ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಿರುಪರಿಚಯ

By Suvarna NewsFirst Published Jul 27, 2021, 8:42 PM IST
Highlights

* ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ
* ಕರ್ನಾಟಕದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಕಿರುಪರಿಚಯ
 * ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ

ಬೆಂಗಳೂರು, (ಜು.27): ಬಿ.ಎಸ್.ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯಿತ ಸಮುದಾಯದ ಪ್ರಬಲ ಮುಖಂಡ, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.

ಹಾವೇಜಿ ಜಿಲ್ಲೆಯ ಶಿಗ್ಗಾವಿ ವಿಧಾನಸಭೆ ಕ್ಷೇತ್ರದ ಶಸಕರಾಗಿರುವ ಬೊಮ್ಮಾಯಿ ಈ ಹಿಂದಿನ ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು. ಅದರಲ್ಲೂ ಮುಖ್ಯವಾಗಿ ಬಿಎಸ್‌ವೈ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ

 ಬಸವರಾಜ ಬೊಮ್ಮಾಯಿ ಮೂಲತಃ ಜನತಾ ಪರಿವಾರದ ಹಿನ್ನೆಲೆ ಹೊಂದಿದವರು. ತಂದೆ ಎಸ್.ಆರ್.ಬೊಮ್ಮಾಯಿ ಜನತಾ ಪಕ್ಷದ ಪ್ರಭಲ ಮುಖಂಡರಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ತಂದೆ ಕಾಲದಲ್ಲಿ ಬಸವರಾಜ ಬೊಮ್ಮಾಯಿ ಸಕ್ರೀಯ ರಾಜಕಾರಣದಲ್ಲಿ ಇಲ್ಲವಾದರೂ ತಂದೆಯ ರಾಜಕೀಯ ಪಯಣಕ್ಕೆ ಸಾಥ್ ನೀಡಿದವರು.

ಬಾಲ್ಯ ಮತ್ತು ಶಿಕ್ಷಣ
ಬಸವರಾಜ್ ಬೊಮ್ಮಾಯಿ 1960ರ ಜನವರಿ 18ರಂದು ಧಾರಾವಡ ಜಿಲ್ಲೆಯ ಹುಬ್ಬಳ್ಳಿಯಲ್ಲಿ ಜನಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರರಾದ ಇವರು ರಾಜಕೀಯ ಹಿನ್ನೆಲೆ ಹೊಂದಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಪತ್ನಿ ಹೆಸರು ಚೆನ್ನಮ್ಮ ಹಾಗೂ ಇಬ್ಬರು ಮಕ್ಕಳಿದ್ದಾರೆ. 

ರಾಜಕೀಯ ಜೀವನ
ಜನತಾದಳದೊಂದಿಗೆ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದ ಬಸವರಾಜ್ ಬೊಮ್ಮಾಯಿ 1998 ಹಾಗೂ 2004ರಲ್ಲಿ ಎರಡು ಅವಧಿಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದರು. ಜನತಾ ದಳದ ಮೂಲಕ ರಾಜಕೀಯ ಆರಂಭಿಸಿದ್ದ ಅವರು 1999 ರಲ್ಲಿ ಜನತಾ ದಳ ವಿಭಜನೆ ಆದಾಗ ಸಂಯುಕ್ತ ಜನತಾ ದಳವನ್ನು ಆಯ್ಕೆ ಮಾಡಿ ರಾಜಕೀಯ ಜೀವನ ಮುಂದುವರಿಸಿದ್ದರು. ಆ ಬಳಿಕ ಅವರು 2008ರಲ್ಲಿ ಬಿಜೆಪಿ ಸೇರಿ ಹಾವೇರಿ ಜಿಲ್ಲೆಯ ಶಿಗ್ಗಾವಿ ನಿಂದ ಶಾಶಕರಾಗಿ ಆಯ್ಕೆ ಆಗಿದ್ದು, 2008ರಲ್ಲಿ ಬೃಹತ್ ನೀರಾವರಿ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

click me!