ಸಿದ್ದರಾಮಯ್ಯ ಕಿವಿಗೆ ಹೂ ಇಟ್ಟೋರ್ಯಾರು..? ಚಿತ್ರದುರ್ಗದ ಯುವಕರಿಗೆ ಹೆಲಿಕಾಪ್ಟರ್‌, ಹಡಗುಯಾನದ ಕನಸು..!

Published : Feb 20, 2023, 11:16 AM IST
ಸಿದ್ದರಾಮಯ್ಯ ಕಿವಿಗೆ ಹೂ ಇಟ್ಟೋರ್ಯಾರು..? ಚಿತ್ರದುರ್ಗದ ಯುವಕರಿಗೆ ಹೆಲಿಕಾಪ್ಟರ್‌, ಹಡಗುಯಾನದ ಕನಸು..!

ಸಾರಾಂಶ

ಬಜೆಟ್‌ನಂತಹ ಗಂಭೀರ ವಿಚಾರಗಳಲ್ಲಿ ತಮ್ಮ ಆಳ ಅಧ್ಯಯನ ಹಾಗೂ ಜ್ಞಾನದಿಂದ ಚಾಟಿ ಬೀಸುವ ಸಿದ್ದರಾಮಯ್ಯ ಅವರ ಧಾಟಿ ಫೇಮಸ್ಸು. ಇಂತಹ ಸಿದ್ದರಾಮಯ್ಯ ಅವರು ಕಿವಿಯಲ್ಲಿ ಚೆಂಡು ಹೂವ ತೊಟ್ಟು ಅಧಿವೇಶನಕ್ಕೆ ಹೋಗುವಂತೆ ಮಾಡಿದ್ದು ಸುಮಾರಾದ ಸಾಧನೆಯೇನಲ್ಲ? ಇಷ್ಟೇ ಅಲ್ಲ, ಬೆಳ್ಗಾವಿ ಸಾಹುಕಾರರ ವಿರುದ್ಧ ದೂರು ಕೂಡಲು ಕಾಂಗ್ರೆಸ್‌ ಐಕಾನ್‌ ಸಿದ್ದರಾಮಯ್ಯ ಖುದ್ದು ಪೊಲೀಸ್‌ ಠಾಣೆಗೆ ಹೋಗಿದ್ದು ಕೂಡ ಬಹುತೇಕ ಮಂದಿಗೆ ಸೋಜಿಗ.

ಬೆಂಗಳೂರು: ಬಜೆಟ್ ಮಂಡನೆ ದಿನ ಚೆಂಡು ಹೂವ ತೊಟ್ಟ ಕಾಂಗ್ರೆಸ್ ನಾಯಕರ ಪಟಗಳು ವೈರಲ್ ಆಗೋಗಿವೆ! ಇದಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಲೆಲ್ಲ ಸಿಕ್ಕ ಸಿಕ್ಕೋರಿಗೆ ಬಿಜೆಪಿ ರಿಪೋರ್ಟ್ ಕಾರ್ಡ್ ಜತೆ ಚೆಂಡು ಹೂ ಹಂಚತೊಡಗಿದ್ದಾರೆ. ಪರಿಣಾಮ ದಿಢೀರ್ ಅಂತ ಚೆಂಡು ಹೂವ ದುಬಾರಿ! 

ಹೀಗೆ ಚೆಂಡು ಹೂವಕ್ಕೂ ಮಾರ್ಕೆಟ್‌ ತಂದು ಕೊಟ್ಟ ಈ ಐಡಿಯಾ ಯಾರದ್ದು ಅಂತ ಎಲ್ಲ ಹುಡುಕಾಡುತ್ತಿದ್ದರೆ, ಕಾಂಗ್ರೆಸ್‌ನ ಪಡಸಾಲೆಯಲ್ಲಿ  ಮಾತ್ರ, ನಮ್ ಸಿದ್ದರಾಮಯ್ಯ ಅವರಿಗೆ ಚೆಂಡು ಹೂವ ಇಟ್ಟವರು ಯಾರು ಅಂತ ತನಿಖೆ ಆರಂಭವಾಗಿದೆಯಂತೆ!

ಬಜೆಟ್‌ನಂತಹ ಗಂಭೀರ ವಿಚಾರಗಳಲ್ಲಿ ತಮ್ಮ ಆಳ ಅಧ್ಯಯನ ಹಾಗೂ ಜ್ಞಾನದಿಂದ ಚಾಟಿ ಬೀಸುವ ಸಿದ್ದರಾಮಯ್ಯ ಅವರ ಧಾಟಿ ಫೇಮಸ್ಸು. ಇಂತಹ ಸಿದ್ದರಾಮಯ್ಯ ಅವರು ಕಿವಿಯಲ್ಲಿ ಚೆಂಡು ಹೂವ ತೊಟ್ಟು ಅಧಿವೇಶನಕ್ಕೆ ಹೋಗುವಂತೆ ಮಾಡಿದ್ದು ಸುಮಾರಾದ ಸಾಧನೆಯೇನಲ್ಲ?

ಇಷ್ಟೇ ಅಲ್ಲ, ಬೆಳ್ಗಾವಿ ಸಾಹುಕಾರರ ವಿರುದ್ಧ ದೂರು ಕೂಡಲು ಕಾಂಗ್ರೆಸ್ ಐಕಾನ್ ಸಿದ್ದರಾಮಯ್ಯ ಖುದ್ದು ಪೊಲೀಸ್ ಠಾಣೆಗೆ ಹೋಗಿದ್ದು ಕೂಡ ಬಹುತೇಕ ಮಂದಿಗೆ ಸೋಜಿಗ. ಬಲ್ಲ ಮೂಲಗಳ ಪ್ರಕಾರ ಇವೆರಡು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲದ ಸರ್ಕಸ್!

ಆದರೆ, ಇದು ಟಿಆರ್‌ಪಿ ಮೆಟೀರಿಯಲ್ ಸಾ ಎಂದು ಒತ್ತಡ ಹಾಕಿದ್ದು, ಬೇಡ ಅಂತಾರೆ ಅನಿಸಿದಾಗ ನೇರವಾಗಿ ಹೈಕಮಾಂಡ್ ಟಚ್ ಮಾಡಿ ಅಲ್ಲಿಂದಲೇ ಕಿವಿಮಾತು ಹೇಳಿಸಿ ಕಿವಿಯಲ್ಲಿ ಹೂ ಇಟ್ಟುಕೊಳ್ಳುವಂತೆ ಮಾಡಿದ್ದು  ಸುನೀಲ್ ಕನುಗೊಲು ಎಂಬುದು ಬಲ್ಲ ಮೂಲಗಳ ಅಂಬೋಣ.
ಎಂಥಾ ಗೋಲ್ ಹೊಡೆದರಲ್ಲ ಕನುಗೊಲ್!

ದುರ್ಗದಲ್ಲೀಗ ಹೆಲಿಕಾಪ್ಟರ್‌ ವರ್ಸಸ್‌ ಹಡಗು

ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ವಿಧಾನಸಭೆ ಚುನಾವಣೆ ಈ ಬಾರಿ ಸಖತ್ ರಂಗೇರಿದೆ. ಭಾರೀ ಕುಳಗಳು ಗೋಣಿ ಚೀಲದಲ್ಲಿ ದುಡ್ಡು ತುಂಬಿಕೊಂಡು ಬಂದು ಎದುರಿಗೆ ಸುರಿದರೆ, ನಾಯಕನಹಟ್ಟಿ ತಿಪ್ಪೇಶನ ಜಾತ್ರೆಗೆ ಚೂರು ಬೆಲ್ಲ ಮೆಣಸು ತೂರಿದಂಗೆ ತೂರ್ತಾರೆ ಎಂಬ ನೋಟಿನ ಅಂತೆ ಕಂತೆಗಳು ಹರಿದಾಡ್ತಿವೆ. ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಪೈಪೋಟಿ ರೊಕ್ಕದಾಚೆಗೂ ಪಡ್ಡೆ ಹುಡುಗರ ಬಾಯಲ್ಲಿ ಸ್ವಾರಸ್ಯವಾಗಿ ಹರಿದಾಡ್ತಿವೆ. 

ಪ್ರತಿ ಹಳ್ಳೀಲು ಹೆಲಿಕಾಪ್ಟರ್‌ನಲ್ಲಿ ಹಾರಾಡ್ತಿಯೋ, ಹಡಗಿನಲ್ಲಿ ತೇಲ್ತಿಯೋ ನೋಡು. ಯೋಚನೆ ಮಾಡಿ ಜಲ್ದಿ ತೀರ್ಮಾನ ತಗೋ ಅಂತಿದ್ದಾರೆ ಪಡ್ಡೆಗಳು. ಟಿಕೆಟ್‌ಗೆ ಟ್ರೈ ಮಾಡ್ತಿರೋ ಒಬ್ಬರು ಗೋವಾದಲ್ಲಿ ಕ್ಯಾಸಿನೋ ನಡೆಸ್ತಿದ್ದಾರೆ. ಅಲ್ಲಿಗೆ ಪ್ಯಾಕೇಜ್ ಮಾಡಿ ಹಡಗಲ್ಲಿ ಕರ್ಕಂಡು ಹೋಗ್ತಾರೆ ಅನ್ನುವುದೇ ಈ ಸುದ್ದಿ ಹಿಂದಿನ ಗಮ್ಮತ್ತು. ಮತ್ತೊಬ್ಬ ಅಭ್ಯರ್ಥಿಯದು ಸ್ವಂತಕ್ಕೆ ಹೆಲಿಕಾಪ್ಟರ್ ಇರುವುದರಿಂದ ಸಹಜವಾಗಿಯೇ ಹಾರಾಟ ಅಂಟಿಕೊಂಡಿದೆ.

ಹಾಗಾಗಿ ಹೈಕಳ ಕಣ್ಣಲ್ಲಿ, ಗೋವಾ, ಎಣ್ಣೆ, ಹಡಗಿನ ಕನಸುಗಳು ಬೀಳುತ್ತಿದ್ದು ಮಧ್ಯರಾತ್ರಿ ದಿಗ್ಗನೆದ್ದು ಕುಳಿತುಕೊಳ್ತಿದ್ದಾರೆ. ಮತ್ತೊಂದಿಷ್ಟು ಮಂದಿ ಹೈಕಳು ಆಕಾಶದಲ್ಲಿ ಯಾವುದರೂ ಹೆಲಿಕಾಪ್ಟರ್ ಹಾರಾಡಿದ್ರೆ ನಾಳೆ ನಾವು ಅದರಲ್ಲಿ ಹೋಗ್ತೀವಿ ನೋಡ್ತಾ ಇರಿ ಎಂದು ಪಕ್ಕದವರಿಗೆ ಹೇಳ್ತಾ ಆಸೆಗಣ್ಣಿನಿಂದ ಆಕಾಶದ ಕಡೆ ದೃಷ್ಟಿ ನೆಡ್ತಾರೆ. ಹೆಲಿಕಾಪ್ಟರ್‌ನಲ್ಲಿ ಏನಿರುತ್ತಲೇ ಮಜಾ, ಹಡಗು ಹತ್ತೋಣ ಬಾರೋ ಎಂಬ ಖ್ಯಾತೆಗಳು, ವಕ್ರ ಮಾತುಗಳು ಮುಖಾಮುಖಿಯಾಗುತ್ತಿವೆ.

ಹೈಕ್ಳ ಸುಮ್ನೆ ಯಾಕೆ ಕನಸು ಕಾಣ್ತೀರ. ಅವೆಲ್ಲ ಏನೂ ನಡೆಯಲ್ಲ. ಈ ಸಾರಿ ಏನಿದ್ರೂ ಮತ್ತೆ ಪೈಜಾಮ, ಪಂಚೆ ಕುಸ್ತಿಗೆ ಬೀಳ್ತವೆ. ಹಾರಾಡೋದು, ತೇಲೋದು ಬಿಟ್ಟು ಸುಮ್ನೆ ಇದ್ದ ಊರಲ್ಲಿ ಒಂದಿಷ್ಟು ತುಟಿ ಒದ್ದೆ ಮಾಡಿಕೊಂಡು ತೂರಾಡೋದು ನೋಡ್ಕಳ್ರಲೆ ಅಂತಿದ್ದಾರೆ ಹಿರಿಯರು!!

ಕಳುವಾದ ಮೊಬೈಲ್‌ನಲ್ಲಿ ಏನೈತೆ?

ಮಂಗಳೂರು: ಚುನಾವಣೆ ಅಂದರೆ ಹಬ್ಬ. ಸಮಾವೇಶ ಅಂದರೆ ಜಾತ್ರೆ!

ಜಾತ್ರೆ ಅಂದರೆ ನಿಮಗೆ ಗೊತ್ತಲ್ಲ. ಅಲ್ಲಿ ಪಿನ್ ಟು ಏರೋಪ್ಲೈನ್ ಬೇಕಾದ್ದು ಸಿಗುತ್ತದೆ. ಎಲ್ಲ ನಮೂನಿ ಜನ ಇರುತ್ತಾರೆ. ಒಂದರ್ಥದಲ್ಲಿ ಪಕ್ಕಾ ಕೊಡು ಕೊಳ್ಳುವ, ಕೊಡದೆಯೇ ಕಳೆದುಕೊಳ್ಳುವ ಜಾಗ! 

ನಮ್ ಮಂಗಳೂರಿನಲ್ಲೂ ಈಗ ಇಂತಹ ಜಾತ್ರೆಗಳಿಗೆ ಬರವಿಲ್ಲ.  ಈ ಜಾತ್ರೆಗೆ ಪಕ್ಷಗಳ ವರಿಷ್ಠರು ಬಂದರಂತೂ ತಮ್ಮ ಅಸ್ತಿತ್ವ ತೋರಿಸಲು ಹಿರಿ-ಕಿರಿ ನಾಯಕರು ತೋರುವ ಧಾವಂತವನ್ನು ನೀವು ನೋಡಿಯೇ ಆನಂದಿಸಬೇಕು. ಟಿಪ್‌ಟಾಪ್ ಆಗಿ ಡ್ರೆಸ್ ಮಾಡಿ ಸ್ಟೇಜ್ ಪೂರ್ತಿ ಓಡಾಡುತ್ತ ಎಲ್ಲರಿಗೆ ತನ್ನ ಮುಖಾರವಿಂದ ಕಾಣಲಿ ಎಂಬ ಏಕಮೇವ ಮಹತ್ವಾಕಾಂಕ್ಷೆ. ಇಂಥ ಧಾವಂತದಲ್ಲಿ ಕೆಲ ನಾಯಕರಿಗೆ ನೆಲ ಕಾಣೋದು ಬಿಡಿ, ಪಕ್ಕದಲ್ಲಿ ನಿಜವಾದ ಕಳ್ಳನೇ ಬಂದು ನಿಂತರೆ ಕಾಣುತ್ತದೆಯೇ?

ಖಂಡಿತ ಇಲ್ಲ. ಇದರ ಲಾಭವನ್ನು ಪಡೆದ ಖತರ್ನಾಕ್ ಕಳ್ಳನೊಬ್ಬ ಮಾಡಿಕೊಂಡ. ಮಂಗಳೂರಿನಲ್ಲಿ ನಡೆದ ರಾಜಕೀಯ ಸಮಾವೇಶವೆಂಬ ಜಾತ್ರೆಯಲ್ಲಿ 15ಕ್ಕೂ ಹೆಚ್ಚು ನಾಯಕರ ಪರ್ಸು, ಮೊಬೈಲು ಎಗರಿಸಿಬಿಟ್ಟ!

ಹೆಚ್ಚಿನವರಿಗೆ ಸಮಾವೇಶ ಮುಗಿಯುವವರೆಗೆ ತಮ್ಮ ಜೇಬಿಗೆ ಕನ್ನ ಬಿದ್ದಿದೆ ಎಂಬ ಪರಿವೆಯೇ ಇರಲಿಲ್ಲ. ಒಬ್ಬ ನಾಯಕರಂತೂ ಲಕ್ಷ ರುಪಾಯಿ ಮೊತ್ತದ ಐಫೋನನ್ನೇ ಕಳೆದುಕೊಂಡರು. ಮತ್ತೊಬ್ಬರಿಗೆ  20 ಸಾವಿರ ರು. ‘ನಾಮ’ ಬಿದ್ದಿತ್ತು. ಹೀಗೆ ತರಹೇವಾರಿ ಮೊಬೈಲ್‌ಗಳು ಕಾಣೆಯಾಗಿ ಬಿಟ್ಟವು. ಕೆಲವರ ಪರ್ಸ್ ಸಹ ಚೋರಿಯಾಯ್ತು. ಪರ್ಸ್‌ನಲ್ಲಿದ್ದ ಹಣ ಕಳೆದುಕೊಂಡವರು ಕಳ್ಳನನ್ನು ಬೈದುಕೊಂಡು ಸುಮ್ಮನಾದರು. ಆದರೆ, ಈ ಮೊಬೈಲ್ ಕಳೆದುಕೊಂಡಿದ್ದರಲ್ಲ ಅವರ ಪಡಿಪಾಟಲು ಹೇಳತೀರದು. 20 ಸಾವಿರ ಮೊಬೈಲ್ ಹುಡುಕಿಸಲು ಲಕ್ಷ ಖರ್ಚಾದರೂ ಪರ್ವಾಗಿಲ್ಲ ಎಂದು ಪೊಲೀಸರ ಬೆನ್ನತ್ತಿದ್ದರು.

ಇಷ್ಟಕ್ಕೂ ಅಂತಹ ಮಹತ್ವದ್ದು ಆ ಮೊಬೈಲ್‌ನಲ್ಲಿ ಏನಿತ್ತು!

ಈ ಪ್ರಶ್ನೆಗೆ  ದೇವರಾಣೆ ಯಾವ ವಿಡಿಯೋ ಇರಲಿಲ್ಲ ಮಾರಾಯ ಎಂದು ಆ ನಾಯಕ ಅವಲತ್ತುಕೊಂಡರೂ ಯಾರೂ ನಂಬುತ್ತಿಲ್ಲ 

(ಎಸ್‌.ಗಿರೀಶ್‌ ಬಾಬು, ಚಿಕ್ಕನಪ್ಪಹಳ್ಳಿ ಷಣ್ಮುಖ, ಸಂದೀಪ್‌ ವಾಗ್ಳೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?