ಪರಿಷತ್ ಕಲಾಪದಲ್ಲಿ ಟಿಎ ಸರವಣ ಅವರ ಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಅರ್ಹತೆ ಮತ್ತು ಸಮುದಾಯದ ಬಗ್ಗೆ ಅಸಹನೆ ತೋರುವವರ ವಿರುದ್ಧ ಅವರು ಕಿಡಿಕಾರಿದರು.
ಪರಿಷತ್: 'ಹಾಲಾದರೂ ಕುಡಿತಿವಿ, ನೀರಾದರೂ ಕುಡಿತಿವಿ ಇವರಿಗೆ ಯಾಕೆ ಅದೆಲ್ಲ, ಇವರಿಗೆ ಏನು ಬೇಕು?' ಎಂದು ಟಿಎ ಸರವಣ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಗರಂ ಆದ ಘಟನೆ ನಡೆಯಿತು.
ಇಂದು ಪರಿಷತ್ ಕಲಾಪ ವೇಳೆ,'ಪ್ರಿಯಾಂಕ್ ಖರ್ಗೆ ಹಾಲು ಕುಡಿದಷ್ಟು ನಾನು ನೀರು ಕುಡಿದಿಲ್ಲ' ಎಂಬ ಶರವಣ ಮಾತಿಗೆ ಕೆಂಡಾಮಂಡಲರಾದ ಪ್ರಿಯಾಂಕ್ ಖರ್ಗೆ ಅವರು, ಇವರಿಗೆಲ್ಲ ಯಾಕೆ ನನ್ನ ಬಗ್ಗೆ ಅಸಹನೆ, ಈ ಅಸಹನೆ ಬಡ ಕುಟುಂಬದ, ಸಮುದಾಯದ ಬಗ್ಗೆ ಅಸಹನೆಯಿದೆ. ಮಾಧ್ಯಮದಲ್ಲೂ ಅದೇ, ಮೇಲ್ಮನೆ, ಕೆಳಮನೆಯಲ್ಲೂ ಅದೇ ಮಾತು ಕೇಳಿಬರ್ತಿದೆ. ಕೆಳವರ್ಗದ ಮೇಲೆ ಯಾಕಿಷ್ಟು ಅಸಹನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಇಲ್ಲಿ ಅರ್ಹತೆ ಮೇಲೆ ಬಂದಿದ್ದೇನೆ:
ಪ್ರಿಯಾಂಕ್ ಖರ್ಗೆ ಕಂಡ್ರೆ ನಿಮಗೆ ಯಾಕೆ ಅಸಹನೆ? ನಾನು ಇಲ್ಲಿ ಯಾರ ಮರ್ಜಿ, ಮುಲಾಜಿನಲ್ಲಿ ಬಂದಿಲ್ಲ ಅರ್ಹತೆ ಮೇಲೆ ಬಂದಿದ್ದೇನೆ. ನಿಮ್ಮ ಭಿಕ್ಷೆಯಿಂದ ಅಥವಾ ಯಾರದ್ದೋ ಭಿಕ್ಷೆಯಿಂದ ನಾನಿಲ್ಲಿಗೆ ಬಂದಿಲ್ಲ. ಯಾವಾಗಲೂ ನಾನು ಎದ್ದು ನಿಂತು ಮಾತಾಡಿದಾಗ ಅಸಹನೆ ತೋರಿಸುತ್ತಾರೆ. ಜನರ ಕೃಪೆಯಿಂದ ನಾನು, ಮಲ್ಲಿಕಾರ್ಜುನ ಖರ್ಗೆಯವರು ಇಷ್ಟರ ಮಟ್ಟಕ್ಕೆ ಬಂದಿದ್ದೇವೆ ಸಮುದಾಯದವರು ಹಾಲು ಕುಡಿಬಾರ್ದಾ? ಎಂದು ಪ್ರಶ್ನಿಸಿದರು. ಈ ವೇಳೆ 'ನಾನು ಏನು ತಪ್ಪು ಮಾತನಾಡಿದೆ ಹೇಳಿ ಎಂದು ಶರವಣ ಮರುಪ್ರಶ್ನಿಸಿದರು.
ಇದನ್ನೂ ಓದಿ: ಕರ್ನಾಟಕ ಮುಂಚೂಣಿ ರಾಜ್ಯವೆಂಬುದನ್ನು ಬಜೆಟ್ ನಿರೂಪಿಸಿದೆ: ಸಚಿವ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ಬಂದ ಡಿಕೆಶಿ:
ಈ ವೇಳೆ ಪ್ರಿಯಾಂಕ್ ಖರ್ಗೆ ಬೆಂಬಲಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಪ್ರಿಯಾಂಕ್ ಖರ್ಗೆ ಅರ್ಹತೆಯಿಂದ ಬಂದವರು. ಅವರು ನಮ್ಮ ಪಾರ್ಟಿಯ ಧ್ವನಿ. ಯಾರು ಏನು ಕುಡಿತಾರೆ ಅಂತಾ ನಾವು ಕೇಳೋಕಾಗುತ್ತಾ? ನಾನು ಬೆಳಗ್ಗೆ ಎದ್ರೆ ವಿಸ್ಕಿ ಕುಡಿತಿನಿ ಅದನ್ನು ಯಾಕೆ ಅಂತ ಕೇಳೋಕಾಗತ್ತಾ ಎಂದ ಡಿಕೆ ಶಿವಕುಮಾರ.
ನನ್ನ ವೃತ್ತಿ ಬಗ್ಗೆಯೂ ಮಾತಾಡ್ತಾರಲ್ಲ?
ಈ ವೇಳೆ ಪುನಃ ತನ್ನ ಮಾತು ಸಮರ್ಥಿಸಿಕೊಂಡ ಸರವಣ, ನಾನು ಪ್ರಿಯಾಂಕ್ ಖರ್ಗೆ ಬಗ್ಗೆ ಒಳ್ಳೆಯ ಮನಸಿನಿಂದ ಹೇಳಿದ್ದೇನೆ ಹೊರತು ಯಾವುದೇ ಉದ್ದೇಶವಿಲ್ಲ. ನನ್ನ ಹೇಳಿಕೀ ಅಪಾರ್ಥ ಮಾಡಿಕೊಂಡಿದ್ದಾರೆ. ಅವರು ಅಪಾರ್ಥ ಮಾಡಿಕೊಂಡಿದ್ದರೆ ನಾನು ಏನು ಮಾಡಲಿಕ್ಕೆ ಆಗುತ್ತೆ? ನನ್ನ ಬಗ್ಗೆ, ನನ್ನ ವೃತ್ತಿ ಬಗ್ಗೆಯೂ ಕೆಲವರು ಪದೇಪದೆ ಮಾತನಾಡುತ್ತಾರೆ. ಹಾಗಾಂತ ಅವರ ಮೇಲೆ ಕೋಪಿಸಿಕೊಳ್ಳಲಿಕ್ಕೆ. ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ ಎಂದರು.