
ವಿಧಾನ ಪರಿಷತ್ (ಡಿ.12): ಪೊಲೀಸ್ ಇಲಾಖೆಯಿಂದ 3,600 ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪರಿಶೀಲನೆಯಲ್ಲಿದೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದರು. ಕಾಂಗ್ರೆಸ್‌ನ ಡಿ.ಟಿ.ಶ್ರೀನಿವಾಸ್, ಬಿಜೆಪಿಯ ಕಿಶೋರ್‌ಕುಮಾರ್ ಪುತ್ತೂರು ಅವರ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಹೊಸ ನೇಮಕಾತಿಗಳನ್ನು ಮಾಡಿಕೊಂಡು ಬರುತ್ತಿದೆ. ಸುಮಾರು 900 ಎಎಸ್‌ಐ ನೇಮಕಾತಿ ಮಾಡಿಕೊಂಡಿದ್ದು, ಪ್ರಸ್ತುತ 10 ತಿಂಗಳ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪೂರ್ಣಗೊಂಡ ನಂತರ ಹುದ್ದೆ ನೀಡಲಾಗುವುದು ಎಂದರು.
ಬೇರೆ ಬೇರೆ ಇಲಾಖೆಯಲ್ಲಿ ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳು 50:50 ಅನುಪಾತದಲ್ಲಿದೆ, ಆದರೆ ಪೊಲೀಸ್ ಇಲಾಖೆಯಲ್ಲಿ 70:30 ಅನುಪಾತದಲ್ಲಿದೆ. ಇಲಾಖೆಗೆ ಹೊಸ ಯುವಕರು ಬರಬೇಕು, ದೈಹಿಕವಾಗಿ ಸದೃಢವಾಗಿರಬೇಕು ಎಂಬ ಕಾರಣದಿಂದ ಶೇ.70 ರಷ್ಟು ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಸದ್ಯ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡ ವ್ಯಕ್ತಿಗೆ 29 ವರ್ಷಗಳ ಸೇವೆ ಸಲ್ಲಿಸಿದವರಿಗೆ ಹಾಗೂ ಎಎಸ್‌ಐ ಆಗಿ 5 ವರ್ಷ 10 ತಿಂಗಳು ಸೇವೆ ಸಲ್ಲಿಸಿರುವವರಿಗೆ ಮುಂಬಡ್ತಿ ನೀಡುವ ನಿಯಮವಿದೆ.
ಈ ನಿಯಮ ಅನುಸರಿಸಿದಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲು ಆಗಲ್ಲ. ಆದ್ದರಿಂದ 70:30 ಅನುಪಾತದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿ ವೇಳೆ ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗಿದೆ ಎಂದರು. ಪೊಲೀಸ್ ಇಲಾಖೆಯ ಎಎಸ್‌ಐ ಮತ್ತು ಸಿಬ್ಬಂದಿ ಪಿಎಸ್‌ಐ ವೃಂದದ ಪತ್ರಾಂಕಿತ ರಜಾ ದಿನಗಳಲ್ಲಿ ಕಾರ್ಯ ನಿರ್ವಹಿಸಿದ್ದಕ್ಕಾಗಿ ಪ್ರಸ್ತುತ ನೀಡುತ್ತಿರುವ 15 ದಿನಗಳ ವೇತನವನ್ನು 30 ದಿನಗಳ ವೇತನಕ್ಕೆ ಪರಿಷ್ಕರಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ವೃಂದ ಮತ್ತು ನೇಮಕಾತಿಗೆ ಬದಲಾವಣೆ: ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಬದಲಾವಣೆ ತರಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಇಡೀ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಕರ್ನಾಟಕ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬೇರೆ ರಾಜ್ಯಗಳಂತೆ ಮಷಿನ್ ಗನ್ ಹಿಡಿದುಕೊಂಡು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಡಾ.ಪರಮೇಶ್ವರ್ ಹೇಳಿದರು. ಬಿಜೆಪಿಯ ಕಿಶೋರ್‌ಕುಮಾರ್ ಪುತ್ತೂರು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇವಲ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗದಿರುವ ಸಂಖ್ಯೆ ಆಧರಿಸಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಿಲ್ಲ ಎಂದು ಹೇಳಲು ಸಾಧ್ಯದಿಲ್ಲ. ಒಟ್ಟಾರೆಯಾಗಿ ನೋಡಿದರೆ ರಾಜ್ಯದಲ್ಲಿ ಉತ್ತಮ ಸ್ಥಿತಿ ಇದೆ. ಒಂದು ಕಾಲದಲ್ಲಿ ಕರಾವಳಿ ಭಾಗದಲ್ಲಿ ಸಮಾಜಗಳ ನಡುವೆ ಸಂಘರ್ಷ, ಗಲಾಟೆ ನಡೆಯುತ್ತಿತ್ತು. ಹೀಗಿರುವಾಗ ಸರ್ಕಾರ ವಿಶೇಷ ಕಾರ್ಯಪಡೆ ರಚನೆಯಾದ ನಂತರ ಪರಿಸ್ಥಿತಿ ಸುಧಾರಣೆಯಾಗಿದೆ. ಇಂಥ ಪಡೆಯನ್ನು ಮಂಡ್ಯ ಜಿಲ್ಲೆಯಲ್ಲೂ ನಿಯೋಜಿಸುವಂತೆ ಬೇಡಿಕೆ ಬಂದಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.