Ramya Politics ರಮ್ಯಾ ರಾಜಕೀಯ ರೀ-ಎಂಟ್ರಿ ಮುನ್ಸೂಚನೆ?

By Kannadaprabha News  |  First Published May 14, 2022, 5:22 AM IST

 ಮತ್ತೆ ಮಂಡ್ಯ ಜಿಲ್ಲಾ ರಾಜಕಾರಣಕ್ಕೆ ಕರೆತರಲು ಒಳಗೊಳಗೆ ತಂತ್ರ

- ಸುಮಲತಾ ಬಿಜೆಪಿ ಸೇರಿದರೆ ಪರ್ಯಾಯ ನಾಯಕಿಯಾಗಿಸಲು ಚಿಂತನೆ

- ಜಿಲ್ಲೆಗೆ ಹೊಸಬರಲ್ಲ, ಸೆಲೆಬ್ರಿಟಿಯ ವರ್ಚಸ್ಸು


ವರದಿ: ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ರಾಜಕಾರಣದಲ್ಲಿ ಮಿಂಚಿನಂತೆ ಪ್ರತ್ಯಕ್ಷವಾಗಿ ಮಾಯವಾಗಿದ್ದ ಮಾಜಿ ಸಂಸದೆ ರಮ್ಯಾ ಅವರನ್ನು ಮತ್ತೆ ಜಿಲ್ಲಾ ರಾಜಕಾರಣಕ್ಕೆ ಕರೆತರುವ ಪ್ರಯತ್ನಗಳು ಕಾಂಗ್ರೆಸ್‌ ಪಾಳಯದೊಳಗೆ ಒಳಗಿಂದೊಳಗೆ ನಡೆಯುತ್ತಿವೆಯೇ ಎಂಬ ಅನುಮಾನಗಳು ಮೂಡಲಾರಂಭಿಸಿವೆ.

Tap to resize

Latest Videos

ಸಂಸದೆ ಸುಮಲತಾ ಅಂಬರೀಶ್‌ ಕಾಂಗ್ರೆಸ್‌ ಸೇರುವ ನಿರೀಕ್ಷೆ ದಿನದಿಂದ ದಿನಕ್ಕೆ ದೂರವಾಗುತ್ತಿದೆ. ಬಿಜೆಪಿ ಸೇರುವ ಕಡೆಗೆ ಅವರ ಆಸಕ್ತಿ, ಒಲವು ಹೆಚ್ಚುತ್ತಿರುವಂತೆ ಕಂಡುಬರುತ್ತಿದೆ. ಒಮ್ಮೆ ಸುಮಲತಾ ಬಿಜೆಪಿ ಸೇರುವುದು ಖಚಿತವಾದಲ್ಲಿ ಅವರಿಗೆ ಪರಾರ‍ಯಯವಾಗಿ ಮಾಜಿ ಸಂಸದೆ ರಮ್ಯಾ ಅವರನ್ನು ಜಿಲ್ಲಾ ರಾಜಕಾರಣಕ್ಕೆ ತರುವುದಕ್ಕೆ ಕಾಂಗ್ರೆಸ್‌ ನಾಯಕರು ಚಿಂತನೆ ನಡೆಸಿದ್ದಾರೆಯೇ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರಲಾರಂಭಿಸಿವೆ.

ಹಲ್ಲೆ ಕೇಸ್‌ನಲ್ಲಿ ಬೇಲ್ ಮೇಲಿರುವ ನಲಪಾಡ್‌ನಿಂದ ನನ್ನ ನೈತಿಕತೆ ಪಶ್ನೆ, ರಮ್ಯಾ ತರಾಟೆ!

ಜಿಲ್ಲೆಗೆ ಹೊಸಬರಲ್ಲ:
ಮಂಡ್ಯ ಜಿಲ್ಲಾ ರಾಜಕಾರಣಕ್ಕೆ ರಮ್ಯಾ ಹೊಸಬರೇನಲ್ಲ. ಈಗಾಗಲೇ 2013ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ 2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ 5 ಸಾವಿರ ಕಡಿಮೆ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಏಳು ವರ್ಷಗಳ ಕಾಲ ರಾಜಕೀಯ ಮತ್ತು ಚಿತ್ರರಂಗದಿಂದ ದೂರ ಉಳಿದಿದ್ದ ಮಾಜಿ ಸಂಸದೆ ರಮ್ಯಾ ಇದೀಗ 2023ರಲ್ಲಿ ಮತ್ತೆ ರಾಜಕಾರಣಕ್ಕೆ ಮರಳುವರೇ ಎನ್ನುವುದು ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.

ಇಷ್ಟುವರ್ಷ ರಾಜಕೀಯವಾಗಿ ಮಾತನಾಡದೆ ಮೌನವಾಗಿದ್ದ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಎಂ.ಬಿ.ಪಾಟೀಲ್‌ ಮತ್ತು ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಭೇಟಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸುವುದರೊಂದಿಗೆ ವಿಭಿನ್ನ ರೀತಿಯಲ್ಲಿ ರಾಜಕಾರಣದ ಸೆಕೆಂಡ್‌ ಇನ್ನಿಂಗ್‌್ಸ ಆರಂಭಿಸಿದ್ದಾರೆ. ಇದೇ ವೇಳೆ ರಮ್ಯಾ ಮಾತುಗಳನ್ನು ಕಾಂಗ್ರೆಸ್‌ ಪಕ್ಷದ ಹಲವು ನಾಯಕರು ಬೆಂಬಲಿಸಿದ್ದಾರೆ. ಸ್ವಪಕ್ಷೀಯ ಪ್ರಭಾವಿ ನಾಯಕರ ವಿರುದ್ಧ ರಮ್ಯಾ ಮಾತನಾಡಿದ್ದರೂ ಅವರಿಗೆ ಎಲ್ಲೆಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ಕಾಂಗ್ರೆಸ್‌ನೊಳಗೆ ಮೂಲೆಗುಂಪಾಗಿದ್ದ ರಮ್ಯಾ ಇದೀಗ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳುವ ಪ್ರಯತ್ನಕ್ಕಿಳಿದಿದ್ದಾರೆ ಎನ್ನಲಾಗುತ್ತಿದೆ.

ಸೆಲೆಬ್ರಿಟಿಯ ವರ್ಚಸ್ಸು
ಜಿಲ್ಲಾ ರಾಜಕಾರಣ ರಮ್ಯಾ ಅವರಿಗೆ ಚಿರಪರಿಚಿತ. ಜೊತೆಗೆ ರಮ್ಯಾ ಅವರನ್ನು ಜಿಲ್ಲೆಯ ಜನರು ಇನ್ನೂ ಮರೆತಿಲ್ಲ. ಸೆಲೆಬ್ರಿಟಿಯ ವರ್ಚಸ್ಸನ್ನು ಇನ್ನೂ ಕಾಪಾಡಿಕೊಂಡಿದ್ದಾರೆ. ಜನಸಾಮಾನ್ಯರೊಂದಿಗೆ ಬೆರೆಯುವ, ಮಹಿಳೆಯರಾದಿಯಾಗಿ ಯುವಕರು-ಯುವತಿಯರನ್ನು ಆಕರ್ಷಿಸುವ ಸಾಮರ್ಥ್ಯ ರಮ್ಯಾ ಅವರಲ್ಲಿರುವುದನ್ನು ಕಾಂಗ್ರೆಸ್‌ ನಾಯಕರು ಮನಗಂಡಿದ್ದಾರೆ. ಆ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಜಿಲ್ಲಾ ರಾಜಕಾರಣಕ್ಕೆ ಕರೆತಂದರೆ ಪಕ್ಷದ ಶಕ್ತಿ ಹೆಚ್ಚುತ್ತದೆ. ಪ್ರಬಲ ಅಭ್ಯರ್ಥಿಯೊಬ್ಬರು ದೊರಕಿದಂತಾಗುತ್ತದೆ ಎನ್ನುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರವಾಗಿದೆ.

ಟವಲ್ ಹಾಕೋಕೆ ಬಂದ ರಮ್ಯಾ, ಮೋಹಕತಾರೆಗೆ ಮೊಹಮ್ಮದ್ ನಲಪಾಡ್ ಚಾಟಿ!

ಕಾಂಗ್ರೆಸ್‌ಗೂ ಅನಿವಾರ್ಯ
2014ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ರಮ್ಯಾ ಅವರ ಸೋಲಿಗೆ ಇದ್ದ ಸಂದರ್ಭ-ಪರಿಸ್ಥಿತಿಗಳೇ ಬೇರೆ. ಬದಲಾಗಿರುವ ರಾಜಕೀಯ ಸನ್ನಿವೇಶವೇ ಬೇರೆಯಾಗಿದೆ. ಮಂಡ್ಯದ ಮಗಳು ಎಂದು ಗುರುತಿಸಿಕೊಂಡಿರುವ ರಮ್ಯಾ ಜಿಲ್ಲಾ ರಾಜಕಾರಣ ಪ್ರವೇಶಿಸುವುದು ಜಿಲ್ಲಾ ಕಾಂಗ್ರೆಸ್ಸಿಗರಿಗೂ ಅನಿವಾರ್ಯವಾಗಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳನ್ನು ಕಳೆದುಕೊಂಡು ಅಸ್ತಿತ್ವವೇ ಇಲ್ಲದಂತಾಗಿದ್ದ ಕಾಂಗ್ರೆಸ್‌ಗೆ ಈಗ ಒಂದೊಂದು ಸ್ಥಾನವೂ ಅನಿವಾರ್ಯವಾಗಿದೆ. ಅದಕ್ಕಾಗಿ ಸಮರ್ಥ ಅಭ್ಯರ್ಥಿಗಳಿಗಾಗಿ ಶೋಧ ನಡೆಸುತ್ತಿದ್ದು, ಅವರಲ್ಲಿ ರಮ್ಯಾ ಕೂಡ ಒಬ್ಬರಂತೆ ಗೋಚರಿಸುತ್ತಿದ್ದಾರೆ.

ಸಕ್ರಿಯಗೊಳಿಸುವ ಪ್ರಯತ್ನ
ಚುನಾವಣೆಗೆ ಒಂದು ವರ್ಷವಿರುವಂತೆಯೇ ಮಾಜಿ ಸಂಸದೆ ರಮ್ಯಾ ಅವರನ್ನು ರಾಜಕೀಯವಾಗಿ ಸಕ್ರಿಯಗೊಳಿಸುವ ಪ್ರಯತ್ನಗಳು ನಡೆಯುತ್ತಿರುವಂತೆ ಕಂಡುಬರುತ್ತಿದೆ. ರಮ್ಯಾ ಹಿಂದಿಗಿಂತಲೂ ಹೆಚ್ಚು ಪ್ರಬುದ್ಧರಾಗಿದ್ದಾರೆ. ಮಾತುಗಾರಿಕೆಯಲ್ಲೂ ಸ್ಪಷ್ಟತೆ, ನಿಖರತೆ ಇರುವುದರಿಂದ ಪಕ್ಷಕ್ಕೆ ಭರವಸೆಯ ಮಹಿಳಾ ನಾಯಕಿಯೊಬ್ಬರು ದೊರಕಿದಂತಾಗುವುದು. ಒಮ್ಮೆ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆಯಾದಲ್ಲಿ ಅವರಿಗೆ ಪರಾರ‍ಯಯವಾಗಿ ಕಾಂಗ್ರೆಸ್‌ ಪಕ್ಷದಿಂದ ಅವರಿಗೆ ಸರಿಸಮನಾಗಿರುವ ಸೆಲೆಬ್ರಿಟಿ ಮತ್ತು ಮಾಜಿ ಸಂಸದೆಯನ್ನು ಎದುರಾಳಿಯಾಗಿ ಚುನಾವಣಾ ಅಖಾಡಕ್ಕಿಳಿಸಬಹುದು ಎನ್ನುವ ತಂತ್ರಗಾರಿಕೆ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಮರ್ಥ ಅಭ್ಯರ್ಥಿಗಳ ಕೊರತೆ
ಪ್ರಸ್ತುತ ಜಿಲ್ಲಾ ರಾಜಕಾರಣದಲ್ಲಿ ಎರಡು-ಮೂರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಸಮರ್ಥ ಅಭ್ಯರ್ಥಿಗಳೇ ಇಲ್ಲದಂತಾಗಿದೆ. ಲೋಕಸಭೆಗೆ ಸ್ಪರ್ಧಿಸುವ ಪ್ರಬಲ ಅಭ್ಯರ್ಥಿಗಳೂ ಕಾಂಗ್ರೆಸ್‌ನೊಳಗೆ ಕಾಣಸಿಗುತ್ತಿಲ್ಲ. ಇಂತಹ ಸಮಯದಲ್ಲಿ ರಮ್ಯಾ ಅವರನ್ನು ಮತ್ತೆ ಜಿಲ್ಲಾ ರಾಜಕಾರಣಕ್ಕೆ ಕರೆತರುವುದರಿಂದ ಸಮರ್ಥ ಅಭ್ಯರ್ಥಿಯ ಜೊತೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಹೆಚ್ಚಿನ ನೆರವಾಗಲಿದೆ ಎಂಬ ಮಾತುಗಳು ಕಾಂಗ್ರೆಸ್‌ ಪಾಳಯದಿಂದಲೇ ಕೇಳಿಬರುತ್ತಿದೆ.

ಕಾರ್ಯವೈಖರಿ ಮೆಚ್ಚುಗೆ
ಮಂಡ್ಯ ಸಂಸದೆಯಾಗಿ ಕೇವಲ 6 ತಿಂಗಳಲ್ಲಿ ರಮ್ಯಾ ಮಾಡಿದ ಕೆಲಸಗಳು, ಅವರ ಕಾರ್ಯವೈಖರಿಯನ್ನು ಇನ್ನೂ ಜಿಲ್ಲೆಯ ಜನರು ಮಾತನಾಡುತ್ತಿದ್ದಾರೆ. ಉತ್ತಮ ರಾಜಕಾರಣಿಯಾಗಿ ಬೆಳವಣಿಗೆ ಸಾಧಿಸುವುದನ್ನು ಕೆಲವೇ ತಿಂಗಳುಗಳಲ್ಲಿ ರಮ್ಯಾ ತೋರ್ಪಡಿಸಿದ್ದರು. ಅವರ ರಾಜಕೀಯ ಬೆಳವಣಿಗೆಯನ್ನು ಸಹಿಸದ ಸ್ವಪಕ್ಷೀಯರಲ್ಲಿ ಕೆಲವರು ಅಂದು ಸೋಲಿಗೆ ಕಾರಣರಾಗಿದ್ದರು. ಇದರಿಂದ ಬೇಸತ್ತ ರಮ್ಯಾ ರಾಜಕೀಯದಿಂದ ದೂರ ಉಳಿದರು. 2018ರ ಚುನಾವಣೆ ಸಮಯದಲ್ಲೂ ಎಲ್ಲೂ ಕಾಣಿಸಿಕೊಳ್ಳಲಿಲ್ಲ. 2019ರ ಲೋಕಸಭಾ ಚುನಾವಣೆ ಕಡೆಗೂ ತಲೆಹಾಕಲಿಲ್ಲ. 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಕ್ರಿಯರಾಗುತ್ತಿರುವರೇ ಎನ್ನುವುದನ್ನು ಕಾದುನೋಡಬೇಕಿದೆ.
 

click me!