ಬಿಎಸ್‌ವೈ ಸರ್ಕಾರ ದ್ವೇಷ ರಾಜಕಾರಣ ಮಾಡಿದರೆ ಸುಮ್ಮನಿರಲ್ಲ: ದೇವೇಗೌಡ| ಕುಮಾರಸ್ವಾಮಿ ಅವಧಿಯ ಕಾಮಗಾರಿಗಳು ರದ್ದು| ಮಾಜಿ ಪ್ರಧಾನಿ ಆರೋಪ
ಹುಬ್ಬಳ್ಳಿ[ಫೆ.17]: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಿಡಿಕಾರಿದ್ದು, ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿನ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಈ ಸರ್ಕಾರ ರದ್ದು ಪಡಿಸಿದೆ. ಇದರ ವಿರುದ್ಧ ವಿಧಾನಸೌಧದ ಒಳಗೆ, ಹೊರಗೆ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಎಸ್‌ವೈ ಸರ್ಕಾರ ಮೂರು ವರ್ಷ ಮುಂದುವರಿಯಲು ನಮ್ಮಿಂದ ಯಾವುದೇ ಅಭ್ಯಂತರವಿಲ್ಲ. ಆದರೆ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಬಿಜೆಪಿ ಶಾಸಕರಿಗೆ ಮಾತ್ರ ಅನುದಾನ ನೀಡುತ್ತ, ಜೆಡಿಎಸ್‌ನವರಿಗೆ ಅನುದಾನ ನೀಡಲಾಗುತ್ತಿಲ್ಲ ಎಂದು ದೂರಿದರು. ಪೊಲೀಸರನ್ನು ಬಳಸಿಕೊಂಡು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಯಾದಗಿರಿಯಲ್ಲಿ ಜೆಡಿಎಸ್ ಜಿಪಂ ಸದಸ್ಯನಿಗೆ ಪಿಸ್ತೂಲ್ ತೋರಿಸಿ ಹೆದರಿಸಲಾಗಿದೆ. ರಾಜಕೀಯ ದ್ವೇಷದಿಂದ ನಮ್ಮ ಮೇಲೆ ಹಗೆತನ ಸಾಧಿಸಿದರೆ ಸುಮ್ಮನೆ ಕೂರಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಬಗ್ಗೆ ಸಿಂಪಥಿ ಇದ್ದದ್ದು ನಿಜ:
ಕಾಂಗ್ರೆಸ್ ಜತೆ ಮೈತ್ರಿಗೆ ಮೊದಲು ಇಷ್ಟವಿರಲಿಲ್ಲ. ಬಳಿಕ ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಮಾತನಾಡಿದಾಗ ಒಪ್ಪಬೇಕಾಯಿತು. ನನಗೆ ಕಾಂಗ್ರೆಸ್ ಬಗ್ಗೆ ಹಿಂದೆ ಸಿಂಪಥಿ ಇದ್ದದ್ದು ನಿಜ. ಅದರ ನಡುವೆ ಕಾಂಗ್ರೆಸ್ ಮುಕ್ತ ಭಾರತ ಎಂಬ ಮೋದಿ ಅವರ ಘೋಷಣೆಯನ್ನೂ ಒಪ್ಪಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಸರ್ಕಾರ ರಚನೆಗೆ ಒಪ್ಪಿಕೊಂಡೆ ಎಂದರು.
ಅಸಮಾಧಾನ, ಅನುದಾನ ತಾರತಮ್ಯದ ನೆಪ ಹೇಳಿ 15 ಜನ ಶಾಸಕರು ಮುಂಬೈಗೆ ಹೋದರು. ಅವರನ್ನು ಕೇಳಿದರೂ ಸರ್ಕಾರ ಪತನಕ್ಕೆ ಕಾರಣ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಹೆಸರೇಳದೆ ವಾಗ್ದಾಳಿ ನಡೆಸಿದರು.
ಅವರ ಮಗ ತೀರಿಕೊಂಡಾಗ ನನಗೆ ಯಾರು ವಿಷಯ ಹೇಳಿರಲಿಲ್ಲ. ಆದರೂ ನಾನೇ ಹೋಗಿದ್ದೆ, ನನಗೂ ಮನುಷ್ಯತ್ವ ಇದೆ. ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದೆವು ಎಂಬ ಕಾರಣಕ್ಕೆ ಎಲ್ಲ ಮರೆತು ಮೈತ್ರಿಗೆ ಕೈ ಜೋಡಿಸಿದ್ದೆವು. ಆದರೆ, ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರಿಂದಲೆ ಲೋಕಸಭೆ ಚುನಾವಣೆ ಸೇರಿ ಮತ್ತಿತರ ಕಾರಣಕ್ಕೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಹಿನ್ನಡೆಯಾಗಿದೆ ಎಂದು ಹೇಳಲು ಆರಂಭಿಸಿದರು. ಈ ಕುರಿತು ತಮ್ಮ ಹೈಕಮಾಂಡ್‌ಗೆ ದೂರನ್ನೂ ನೀಡಿದರು. ಇದರ ಹಿಂದೆ ಇರುವವರು ಯಾರು ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂದರು.