ನಿಲ್ಲದ ಬಿಜೆಪಿ ಭಿನ್ನಮತ: ಸಂಪುಟ ಸಂಕಟ ಈಗ ದಿಲ್ಲಿಗೆ!

By Kannadaprabha NewsFirst Published Aug 10, 2021, 7:28 AM IST
Highlights

* ಸಚಿವ ಸ್ಥಾನದ ವಂಚಿತರು, ಖಾತೆ ಅಸಮಾಧಾನಿತರಿಂದ ವರಿಷ್ಠರಿಗೆ ಮೊರೆ

* ಸಂಪುಟ ಸಂಕಟ ಈಗ ದಿಲ್ಲಿಗೆ

* ಸಿಎಂ ಕೂಡ ದಿಲ್ಲಿ ಭೇಟಿ ಸಂಭವ

* ಸಿಎಂ ಬದಲಾದರೂ ನಿಲ್ಲದ ಭಿನ್ನಮತ

ಬೆಂಗಳೂರು(ಆ.10): ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಬಳಿಕ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಸಂಪೂರ್ಣ ಶಮನವಾಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಅದರ ಸ್ವರೂಪ ಬದಲಾಗಿ ಮತ್ತೆ ಮುಂದುವರೆದಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಉದ್ಭವಿಸಿರುವ ಸಚಿವ ಸ್ಥಾನ ವಂಚಿತರು ಹಾಗೂ ಖಾತೆ ಹಂಚಿಕೆ ಬಿಕ್ಕಟ್ಟು ಇದೀಗ ದೆಹಲಿ ಅಂಗಳಕ್ಕೆ ಸ್ಥಳಾಂತರಗೊಂಡಿದೆ. ಸಚಿವ ಸ್ಥಾನ ವಂಚಿತರಿಗೆ ಹಾಗೂ ನಿರೀಕ್ಷೆಯ ಖಾತೆ ಸಿಗದವರಿಗೆ ಪಕ್ಷದ ಹೈಕಮಾಂಡ್‌ನತ್ತ ಬೆರಳು ತೋರಿದ್ದರಿಂದಲೋ ಏನೋ ಅಸಮಾಧಾನಿತರು ದೆಹಲಿಗೆ ಎಡತಾಕುತ್ತಿದ್ದಾರೆ.

ವರಿಷ್ಠರಿಗೆ ಮೊರೆ:

ಸಚಿವ ಸ್ಥಾನ ಕಳೆದುಕೊಂಡಿರುವ ಸಿ.ಪಿ.ಯೋಗೇಶ್ವರ್‌, ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್‌ ಜಾರಕಿಹೊಳಿ, ಸಚಿವ ಸ್ಥಾನದಿಂದ ಕೈಬಿಟ್ಟಅವರ ಬೆಂಬಲಿಗ ಶ್ರೀಮಂತ್‌ ಪಾಟೀಲ್‌, ಮತ್ತೊಬ್ಬ ವಂಚಿತ ಆರ್‌.ಶಂಕರ್‌ ಅವರು ದೆಹಲಿಗೆ ತೆರಳಿ ವರಿಷ್ಠರ ಮೊರೆ ಹೋಗುತ್ತಿದ್ದಾರೆ.

ಸಿಎಂ ಕೂಡ ದೆಹಲಿಗೆ?:

ಇದೆಲ್ಲವೂ ತೀವ್ರ ಸ್ವರೂಪ ಪಡೆದುಕೊಳ್ಳುವ ಮೊದಲು ತಾವೇ ದೆಹಲಿಗೆ ತೆರಳಿ ವರಿಷ್ಠರನ್ನು ಕಂಡು ಪರಿಹಾರೋಪಾಯ ಕಂಡುಕೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಸಂಪುಟದಲ್ಲಿ ನಾಲ್ಕು ಸ್ಥಾನಗಳು ಖಾಲಿ ಉಳಿದಿವೆ. ಹೀಗಾಗಿ ಇವುಗಳ ಮೇಲೆ ಕಣ್ಣು ಹಾಕಿರುವ ಅಸಮಾಧಾನಿತ ಮುಖಂಡರು ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮುಂದುವರೆಸಿದ್ದಾರೆ.

ತಮ್ಮ ಆಪ್ತರಾಗಿರುವ ಶ್ರೀಮಂತ ಪಾಟೀಲ… ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಹಾಗೂ ತಮ್ಮ ಸ್ಥಾನವನ್ನು ಪ್ರಮುಖ ಖಾತೆಯೊಂದಿಗೆ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡದೇ ಇದ್ದುದಕ್ಕೆ ರಮೇಶ ಜಾರಕಿಹೊಳಿ ಕೋಪಗೊಂಡಿದ್ದಾರೆ. ಈ ಕಾರಣಕ್ಕಾಗಿಯೆ ಕಳೆದ ಮೂರ್ನಾಲ್ಕು ದಿನಗಳಿಂದ ಪಕ್ಷದ ವಿವಿಧ ನಾಯಕರನ್ನು ಭೇಟಿ ಮಾಡಿ ತಮ್ಮದೇ ರಣತಂತ್ರ ರೂಪಿಸುತ್ತಿದ್ದಾರೆ.

ಆದರೆ, ಯಡಿಯೂರಪ್ಪ ಅವರ ನಿರ್ಗಮನದ ಬಳಿಕ ರಾಜ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸುತ್ತಿರುವ ಹೈಕಮಾಂಡ್‌ ಅಷ್ಟುಸುಲಭವಾಗಿ ಅತೃಪ್ತರ ಬೇಡಿಕೆಗೆ ಸುಲಭವಾಗಿ ಮಣಿಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಮುಂದಾಳತ್ವ ವಹಿಸಿಕೊಂಡು ತಮ್ಮ ಸರ್ಕಾರದ ಬಗ್ಗೆ ಕೇಳಿಬರುತ್ತಿರುವ ಅಪಸ್ವರವನ್ನು ನಿಭಾಯಿಸಬೇಕಾದ ಅನಿವಾರ್ಯತೆ ಬಂದೊದಗಬಹುದು ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಒಂದು ಕಡೆ ತಮಗೆ ಸಿಕ್ಕ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಎಂಟಿಬಿ ನಾಗರಾಜು ಹಾಗೂ ಆನಂದ್‌ ಸಿಂಗ್‌ ಅವರ ಜೊತೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಸಮಧಾನವನ್ನು ಕೊಂಚ ತಣ್ಣಗಾಗಿಸಿದ್ದಾರೆ. ಆದರೆ ಸಚಿವ ಸ್ಥಾನ ಸಿಗದೆ ಇರುವವರನ್ನು ಸಮಾಧಾನ ಪಡಿಸುವುದು ತುಸು ಕಷ್ಟ. ಹೀಗಾಗಿ ಹೈಕಮಾಂಡ್‌ ಈ ಬಗ್ಗೆ ಗಮನ ಹರಿಸುವ ಸಂದರ್ಭ ಬಂದಿದೆ

click me!