
ಬೆಂಗಳೂರು (ಮೇ.13): ಒಂದೂವರೆ ತಿಂಗಳಿಂದ ಕಾವೇರಿದ್ದ ಲೋಕಸಭಾ ಚುನಾವಣೆಯ ಪ್ರಮುಖ ಘಟ್ಟವಾದ ಮತದಾನವು ಮುಗಿದಿದ್ದು, ಎಲ್ಲಿ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ, ಅದರಲ್ಲಿ ತಮಗೆಷ್ಟು, ಅವರಿಗೆಷ್ಟು ಎಂಬ ಲೆಕ್ಕಾಚಾರ ಶುರುವಾಗಿದ್ದು, ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಜೂ. 4ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಈ ನಡುವೆ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ರವೀಂದ್ರ ಎಂಬುವರು ಕಾಂಗ್ರೆಸ್‌ನ ಗೀತಾ ಗೆಲ್ಲುತ್ತಾರೆಂದು ತಮ್ಮ ಟ್ರ್ಯಾಕ್ಟರ್ ಪಣಕ್ಕಿಟ್ಟು ಬಿಜೆಪಿ ಕಾರ್ಯಕರ್ತರಿಗೆ ಸವಾಲು ಹಾಕಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಗೆಲ್ಲುತ್ತಾರೆ, ತಾಕತ್ತಿದ್ದರೆ ಚಾಲೆಂಜ್ ಕಟ್ಟಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ. ಇವರು ಸವಾಲು ಹಾಕಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಪರಿಷತ್ ಚುನಾವಣೆ: ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವಂತೆ ಮೂವರು ಶಿಕ್ಷಣ ಸಚಿವರಿಗೆ ಸೂಚನೆ
ಈ ಮಧ್ಯೆ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಗೆಲ್ಲುತ್ತಾರೆ, ಬೇಕಾದರೆ ಬಾಜಿ ಕಟ್ಟಿ ಎಂದು ಸವಾಲು ಹಾಕಿರುವ ಯುವಕರ ತಂಡ, ಬಾಜಿಗೆ ಎರಡು ಟಗರುಗಳನ್ನು ಪಣಕ್ಕಿಟ್ಟಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿನ ಯುವಕರು ಈ ಸವಾಲು ಎಸೆದಿದ್ದು, ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಗೆಲ್ಲುತ್ತಾರೆ ಎನ್ನುವವರು ಬಾಜಿ ಕಟ್ಟಬಹುದು ಎಂದು ಸವಾಲು ಹಾಕಿದ್ದಾರೆ.
ಗದಗ- ಹಾವೇರಿಯಲ್ಲೂ ಬೆಟ್ಟಿಂಗ್ ಬಲು ಜೋರು:
ಗದಗ- ಹಾವೇರಿಯಲ್ಲೂ ಬೆಟ್ಟಿಂಗ್ ಜೋರಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ (ಇಂಡಿಯಾ ಮೈತ್ರಿ ಕೂಟ) ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ (ಎನ್ ಡಿಎ ಮೈತ್ರಿ ಕೂಟ) ಅಭ್ಯರ್ಥಿಗಳು, ಇತರೆ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಈಗಾಗಲೇ ಮತಗಟ್ಟೆವಾರು ಆಗಿರುವ ಮತದಾನ ವಿವರ ಕೈಯಲ್ಲಿ ಹಿಡಿದು ತಮಗೆ ಬರಬಹುದಾದ ಮತ ಮತ್ತು ತಮ್ಮಿಂದ ಯಾವ ಅಭ್ಯರ್ಥಿ ಸೋಲಲಿದ್ದಾರೆ ಎಂಬ ಲೆಕ್ಕಾಚಾರ ಆರಂಭಿಸಿದ್ದಾರೆ.
16 ದಿನದಿಂದ ಪ್ರಜ್ವಲ್ ನಾಪತ್ತೆ, ಇಂದು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದ ಸಂಸದ, ಆದ್ರೆ ಬರೋದು ಅನುಮಾನ!
ಕೆಲವಡೆ ಎನ್ ಡಿಎ ಅಭ್ಯರ್ಥಿ ಪರ ದುಪ್ಪಟ್ಟು ಬಾಜಿ ಕಟ್ಟಿದ್ದರೆ ಕೆಲವಡೆ ಇಂಡಿಯಾ ಅಭ್ಯರ್ಥಿ ಪರ ದುಪ್ಪಟ್ಟು ಬಾಜಿ ಕಟ್ಟುತ್ತಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಕ್ಷಾಂತರ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಹಣ, ಬೈಕ್, ಮನೆ ಪಣಕ್ಕಿಟ್ಟಿರುವ ಉದಾಹರಣೆಗಳೂ ಕೇಳಿಬರುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ಜಮೀನು, ಟ್ರ್ಯಾಕ್ಟರ್, ಕಾರು, ಜಾನುವಾರು ಪಣಕ್ಕಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಕ್ಷೇತ್ರದ ಒಟ್ಟಾರೆ ಮತದಾನ ಪ್ರಮಾಣ ಕ್ಷೇತ್ರದಲ್ಲಿರುವ ಜಾತಿವಾರು ಮತದಾರರ ಪ್ರಮಾಣ ಉಲ್ಲೇಖೀಸಿಕೊಂಡು ಈ ಪಕ್ಷದ ಅಭ್ಯರ್ಥಿ ಇಷ್ಟೇ ಮತ ಪಡೆಯುತ್ತಾರೆಂದು ಹೇಳುವ ಮೂಲಕ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ರಾಜಕೀಯ ಪಕ್ಷಗಳ ಬೆಂಬಲಿಗರು ವಿಶ್ವಾಸದಿಂದ ಹೇಳಿಕೊಳ್ಳುವ ಮೂಲಕ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಮುಳಗಿ ಬಾಜಿ ಕಟ್ಟುತ್ತಿದ್ದು, ಯಾರೇ ಗೆಲ್ಲಲಿ, ಯಾರೇ ಸೋಲಲಿ ಒಂದು ಕಡೆಯ ಬೆಂಬಲಿಗರಂತು ಬೀದಿಗೆ ಬೀಳುವುದಂದು ನಿಶ್ಚಿತ.
ಈ ಮಧ್ಯೆ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಹೊಲ, ಮನೆ, ವಾಹನ ಸೇರಿ ಸುಮಾರು ₹40 ಲಕ್ಷಗಳಷ್ಟು ಬೆಟ್ಟಿಂಗ್ ನಡೆದಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.