಿದೆ. ಇಂತಹ ದುಸ್ಥಿತಿಗೆ ಕಾರಣವಾದ ಅನರ್ಹರನ್ನು ಜನರು ಗೆಲ್ಲಿಸುತ್ತಾರಾ ಎಂದು ಪ್ರಶ್ನಿಸಿದರು.

ಮುಂದೆ ಮೈತ್ರಿ ಸರ್ಕಾರ ಅಥವಾ ವಿರೋಧ ಪಕ್ಷ

ಉಪ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಮೈತ್ರಿ ಸರ್ಕಾರ ರಚನೆ ಅಥವಾ ವಿರೋಧಪಕ್ಷದ ಸ್ಥಾನದಲ್ಲಿ ಕೂರುವ ಎರಡು ಆಯ್ಕೆಗಳಿವೆ. ಯಾವ ಆಯ್ಕೆ ಸೂಕ್ತ ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್‌ ಜತೆ ಮೈತ್ರಿ ರಚನೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸದೆ ತಡೆದರೆ ಕಾಂಗ್ರೆಸ್‌ಗೆ ಎರಡು ಆಯ್ಕೆಗಳಿರುತ್ತವೆ. ಮೊದಲನೆಯದ್ದು ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವುದು. ಎರಡನೆಯದ್ದು ವಿರೋಧಪಕ್ಷದ ಸ್ಥಾನದಲ್ಲಿ ಕೂರುವುದು. ಯಾವುದು ಸೂಕ್ತ ಎಂಬ ಬಗ್ಗೆ ಹೈಕಮಾಂಡ್‌ ತೀರ್ಮಾನಿಸುತ್ತದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಿದ್ಧಾಂತಗಳು ಒಂದೇ ಆಗಿದ್ದರಿಂದ ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದೆವು. ಈ ಬಗ್ಗೆ ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!