
ವಿಧಾನ ಪರಿಷತ್ (ಡಿ.12): ಶಿಕ್ಷಣ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯಿಂದ ಹಾಲಿ ಸೇವೆ ಸಲ್ಲಿಸುತ್ತಿರುವ ಯಾವ ಉಪನ್ಯಾಸಕರಿಗೂ ತೊಂದರೆ ಆಗುವುದಿಲ್ಲ, ಪಿಯುಸಿ ಉಪನ್ಯಾಸಕರನ್ನು ಹೈಸ್ಕೂಲ್ ತರಗತಿಗೆ ಪಾಠ ಮಾಡಲು ಹಿಂಬಡ್ತಿ ನೀಡಲಾಗಿದೆ ಎಂಬ ಅನುಮಾನ ಪರಿಹರಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸದಸ್ಯರಾದ ಎಸ್.ವಿ. ಸಂಕನೂರು, ಎಸ್.ಎಲ್.ಬೋಜೇಗೌಡ, ಪುಟ್ಟಣ್ಣ, ಶಶೀಲ್ ಜಿ. ನಮೋಶಿ, ಡಿ.ಟಿ.ಶ್ರೀನಿವಾಸ್ ಹಾಗೂ ರಾಮೋಜಿಗೌಡ ಅವರು ಗಮನ ಸೆಳೆಯುವ ಸೂಚನೆಯಡಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಪಿಯುಸಿ ಉಪನ್ಯಾಸಕರು ಹೈಸ್ಕೂಲ್ ತರಗತಿಗೆ ಪಾಠ ಮಾಡಬೇಕೆಂಬ ಭಾವನೆ ಬರುವ ರೀತಿಯಲ್ಲಿ ಹೊರಡಿಸಿದ್ದ ಸುತ್ತೋಲೆ ಸರಿಪಡಿಸಲಾಗಿದೆ. ಶಿಕ್ಷಕರನ್ನು ಮೊದಲಿನಂತೆ ಮೇಲ್ದರ್ಜೆಗೆ ಏರಿಸಲಾಗಿದೆ. ಹಾಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.
ದಾಖಲಾತಿ ಹೆಚ್ಚಳಕ್ಕೆ ಮಾಹಿತಿ ಸಂಗ್ರಹ: ರಾಜ್ಯದಲ್ಲಿರುವ 1,319 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರವೇಶಾತಿ ಹೆಚ್ಚಿಸಲು ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ (ಡಯಟ್) ಹಿರಿಯ ಉಪನ್ಯಾಸಕರಿಗೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಡಯಟ್ ಹಿರಿಯ ಉಪನ್ಯಾಸಕರಿಗೆ ಪದವಿ ಪೂರ್ವ ಕಾಲೇಜು ಉಪನ್ಯಾಸಕರು ಅಥವಾ ಪ್ರಾಂಶುಪಾಲರ ಮೇಲೆ ಯಾವುದೇ ಮೇಲ್ವಿಚಾರಣೆ ಅಥವಾ ನಿಯಂತ್ರಣ ಇಲ್ಲ. ಇಲಾಖೆಯಿಂದ ಡಯಟ್‌ನ ಹಿರಿಯ ಉಪನ್ಯಾಸಕರಿಗೆ ನೀಡಲಾದ ಪ್ರಶ್ನಾವಳಿಗಳನ್ನು ಮೀರಿ ಯಾವುದೇ ಮಾಹಿತಿ ಕೇಳಬಾರದು, ಸಂಪೂರ್ಣ ಮಾಹಿತಿ ಸಂಗ್ರಹಣೆ ಪ್ರಕ್ರಿಯೆಯನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಸಮ್ಮುಖ ಮಾಡಬೇಕು ಹಾಗೂ ಭರ್ತಿ ಮಾಡಿದ ಪ್ರಶ್ನಾವಳಿಯ ಒಂದು ಪ್ರತಿಯನ್ನು ಪ್ರಾಚಾರ್ಯರಿಗೆ ನೀಡಬೇಕೆಂದು ಸುತ್ತೋಲೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ವಿವರಿಸಿದರು.
ಸರ್ಕಾರಿ ಶಾಲೆ ಸೌಕರ್ಯಕ್ಕೆ ಶೀಘ್ರ ₹585 ಕೋಟಿ: ಸರ್ಕಾರಿ ಶಾಲೆ-ಪಿಯು ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಶೀಘ್ರವೇ 585 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮಹೇಶ್ ಟೆಂಗಿನಕಾಯಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘3 ವಾರಗಳ ಹಿಂದಷ್ಟೇ ಸಚಿವ ಸಂಪುಟ ಸಭೆಯಲ್ಲಿ ಶಾಲೆಗಳಲ್ಲಿ ಹೊಸ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರು., ಹಳೆಯ ಕೊಠಡಿಗಳ ದುರಸ್ಥಿಗೆ 100 ಕೋಟಿ ರು., ಶೌಚಾಲಯಗಳ ನಿರ್ಮಾಣ, ದುರಸ್ಥಿಗೆ 90 ಕೋಟಿ ರು. ಮತ್ತು ಪದವಿ ಪೂರ್ವ ಕಾಲೇಜುಗಳ ಮೂಲಸೌಕರ್ಯಕ್ಕೆ ಒಟ್ಟಾರೆ 95 ಕೋಟಿ ರು. ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ದೊರಕಿದೆ. ಬಳಿಕ ಈ ಎಲ್ಲಾ ಅನುದಾನ ಬಿಡುಗಡೆಗೆ ಅಧಿಕೃತವಾಗಿ ಆದೇಶ ಸಿದ್ಧವಾಗಿದೆ. ಒಂದೆರಡು ದಿನದಲ್ಲಿ ಆದೇಶ ಹೊರಡಿಸಲಾಗುವುದು’ ಎಂದರು.
ಈ ವೇಳೆ, ಮಾತನಾಡಿದ ಮಹೇಶ್ ಟೆಂಗಿನಕಾಯಿ, ‘2025-26ರನೇ ಸಾಲಿನಲ್ಲಿ ಶೈಕ್ಷಣಿಕ ಅವಧಿ ಮುಗಿಯುತ್ತಾ ಬರುತ್ತಿದ್ದರೂ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಇನ್ನೂ ಕೂಡ ಪೂರ್ಣ ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರದಲ್ಲಿ ಮಕ್ಕಳ ಶೂ, ಸಾಕ್ಸ್‌ಗೂ ಹಣ ಇಲ್ಲವೇ, ಕೆಲವೆಡೆ ಶಾಲೆಯ ಖರ್ಚು ವೆಚ್ಚಕ್ಕೆ ಇರುವ ಸಂಚಿತ ನಿಧಿಯಿಂದ ಶೂ, ಸಾಕ್ಸ್ ಖರೀದಿಸಲು ಅಧಿಕಾರಿಗಳು ಸೂಚಿಸಿರುವುದು ಏಕೆ?’ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ದಾಖಲಾತಿ ಪ್ರಕ್ರಿಯೆ ಜುಲೈ ಅಂತ್ಯದ ವರೆಗೂ ನಡೆಯುತ್ತಿರುತ್ತದೆ. ಎಸ್‌ಡಿಎಂಸಿಗಳಿಂದ ಮಕ್ಕಳ ಸಂಖ್ಯೆ ಹಾಗೂ ಪಾದದ ಅಳತೆಯ ಮಾಹಿತಿ ಸಲ್ಲಿಸುವಲ್ಲಿ ವಿಳಂಬ ಮಾಡಿರುವುದರಿಂದ ಹಣ ಬಿಡುಗಡೆ ತಡವಾಗಿರಬಹುದು. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಆದರೆ, ಯಾವುದೇ ಅಧಿಕಾರಿಗಳಿಗೂ ಶಾಲಾ ಸಂಚಿತ ನಿಧಿಯಿಂದ ಹಣ ಬಳಕೆ ಮಾಡಿಕೊಳ್ಳಲು ಸೂಚಿಸುವಂತೆ ನಾನು ಹೇಳಿಲ್ಲ. ಈ ಬಗ್ಗೆ ಇನ್ನೊಮ್ಮೆ ಮಾಹಿತಿ ಪಡೆದು ತಮಗೆ ತಿಳಿಸುತ್ತೇನೆ. ಸರ್ಕಾರದಲ್ಲಿ ಶೂ, ಸಾಕ್ ಖರೀದಿಗೆ ಬೇಕಿರುವ 117 ಕೋಟಿ ರು. ಹಣಕ್ಕೆ ಕೊರತೆ ಇಲ್ಲ. ಹಾಗೊಂದು ವೇಳೆ ಅಧಿಕಾರಿಗಳಿಂದ ಏನಾದರೂ ಲೋಪಗಳಾಗಿದ್ದರೆ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.