
ಸುವರ್ಣ ವಿಧಾನಸೌಧ (ಡಿ.11): ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದರಂತೆ ವರ್ಷಕ್ಕೆ 12 ವೇತನ ಸಹಿತ ಋುತುಚಕ್ರ ರಜೆ ನೀಡಲು ಅನುವಾಗುವಂತೆ ಕರ್ನಾಟಕ ಮಹಿಳಾ ಯೋಗಕ್ಷೇಮ ಕಾಯ್ದೆ-2025 ಜಾರಿಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ. ಕಾಯ್ದೆಯಡಿ ರಾಜ್ಯದಲ್ಲಿ ಕರ್ನಾಟಕ ಯೋಗಕ್ಷೇಮ ಪ್ರಾಧಿಕಾರ ರಚಿಸಲಾಗುವುದು. ಜತೆಗೆ, ಮುಟ್ಟು ಅವಧಿಯಲ್ಲಿ ಮಹಿಳೆಗೆ ರಜೆ ನೀಡದಿರುವುದು, ಭೇದಭಾವ ಮಾಡುವುದು, ಅಸ್ಪೃಶ್ಯರಂತೆ ಕಂಡರೆ 5,000 ರು. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.
ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ: ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಋತುಚಕ್ರ ರಜೆ ನೀಡಲು ಸರ್ಕಾರ ನಿರ್ಧಾರ ಮಾಡಿತ್ತು. ಇದರ ವಿರುದ್ಧ ಹೋಟೆಲ್ ಮಾಲೀಕರ ಸಂಘ ಸೇರಿ ವಿತರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲೇ ಪ್ರತ್ಯೇಕ ಕಾಯ್ದೆ ಜಾರಿಗೆ ನಿರ್ಧರಿಸಿದ್ದು, ಕಾಯ್ದೆಯ ಸದುದ್ದೇಶದ ವಿರುದ್ಧ ಯಾರೂ ನ್ಯಾಯಾಲಯದ ಮೆಟ್ಟಿಲೇರುವಂತಿಲ್ಲ ಎಂಬುದನ್ನು ಕಾಯ್ದೆಯಲ್ಲೇ ಸ್ಪಷ್ಟಪಡಿಸಲಾಗಿದೆ.
ಯಾರ್‍ಯಾರಿಗೆ ಅನ್ವಯ?: ಋುತುಚಕ್ರ ರಜೆ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ ರಜೆ ಅನ್ವಯವಾಗಲಿದೆ. ಇದು ಮಹಿಳೆಯರು, ಯುವತಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಅನ್ವಯವಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಲ್ಲಿ ಟ್ರಾನ್ಸ್ ಮೆನ್ ಹಾಗೂ ಟ್ರಾನ್ಸ್ ವುಮೆನ್ ಇಬ್ಬರಿಗೂ ಈ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಇನ್ನು ಮುಟ್ಟು ಅವಧಿ ಮುಗಿದ ಅಥವಾ 52 ವರ್ಷ ದಾಟಿದ ಮಹಿಳಾ ಉದ್ಯೋಗಿಗೆ ಮುಟ್ಟಿನ ರಜೆ ಅನ್ವಯವಾಗುವುದಿಲ್ಲ. ಜತೆಗೆ ಮುಟ್ಟಿನ ಅವಧಿಯು ಸರ್ಕಾರಿ ರಜೆ ದಿನ ಅಥವಾ ಭಾನುವಾರ ಉಂಟಾದರೆ ವಾರದ ಒಂದು ದಿನ ರಜೆ ಪಡೆಯಬಹುದು. ಒಂದು ತಿಂಗಳ ರಜೆಯನ್ನು ಮತ್ತೊಂದು ತಿಂಗಳಲ್ಲಿ ಸೇರಿಸಿ ಪಡೆಯಲು ಅವಕಾಶವಿಲ್ಲ.
ಹಾಜರಾತಿಯಲ್ಲಿ ಶೇ.2 ರಷ್ಟು ವಿನಾಯ್ತಿ: ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಒಂದು ದಿನ ರಜೆ ನೀಡಲಾಗುವುದು. ಇದರಿಂದ ಶೈಕ್ಷಣಿಕ ಹಾಜರಾತಿಗೆ ಸಮಸ್ಯೆಯಾಗದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.2 ರಷ್ಟು ಹಾಜರಾತಿ ವಿನಾಯಿತಿ ನೀಡಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಜತೆಗೆ ಖಾಸಗಿ ಸಂಸ್ಥೆಗಳಲ್ಲಿಬಯೋ ಡೀಗ್ರೇಡೇಬಲ್ ಸ್ಯಾನಿಟರಿ ಪ್ಯಾಡ್, ಮುಟ್ಟಿನ ಕಪ್, ಟ್ಯಾಂಪನ್ಸ್, ಸ್ಯಾನಿಟರಿ ನ್ಯಾಪ್ ಕಿನ್ಸ್, ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಬೇಕು.
ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತ ಹಾಗೂ 30ಕ್ಕೂ ಹೆಚ್ಚು ಮಂದಿ ಸಾವಿಗೆ ಕಾರಣಗಳ ಕುರಿತ ಅಂತಿಮ ತನಿಖಾ ವರದಿಯನ್ನು ನಿವೃತ್ತ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದ ಸಮಿತಿ ಡಿ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.
ಐದು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದರು. ಇದರಲ್ಲಿ 32 ಮಂದಿ ಅಧಿಕೃತವಾಗಿ ಆಕ್ಸಿಜನ್ ಕೊರತೆಯಿಂದಲೇ ಸಾವಿಗೀಡಾಗಿದ್ದು ಸಾಬೀತಾಗಿತ್ತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ವಿಷಯವಾಗಿ ಪರಿಣಮಿಸಿತ್ತು. ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಇದೀಗ ವರದಿಯು ಸಂಪುಟದಲ್ಲಿ ಮಂಡನೆಯಾಗಲಿದ್ದು, ಬಳಿಕ ಉಭಯ ಸದನಗಳಲ್ಲಿ ಮಂಡನೆ ಮಾಡುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.