ಆರ್‌.ಅಶೋಕ್‌ ವಿರುದ್ಧ ಬಿಜೆಪಿ ಶಾಸಕರು ರೆಬೆಲ್‌!

By Kannadaprabha NewsFirst Published Oct 10, 2021, 8:31 AM IST
Highlights

* ಬೆಂಗಳೂರು ಉಸ್ತುವಾರಿ ಬಗ್ಗೆ ಭಿನ್ನಮತ ಸ್ಫೋಟ

* ಆರ್‌.ಅಶೋಕ್‌ ವಿರುದ್ಧ ಬಿಜೆಪಿ ಶಾಸಕರು ರೆಬೆಲ್‌

* ಸಾಮ್ರಾಟ್‌ ರೀತಿ ಅಶೋಕ್‌ ವರ್ತನೆ: ಸೋಮಣ್ಣ

ಬೆಂಗಳೂರು(ಅ.10): ಬೆಂಗಳೂರು ನಗರ ಉಸ್ತುವಾರಿ ಸಚಿವರ(Bengaluru Urban In Charge Minister) ನೇಮಕ ವಿಚಾರದಲ್ಲಿ ರಾಜ್ಯ ರಾಜಧಾನಿಯ ಬಿಜೆಪಿ ಶಾಸಕರು(BJP MLAs), ಸಚಿವರು ಹಾಗೂ ಕಂದಾಯ ಸಚಿವ(Revenue Minister) ಆರ್‌.ಅಶೋಕ್‌(R Ashok) ನಡುವಿನ ಮುಸುಕಿನ ಗುದ್ದಾಟ ವಿವಾದದ ಸ್ವರೂಪ ಪಡೆದಿದ್ದು, ಹಿರಿಯ ಸಚಿವ ವಿ.ಸೋಮಣ್ಣ(V Somanna) ಸೇರಿದಂತೆ ಹಲವು ಶಾಸಕ ಹಾಗೂ ಸಚಿವರು ಅಶೋಕ್‌ ವಿರುದ್ಧ ತೀವ್ರ ವಾಗ್ದಾಳಿಗೆ ಇಳಿದಿದ್ದಾರೆ.

ಉಸ್ತುವಾರಿ ಆಕಾಂಕ್ಷಿ ಎನ್ನಲಾದ ಆರ್‌.ಅಶೋಕ್‌ ವಿರುದ್ಧ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌(SR Vishwanath), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(Dr CN Ashwath Narayan) ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಶನಿವಾರ ವಸತಿ ಸಚಿವ ವಿ.ಸೋಮಣ್ಣ ಅವರು ಆರ್‌. ಅಶೋಕ್‌ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ‘ಆರ್‌.ಅಶೋಕ್‌ ಶಾಸಕನಾಗುವ ಮೊದಲೇ ಬೆಂಗಳೂರು ನಗರ ಉಸ್ತುವಾರಿ ಸಚಿವನಾಗಿದ್ದವನು ನಾನು. ಹಿರಿಯ ಹಾಗೂ ಅನುಭವ ಉಳ್ಳವನು. ಹೀಗಾಗಿ ನನ್ನನ್ನು ಉಸ್ತುವಾರಿ ಸ್ಥಾನಕ್ಕೆ ಪರಿಗಣಿಸಬೇಕು. ಅಶೋಕ್‌ ಸಾಮ್ರಾಟನಂತೆ ವರ್ತಿಸುವುದು ಸರಿಯಲ್ಲ’ ಎಂದು ಕಿಡಿಕಾರಿದರು. ಇದರ ಬೆನ್ನಲ್ಲೇ ತೋಟಗಾರಿಕೆ ಸಚಿವ ಮುನಿರತ್ನ ಅವರು ಸಹ ವಿ. ಸೋಮಣ್ಣ ಪರ ಬ್ಯಾಟ್‌ ಬೀಸಿದ್ದಾರೆ. ವಿವಾದದ ಗಾಂಭೀರ್ಯತೆ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai), ‘ಬೆಂಗಳೂರು ನಗರ ಉಸ್ತುವಾರಿ ಮಹತ್ವದ್ದಾಗಿದ್ದು. ಹೀಗಾಗಿ ಎಲ್ಲರೊಂದಿಗೂ ಚರ್ಚಿಸಿ ಸೌಹಾರ್ದಯುತವಾಗಿ ಆದಷ್ಟೂಶೀಘ್ರವಾಗಿ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ಸಾಮ್ರಾಟ್‌ ರೀತಿ ಅಶೋಕ್‌ ವರ್ತನೆ: ಸಚಿವ ಸೋಮಣ್ಣ

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ ಅವರು, ‘ಅಶೋಕ್‌ ಒಂದು ರೀತಿ ಬೆಂಗಳೂರಿಗೆ ಸಾಮಾಟ್ರನಂತೆ ವರ್ತಿಸುತ್ತಿದ್ದಾನೆ. ಬೆಂಗಳೂರು ವ್ಯಾಪ್ತಿಯ ವಸತಿ ಇಲಾಖೆಗೆ ಸಂಬಂಧಿಸಿದಂತೆ ಸಭೆ ಕರೆದರೆ ಅಶೋಕ್‌ ಬಂದಿಲ್ಲ. ಇದರಿಂದ ನನಗೆ ನಷ್ಟವಿಲ್ಲ. ಅವರ ಕ್ಷೇತ್ರಕ್ಕೆ ಕೊಡುವ ಮನೆಗಳನ್ನು ಬೇರೆ ಕ್ಷೇತ್ರಕ್ಕೆ ಕೊಡುತ್ತೇನೆ. ಅಶೋಕ್‌ ಎಂದು ಅವರ ತಾಯಿ ಏಕೆ ಹೆಸರಿಟ್ಟರೋ ಗೊತ್ತಿಲ್ಲ. ಸಾಮ್ರಾಟನಂತೆ ವರ್ತಿಸುತ್ತಿದ್ದಾನೆ’ ಎಂದು ಕಿಡಿಕಾರಿದರು.

ಇದೇ ವೇಳೆ ‘ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಆರ್‌. ಅಶೋಕ್‌ ಶಾಸಕ ಕೂಡ ಆಗಿರಲಿಲ್ಲ. ನಾನು ಕರೆದರೆ ಅಶೋಕ್‌ ಸಹ ಸಭೆಗೆ ಬರಲೇಬೇಕು. ನಾನೇನು ನನ್ನ ವೈಯಕ್ತಿಕ ಕೆಲಸಗಳಿಗೆ ಆಹ್ವಾನಿಸುವುದಿಲ್ಲ. ಬೆಂಗಳೂರಿನ ಸಚಿವರು, ಶಾಸಕರು ಬರುತ್ತಾರೆ. ಆದರೆ, ಅಶೋಕ್‌ ಮಾತ್ರ ಬರುವುದಿಲ್ಲ ಎಂದರೆ ಏನರ್ಥ? ನಾನು ಸಹ ಪಕ್ಷದಲ್ಲಿ ಅತ್ಯಂತ ಹಿರಿಯನಾಗಿದ್ದೇನೆ. ಈಗಾಗಲೇ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಇದು ಯಾರಿಗೂ ಶೋಭೆ ತರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನೂ ಉಸ್ತುವಾರಿ ಆಕಾಂಕ್ಷಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನೊಂದು ಮನವಿ ಮಾಡಿದ್ದೇನೆ. ಬೆಂಗಳೂರು ಉಸ್ತುವಾರಿ ನೀಡುವ ವೇಳೆ ನನ್ನನ್ನು ಪರಿಗಣಿಸುವಂತೆ ಮನವಿ ಮಾಡಿದ್ದೇನೆ. ನನ್ನ ಹಿರಿತನ ಹಾಗೂ ಸೇವೆ ಪರಿಗಣಿಸಿ ಜವಾಬ್ದಾರಿ ನೀಡುವಂತೆ ಕೇಳಿದ್ದೇನೆ ಎಂದರು. ಇದೇ ವೇಳೆ ಇಬ್ಬರು ಉಸ್ತುವಾರಿ ನೇಮಿಸಿದರೆ ಆಡಳಿತಾತ್ಮಕವಾಗಿ ಹೆಚ್ಚು ಅನುಕೂಲ ಎಂದೂ ಸಲಹೆ ನೀಡಿದರು.

ಆರ್‌.ಅಶೋಕ್‌ ವಿರುದ್ಧ ಹಲವರ ಅಸಮಾಧಾನ

ಬಿಡಿಎ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಇದು ಹೀಗೆ ಮುಂದುವರೆದರೆ ಹಿರಿಯರಿಗೆ ದೂರು ನೀಡುವುದಾಗಿ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌ ಅಶೋಕ್‌ ವಿರುದ್ಧ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ‘ಬೆಂಗಳೂರು ನಗರಕ್ಕೆ ಯಾರೂ ಉಸ್ತುವಾರಿಗಳಿಲ್ಲ. ಅಮೃತ್‌ ಹಾಗೂ ಕೊರೋನಾ ನಿರ್ವಹಣೆಗಾಗಿ ಮಾತ್ರ ಅವರಿಗೆ (ಅಶೋಕ್‌) ಹೊಣೆ ನೀಡಲಾಗಿತ್ತು. ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ವಿವಾದ ಬಗೆಹರಿಸುವೆ

ಬೆಂಗಳೂರು ನಗರ ಉಸ್ತುವಾರಿ ಮಹತ್ವದ್ದು. ಎಲ್ಲರೂ ನಮ್ಮವರೇ. ಈ ವಿಚಾರವಾಗಿ ಎಲ್ಲರ ಜತೆ ಸಮಾಲೋಚನೆ ನಡೆಸಿ ಸೌಹಾರ್ದಯುತವಾದ ನಿರ್ಧಾರವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

click me!