
ಬೆಂಗಳೂರು[ಜ.27]: ಸಂಪುಟ ವಿಸ್ತರಣೆ ಗೋಜಲಾಗುತ್ತಿರುವ ಬೆನ್ನಲ್ಲೇ ಹಿರಿಯ ಸಚಿವರು ತಮ್ಮ ಸ್ಥಾನ ತ್ಯಜಿಸಿ ಉಳಿದವರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಚರ್ಚೆ ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಆರಂಭವಾಗಿದೆ. ಪಕ್ಷದಲ್ಲಿನ ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂದು ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದು ಇದರ ಬೆನ್ನಲ್ಲೇ ಹುದ್ದೆ ತ್ಯಾಗದ ಬಗ್ಗೆ ಬಿಜೆಪಿ ನಾಯಕರಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಆದರೆ, ಈ ಕೂಗು ಎಷ್ಟರಮಟ್ಟಿಗೆ ಕಾರ್ಯಗತಗೊಳ್ಳಲಿದೆ ಎಂಬುದು ಸ್ಪಷ್ಟವಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಇವರೆಲ್ಲ ಸಚಿವರಾಗಿ ಇನ್ನೂ ಆರು ತಿಂಗಳೂ ಆಗಿಲ್ಲ. ಹೀಗಾಗಿ, ಇಷ್ಟುಬೇಗನೆ ಸಚಿವ ಸ್ಥಾನ ತ್ಯಜಿಸಬೇಕು ಎಂಬ ಕೂಗಿಗೆ ಬಲ ಸಿಗುತ್ತದೆ ಎಂಬುದು ಅನುಮಾನವಾಗಿದೆ.
ಭಾನುವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ ಅವರು, ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ತಮ್ಮ ಸರ್ಕಾರ ರಾಜ್ಯದಲ್ಲಿ ಮುಂದಿನ ಮೂರು ವಷÜರ್‍ಗಳವರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ಅಧಿಕಾರದಲ್ಲಿರಲು ನಾನು ತ್ಯಾಗ ಮಾಡಿದ್ದೇನೆ. ಆದ್ದರಿಂದ ಪಕ್ಷದಲ್ಲಿನ ಹಿರಿಯರು ಸಚಿವ ಸ್ಥಾನ ತ್ಯಾಗ ಮಾಡಬೇಕು ಎಂದು ತಿಳಿಸಿದರು.
ಸಚಿವರಾಗುವ ಅರ್ಹತೆ ಎಲ್ಲರಲ್ಲೂ ಇದೆ. ನಾನು ರಾಜ್ಯದಿಂದ ಮೂರನೇ ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ನನಗೂ ಅರ್ಹತೆ ಇದೆ. ಆದರೆ, ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರ ಮುಂದುವರಿಸಲಿ ಎನ್ನುವ ಉದ್ದೇಶದಿಂದ ನಾನು ಸಚಿವ ಸ್ಥಾನ ತ್ಯಾಗ ಮಾಡಿದ್ದೇನೆ. ಅದಕ್ಕಾಗಿಯೇ ನಾನು ಮುಖ್ಯಮಂತ್ರಿಗಳ ಮೇಲೆ ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕಿಲ್ಲ ಎಂದರು.
'ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ವಿಚಾರದಲ್ಲಿ ಸಿಎಂ ನಿರ್ಧಾರವೇ ಅಂತಿಮ'
ಸಚಿವ ಸ್ಥಾನ ಬಿಡಲು ಸಿದ್ಧ - ಮಾಧುಸ್ವಾಮಿ:
ಯತ್ನಾಳ ಹೇಳಿಕೆ ಬೆನ್ನಲ್ಲೇ ಸಚಿವ ಸ್ಥಾನವಷ್ಟೇ ಅಲ್ಲ, ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಇರಲಿ ಎಂಬುದು ನನ್ನ ಅಪೇಕ್ಷೆಯಾಗಿದೆ. ಹೀಗಾಗಿ ಸಚಿವ ಸ್ಥಾನ ಕೇಳಿದರೆ ಸಂತೋಷದಿಂದ ಬಿಟ್ಟು ಕೊಡುವೆ ಎಂದು ತಿಳಿಸಿದರು.
ಪಕ್ಷದ ನಿರ್ಧಾರಕ್ಕೆ ಬದ್ಧ- ಕಾರಜೋಳ:
ಪಕ್ಷದ ನಿರ್ಣಯಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ನಿರ್ಣಯ ಬಿಟ್ಟು ನಡೆದುಕೊಳ್ಳುವುದಿಲ್ಲ. ಅದರಲ್ಲೂ ನಾನು ಪಕ್ಷದ ನಿರ್ಣಯಕ್ಕೆ ನೂರಕ್ಕೆ ನೂರರಷ್ಟುಬದ್ಧನಿರುವ ಮನುಷ್ಯ. ಸಚಿವ ಸ್ಥಾನದಲ್ಲಿ ಯಾರಿರಬೇಕು ಎಂಬುವುದನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಣಯಿಸುತ್ತಾರೆ ಎಂದರು.
ಸಂಪುಟ ವಿಸ್ತರಣೆ: ಯಾರಿಗೆ ಚಾನ್ಸ್, ಯಾರಿಗಿಲ್ಲ? ಕಡ್ಡಿ ಮುರಿದಂತೆ ಹೇಳಿದ ಅಶೋಕ್
ಸಿಎಂ ನಿರ್ಣಯಕ್ಕೆ ಬದ್ಧ- ಪಾಟೀಲ್:
ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಕೈಬಿಡಬೇಕು ಎನ್ನುವ ಪರಮಾಧಿಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರದ್ದು. ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಗದಗದಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ. ಸರ್ಕಾರದ ಪ್ರತಿನಿಧಿಗಳಾಗಿ ನಾವೆಲ್ಲ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಬದ್ಧರಾಗಬೇಕಿರುವುದು ನಮ್ಮ ಕರ್ತವ್ಯ. ಯಾರು ಸಂಪುಟದಲ್ಲಿರಬೇಕು, ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಅನ್ನೋದು ಅವರ ವಿವೇಚನೆಗೆ ಬಿಟ್ಟದ್ದು ಎಂದರು.
ಸಂಪುಟ ವಿಸ್ತರಣೆ: ಸಚಿವ ಸ್ಥಾನಕ್ಕೆ ಓರ್ವ ಶಾಸಕನ ಹೆಸರು ಬಹಿರಂಗಗೊಳಿಸಿದ ಸಿಎಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.