
ಬೆಂಗಳೂರು (ಏ.20): ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಬಹುಮತಕ್ಕೆ ಬೆನ್ನೆಲುಬಾಗಿ ನಿಂತಿದ್ದ ಮುಸ್ಲಿಂ ಸಮುದಾಯ, ಈಗ ಅದೇ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದೆ. ರಾಜ್ಯದ ವಿವಿಧ ಭಾಗಗಳ ಪ್ರಮುಖ ಮುಸ್ಲಿಂ ಸಂಘಟನೆಗಳು, ಸಂಸ್ಥೆಗಳು ಮತ್ತು ಒಕ್ಕೂಟಗಳ ಪ್ರತಿನಿಧಿಗಳು ಜಂಟಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುವ ಮೂಲಕ ತಮ್ಮ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. 'ಕಾಂಗ್ರೆಸ್ ಪಕ್ಷಕ್ಕೆ ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ನೋವು ತಂದಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
2023ರಲ್ಲಿ ರಾಜ್ಯದ ಮುಸ್ಲಿಮರು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಒಗ್ಗಟ್ಟಾಗಿ ಕಾಂಗ್ರೆಸ್ ಕೈಹಿಡಿದರು. ಆದರೆ, ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ ಎಂಬುದು ಮುಖಂಡರ ಪ್ರಮುಖ ಆರೋಪ. ಆಡಳಿತಶಾಹಿಯಲ್ಲಿ, ಪ್ರಮುಖ ನೇಮಕಾತಿಗಳಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ. 'ನಮ್ಮನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆ' ಎಂಬ ಭಾವನೆ ಈಗ ಸಮುದಾಯದಲ್ಲಿ ಮನೆ ಮಾಡುತ್ತಿದೆ.
ಇತ್ತೀಚಿನ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಡೆದುಕೊಂಡ ರೀತಿ ಸಮುದಾಯಕ್ಕೆ ತೀವ್ರ ಆಘಾತ ನೀಡಿದೆ. ಮೊದಲಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಟಿಕೆಟ್ ನಿರಾಕರಿಸಲಾಯಿತು. ಅಷ್ಟೇ ಅಲ್ಲದೆ, ಚುನಾವಣೆ ಮುಗಿದ ಕೂಡಲೇ ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ ನಾಯಕರನ್ನು ಯಾವುದೇ ವಿವರಣೆ ಕೇಳದೆ ಏಕಾಏಕಿ ವಜಾ ಮಾಡಲಾಗಿದೆ. ಇದು ಸಮುದಾಯದ ಘನತೆಗೆ ಧಕ್ಕೆ ತಂದಿದೆ ಎಂದು ಪತ್ರದಲ್ಲಿ ಖಂಡಿಸಲಾಗಿದೆ.
ಪಕ್ಷದ ಶಿಸ್ತುಕ್ರಮ ಎಂಬುದು ಕೇವಲ ಮುಸ್ಲಿಂ ನಾಯಕರಿಗೆ ಮಾತ್ರವೇ? ಎಂದು ಮುಖಂಡರು ಪ್ರಶ್ನಿಸಿದ್ದಾರೆ. ಈ ಹಿಂದೆ ಬೇರೆ ಪ್ರಬಲ ಸಮುದಾಯಗಳ ನಾಯಕರು ಬಹಿರಂಗವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದಾಗ ಸುಮ್ಮನಿದ್ದ ಹೈಕಮಾಂಡ್, ಈಗ ಮುಸ್ಲಿಂ ನಾಯಕರ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಂಡಿರುವುದು ತಾರತಮ್ಯಕ್ಕೆ ಸಾಕ್ಷಿಯಾಗಿದೆ. "ಕಾಂಗ್ರೆಸ್ ಮುಸ್ಲಿಂ ನಾಯಕರ ವಿರುದ್ಧವೇ ಮತ್ತೊಬ್ಬ ಮುಸ್ಲಿಂ ನಾಯಕನನ್ನು ಎತ್ತಿಕಟ್ಟುವ ತಂತ್ರ ಮಾಡುತ್ತಿದೆ" ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ "ಮುಸಲ್ಮಾನರಿಗೆ ಕಾಂಗ್ರೆಸ್ ಕೊಟ್ಟಷ್ಟು ರಕ್ಷಣೆ ಬೇರೆ ಯಾರೂ ಕೊಟ್ಟಿಲ್ಲ" ಎಂಬ ಹೇಳಿಕೆಗೆ ಮುಸ್ಲಿಂ ಒಕ್ಕೂಟಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. "ರಕ್ಷಣೆ ನೀಡುವುದು ಸಂವಿಧಾನಬದ್ಧ ಹಕ್ಕು ಮತ್ತು ಸರ್ಕಾರದ ಕರ್ತವ್ಯವೇ ಹೊರತು ಅದು ಪಕ್ಷ ನೀಡುವ ಉಪಕಾರವಲ್ಲ. ನಮಗೆ ಅಧಿಕಾರದಲ್ಲಿ ಪಾಲು ಬೇಕು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಈಡೇರಿಕೆ ಬೇಕು" ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಪತ್ರದ ಕೊನೆಯಲ್ಲಿ ಸಮುದಾಯದ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಎಚ್ಚರಿಕೆ ನೀಡಿದ್ದಾರೆ. "ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಕಾಂಗ್ರೆಸ್ ಭಾವಿಸಿದ್ದರೆ ಅದು ತಪ್ಪು. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ನಾವು ನಮ್ಮ ರಾಜಕೀಯ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಳ್ಳಬೇಕಾಗುತ್ತದೆ" ಎಂದು ಹೇಳುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಬೆಂಬಲಿಸದಿರುವ ಮುನ್ಸೂಚನೆ ನೀಡಿದ್ದಾರೆ.
ಈ ಜಂಟಿ ಪತ್ರಕ್ಕೆ ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ (ವಿಜಯಪುರ), ಅಬ್ದುಲ್ ಖದೀರ್ ಸಾಹೇಬ್ (ಶಾಹೀನ್ ಗ್ರೂಪ್, ಬೀದರ್), ಕೆ.ಎಸ್. ಮೊಹಮ್ಮದ್ ಮಸೂದ್ (ಮಂಗಳೂರು), ಮೌಲಾನಾ ಇಫ್ತಿಖಾರ್ ಅಹ್ಮದ್ ಕಾಸ್ಮಿ ಸೇರಿದಂತೆ ರಾಜ್ಯದ ಮೂಲೆ ಮೂಲೆಯ 30ಕ್ಕೂ ಹೆಚ್ಚು ಪ್ರಭಾವಿ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಸಹಿ ಹಾಕಿದ್ದಾರೆ. ಈ ಬೆಳವಣಿಗೆಯಿಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಲೋಲ-ಕಲ್ಲೋಲ ಶುರುವಾಗಿದ್ದು, ಹೈಕಮಾಂಡ್ ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.