ಡಿಫ್ಯಾಕ್ಟೋ ಸಿಎಂ, ಗವರ್ನರ್: ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಪತ್ರ ಸಂಚಲನ!

By Kannadaprabha NewsFirst Published Feb 19, 2020, 8:00 AM IST
Highlights

ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಪತ್ರ ಸಂಚಲನ| ಬಿಎಸ್‌ವೈ ನಿವೃತ್ತರಾಗಿ ಗೌರ್ನರ್‌ ಆಗಲಿ| ವಿಜಯೇಂದ್ರ ಡಿಫ್ಯಾಕ್ಟೋ ಸಿಎಂ| ಸಿಎಂ ಹಾಗೂ ಪುತ್ರನನ್ನು ಗುರಿಯಾಗಿಸಿ ಅನಾಮಧೇಯ ಪತ್ರ ಬಿಡುಗಡೆ

 ಬೆಂಗಳೂರು[ಫೆ.19]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಡಳಿತವೈಖರಿ ಮತ್ತು ಪುತ್ರ ಬಿ.ವೈ.ವಿಜಯೇಂದ್ರ ಅವರು ಅದರಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅನಾಮಧೇಯ ಪ್ರಕಟಣೆಯೊಂದು ಆಡಳಿತಾರೂಢ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಒಟ್ಟು ನಾಲ್ಕು ಪುಟಗಳ ಪತ್ರದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನೇ ಗುರಿಯಾಗಿಸಿಕೊಂಡು ಬರೆದಿರುವ ಈ ಪ್ರಕಟಣೆ ಮಂಗಳವಾರ ಮಾಧ್ಯಮ ಸಂಸ್ಥೆಗಳ ಕೈಸೇರಿದ್ದು, ಇದುವರೆಗೂ ಯಾರೊಬ್ಬರೂ ಅದರ ಹೊಣೆ ಹೊತ್ತಿಲ್ಲ. ಕೆಲವೆಡೆ ವ್ಯಂಗ್ಯವಾಗಿ ಅವರಿಬ್ಬರನ್ನೂ ಹೊಗಳಿದಂತೆ ಬರೆದು ತೆಗಳಲಾಗಿದೆ.

ವಂಶಾಡಳಿತ, ಸ್ವಾರ್ಥ ರಾಜಕಾರಣ ಮತ್ತು ಕುಟುಂಬ ವ್ಯಾಮೋಹಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ. ಸ್ವಜಾತಿ ಪ್ರೇಮ ಮೆರೆಯುವುದು ಜನಹಿತವಲ್ಲ. ಮುಂದಿನ ವಾರ 77ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಯೋವೃದ್ಧ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯ ಬಿಟ್ಟು ಮಾರ್ಗದರ್ಶಕರಾಗಿರುವುದು ಒಳ್ಳೆಯದು. ಅವರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವ ಮೂಲಕ ಗೌರವಿಸಿ ಅವರ ಅನುಭವ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ವಿಜಯೇಂದ್ರ ಅವರನ್ನು ಸೂಪರ್‌ ಸಿಎಂ, ಡಿಫ್ಯಾಕ್ಟೊಸಿಎಂ ಎಂದು ಸ್ವಪಕ್ಷೀಯರು ಹಾಗೂ ಪ್ರತಿಪಕ್ಷದವರು ನೇರ ಆರೋಪ ಮಾಡುವುದು ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಶಿವಾನಂದ ವೃತ್ತದ ಬಳಿಯ ಅವರ ಆದರ್ಶ ರೋಸ್‌ ಅಪಾರ್ಟ್‌ಮೆಂಟ್‌ ಶಕ್ತಿ ಕೇಂದ್ರವಾಗಿದೆ. ತಮ್ಮನ್ನು ಭೇಟಿ ಮಾಡುವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಉದ್ದಿಮೆದಾರರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರನ್ನು ಭೇಟಿ ಮಾಡಲು ಕಳುಹಿಸುತ್ತಾರೆ. ಸಂಜೆಯಾದರೆ ಪಂಚತಾರಾ ಹೋಟೆಲ್‌ನಲ್ಲಿ ವಿಜಯೇಂದ್ರ ಅವರನ್ನು ಕಾಣಬೇಕು ಎಂಬ ಮಾತಿದೆ ಎಂದೂ ಪ್ರಸ್ತಾಪಿಸಲಾಗಿದೆ.

ಈ ಅನಾಮಧೇಯ ಪ್ರಕಟಣೆ ಹೊರಬಿದ್ದ ಬೆನ್ನಲ್ಲೇ ಕೆಲವು ಸಚಿವರು ಹಾಗೂ ಶಾಸಕರು ಪ್ರತಿಕ್ರಿಯೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಾತನಾಡಿ, ಇದು ಅನಾಮಧೇಯ ಪತ್ರ ಅಷ್ಟೇ. ಇಂತಹ ಪತ್ರಗಳು, ಸಣ್ಣ ಸಣ್ಣ ಪ್ರಯತ್ನಗಳು, ತಂತ್ರಗಳು ನಡೆಯುತ್ತಲೇ ಇರುತ್ತವೆ. ಇದ್ಯಾವುದಕ್ಕೂ ತಿರುಳಿಲ್ಲ. ಇದು ಗಾಳಿ ಮಾತು. ಇಂತಹ ಗಾಳಿ ಮಾತನ್ನ ಸೃಷ್ಟಿಮಾಡುತ್ತಿರುವುದು ವಿರೋಧ ಪಕ್ಷದವರು. ನಮ್ಮ ಪಕ್ಷದೊಳಗೆ ಇಂಥದಕ್ಕೆ ಯಾವುದಕ್ಕೂ ಅವಕಾಶ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಇದು ಬಿಜೆಪಿ ಶಾಸಕರ ಕೃತ್ಯ ಅಲ್ಲ. ಇದು ಬೌದ್ಧಿಕವಾಗಿ ದಿವಾಳಿ ಆಗಿರುವ ವಿರೋಧ ಪಕ್ಷದವರ ಕೃತ್ಯ ಅಂತ ನಾನು ಅಂದುಕೊಂಡಿದ್ದೇನೆ. ಯಡಿಯೂರಪ್ಪ ಅವರ ಅನುಭವಕ್ಕೆ ಅನುಭವವೇ ಸಾಟಿ. ಅವರ ಅನುಭವದ ಮುಂದೆ ಬೇರೇನೂ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ಯಡಿಯೂರಪ್ಪ ದಕ್ಷರಾಗಿದ್ದಾರೆ. ಪ್ರಕಟಣೆ ಯಾರು ಬರೆದಿದ್ದಾರೋ ಗೊತ್ತಿಲ್ಲ. ಯಾರು ಬರೆದಿದ್ದಾರೆ ಎಂಬುದನ್ನು ತಿಳಿಯಲು ಪರಿಶೀಲನೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಯಾರೂ ಈ ಪತ್ರ ಬರೆದಿಲ್ಲ. ಯಡಿಯೂರಪ್ಪ ಅವರಿಗೆ ವಯಸ್ಸಾಗಿರಬಹುದು. ಆದರೆ ಅವರ ಸಾಮರ್ಥ್ಯ ಬಗ್ಗೆ ಪ್ರಶ್ನೆ ಇಲ್ಲ. ಈ ಪತ್ರ ಯಾರು ಬರೆದಿದ್ದಾರೆ ಎನ್ನುವುದು ಗೊತ್ತಿದೆ. ಸಂದರ್ಭ ಬಂದಾಗ ಎಲ್ಲರ ಮಾಹಿತಿ ಹೊರಗೆ ಬರುತ್ತದೆ. ಪತ್ರ ಬರೆದವರಿಗೆ ತಾಕತ್ತಿದ್ದರೆ ಅವರ ಹೆಸರನ್ನು ಬರೆದು ಮಾಧ್ಯಮದ ಮುಂದೆ ಬಿಡುಗಡೆಗೊಳಿಸಲಿ ಎಂದು ಸವಾಲು ಎಸೆದರು.

ಪತ್ರದಲ್ಲೇನಿದೆ?

- ವಂಶಾಡಳಿತ, ಸ್ವಾರ್ಥ ರಾಜಕಾರಣ ಮತ್ತು ಕುಟುಂಬ ವ್ಯಾಮೋಹಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ

- 77ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಡಿಯೂರಪ್ಪ ಚುನಾವಣಾ ರಾಜಕೀಯ ಬಿಟ್ಟುಬಿಡಲಿ

- ಅವರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವ ಮೂಲಕ ಗೌರವಿಸಿ ಅವರ ಅನುಭವ ಬಳಸಿಕೊಳ್ಳಲಿ

- ವಿಜಯೇಂದ್ರ ಅವರನ್ನು ಸೂಪರ್‌, ಡಿಫ್ಯಾಕ್ಟೋ ಸಿಎಂ ಎಂದು ನೇರ ಆರೋಪ ಮಾಡಲಾಗುತ್ತಿದೆ

- ಈ ಎಲ್ಲ ಟೀಕೆಗಳಿಂದ ನಮ್ಮ ಮನಸ್ಸಿಗೆ ಘಾಸಿಯಾಗಿದೆ: ಅನಾಮಧೇಯ ಪತ್ರದಲ್ಲಿ ಉಲ್ಲೇಖ

click me!