ಬಿಜೆಪಿ ಶಾಸಕರ ಗುಂಪು ರಹಸ್ಯ ಸಭೆ, ಪಂಚಮಸಾಲಿ ಸ್ವಾಮೀಜಿ ಭಾಗಿ!

By Kannadaprabha NewsFirst Published Feb 19, 2020, 8:18 AM IST
Highlights

ಬಿಜೆಪಿ ಶಾಸಕರ ಗುಂಪು ರಹಸ್ಯ ಸಭೆ| ಮೊನ್ನೆ ರಾತ್ರಿ ಶೆಟ್ಟರ್‌ ಮನೆಯಲ್ಲಿ, ನಿನ್ನೆ ಹೋಟೆಲ್‌ನಲ್ಲಿ ಸಭೆ

ಬೆಂಗಳೂರು[ಫೆ.19]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಕಾರ್ಯವೈಖರಿ ವಿರುದ್ಧ ಅನಾಮಧೇಯ ಪತ್ರವೊಂದು ಬಹಿರಂಗಗೊಂಡ ಬೆನ್ನಲ್ಲೇ ಮಂಗಳವಾರ ರಾತ್ರಿ ಆಡಳಿತಾರೂಢ ಬಿಜೆಪಿಯ ಲಿಂಗಾಯತ ಶಾಸಕರು ಡಿನ್ನರ್‌ ಮೀಟಿಂಗ್‌ ನಡೆಸಿರುವುದು ಕುತೂಹಲ ಮೂಡಿಸಿದೆ.

"

ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯದ ಬಿಜೆಪಿ ಶಾಸಕರು ಸಭೆ ನಡೆಸಿದ್ದು, ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ನೇತೃತ್ವ ವಹಿಸಿದ್ದರು.

ಸೋಮವಾರ ರಾತ್ರಿ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ನಿವಾಸದಲ್ಲಿ ಹಲವು ಶಾಸಕರು ಸೇರಿ ಸಭೆ ನಡೆಸಿದ್ದರು. ಆ ಸಭೆಯಲ್ಲೂ ಲಿಂಗಾಯತ ಸಮುದಾಯದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಮಂಗಳವಾರದ ಸಭೆಯಲ್ಲಿ ಶಾಸಕರಾದ ಮುರುಗೇಶ್‌ ನಿರಾಣಿ, ಬಸನಗೌಡ ಪಾಟೀಲ್‌ ಯತ್ನಾಳ, ಸಿದ್ದು ಸವದಿ, ಮಹೇಶ್‌ ಕುಮಟಳ್ಳಿ, ಶಂಕರಗೌಡ ಪಾಟೀಲ್‌ ಮುನೇನಕೊಪ್ಪ, ಸಿ.ಎಂ.ಲಿಂಬಣ್ಣವರ್‌, ಸಂಸದ ಕರಡಿ ಸಂಗಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್‌ ಲಿಂಬಿಕಾಯಿ ಮತ್ತಿತರರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮೇಲ್ನೋಟಕ್ಕೆ ತಮ್ಮ ಸಮುದಾಯದ ಹಿತ ಕಾಪಾಡುವ ಹಾಗೂ ಸರ್ಕಾರದಲ್ಲಿ ಪ್ರಾಧಾನ್ಯತೆ ಪಡೆಯುವ ಸಭೆ ಇದಾಗಿತ್ತು ಎಂದು ಬಹಿರಂಗವಾಗಿ ಹೇಳಲಾಗುತ್ತಿದ್ದರೂ ಆಂತರ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತ ವೈಖರಿ ವಿರುದ್ಧ ಅಸಮಾಧಾನದ ಮಾತುಗಳು ವ್ಯಕ್ತವಾಗಿವೆ ಎಂದು ತಿಳಿದು ಬಂದಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಸಮುದಾಯಕ್ಕೆ ಪ್ರಾಧಾನ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಹೈಕಮಾಂಡ್‌ ಮೇಲೆ ಒತ್ತಡ ತರಲಾಗುವುದು. ಇದಕ್ಕಾಗಿ ವರಿಷ್ಠರ ಬಳಿ ಶೀಘ್ರದಲ್ಲೇ ನಿಯೋಗವೊಂದನ್ನು ಕರೆದೊಯ್ಯಲಾಗುವುದು ಎಂದು ತಿಳಿಸಿದರು.

ಶಾಸಕ ಮಹೇಶ್‌ ಕುಮಟಳ್ಳಿ ಅವರಿಗೆ ಕೂಡಲೇ ಸಚಿವ ಸ್ಥಾನ ನೀಡಬೇಕು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ್‌ ಲಿಂಬಿಕಾಯಿ ಅವರಿಗೆ ವಿಧಾನಪರಿಷತ್‌ ಸದಸ್ಯ ಸ್ಥಾನ ಕೊಡಬೇಕು. ಮುಂದಿನ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ವೇಳೆ ಪಂಚಮಸಾಲಿ ಸಮುದಾಯದ ಶಾಸಕರನ್ನು ಪರಿಗಣಿಸಬೇಕು. ಜೊತೆಗೆ ಪಂಚಮಸಾಲಿ ಸಮುದಾಯವನ್ನು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಿ ರಾಜಕೀಯ ಶಕ್ತಿ ನೀಡಬೇಕು ಎಂದು ಒತ್ತಾಯಿಸಿದರು.

click me!