ನೂತನ ಸಿಎಂ ಆಗಿ ಬೊಮ್ಮಾಯಿ ಆಯ್ಕೆ; ತಂದೆ ಬಳಿಕ ಮಗ ಮುಖ್ಯಮಂತ್ರಿಯಾದ ಕರ್ನಾಟಕದ 2ನೇ ಜೋಡಿ!

By Suvarna NewsFirst Published Jul 27, 2021, 8:37 PM IST
Highlights
  • ಬಿಎಸ್ ಯಡಿಯೂರಪ್ಪ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಆಯ್ಕೆ
  • ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ
  • ತಂದೆ ಬಳಿಕ ಮಗ ಮುಖ್ಯಮಂತ್ರಿಯಾದ ಕರ್ನಾಟಕದ 2ನೇ ಜೋಡಿ

ಬೆಂಗಳೂರು(ಜು.27):  ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಕರ್ನಾಟಕ ಮುಂದಿನ ಮುಖ್ಯಮಂತ್ರಿ ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇಂದು(ಜು.27) ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಲಿಂಗಾಯಿತ ನಾಯಕ, ಬಿಎಸ್ ಯಡಿಯೂರಪ್ಪ ಆಪ್ತ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಗಿದೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ

ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗುತ್ತಿದ್ದಂತೆ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ತಂದೆ ಬಳಿಕ ಮಗ ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವುದು ಕರ್ನಾಟಕದಲ್ಲಿ ಇದು 2ನೇ ಬಾರಿ. ಬಸವರಾಜ ಬೊಮ್ಮಾಯಿ ತಂದೆ ಸೋಮಪ್ಪ ರಾಯಪ್ಪ ಬೊಮ್ಮಾಯಿ(ಎಸ್.ಆರ್ ಬೊಮ್ಮಾಯಿ) ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇದಕ್ಕೂ ಮೊದಲು ಹೆಚ್ ಡಿ ದೇವೇಗೌಡ ಹಾಗೂ ಪುತ್ರ ಹೆಚ್‌ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹೆಚ್ ಡಿ ದೇವೇಗೌಡ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. 1994, ಡಿಸೆಂಬರ್ 11 ರಿಂದ 1996, ಮೇ 31ರ ವರೆಗೆ ದೇವೇಗೌಡ ಕರ್ನಾಟಕ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಬಳಿಕ ಜೂನ್ 1, 1996ರಲ್ಲಿ ದೇವೇಗೌಡ ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ್ದಾರೆ.

ದೇವೇಗೌಡ ಪುತ್ರ ಹೆಚ್‌ ಡಿ ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. 2006 ರಿಂದ 2007ರ ವರೆಗೆ ಮೊದಲ ಬಾರಿ ಮುಖ್ಯಂತ್ರಿಯಾಗಿ ಅಧಿಕಾರ ನಡೆಸಿದ್ದರೆ, ಎರಡನೆ ಬಾರಿಗೆ 2018 ರಿಂದ 2019ರ ವರೆಗೆ ಮುಖ್ಯಮಂತ್ರಿಯಾಗಿದ್ದರು.

ತಂದೆ ಸಿಎಂ ಆದ 32 ವರ್ಷದ ಬಳಿಕ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬೊಮ್ಮಾಯಿ ತಂದೆ ಎಸ್.ಆರ್ ಬೊಮ್ಮಾಯಿ ಕರ್ನಾಟಕದ 11ನೇ ಮುಖ್ಯಮಂತ್ರಿಯಾಗಿ  ಆಡಳಿತ ನಡೆಸಿದ್ದಾರೆ. 1988, ಆಗಸ್ಟ್ 13 ರಿಂದ 1989, ಎಪ್ರಿಲ್ 21ರ ವರೆಗೆ ಕರ್ನಾಟಕ ಮುಖ್ಯಮಂತ್ರಿಯಾಗಿದ್ದರು.

click me!