ರಾಜ್ಯದಲ್ಲಿ ಕೆರೆ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವು: ಸಿಎಂ ಸಿದ್ದರಾಮಯ್ಯ

Published : Oct 10, 2025, 07:44 PM IST
CM Siddaramaiah

ಸಾರಾಂಶ

ರಾಜ್ಯದಲ್ಲಿ ಕೆರೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ತಾವಾಗಿಯೇ ಆ ಜಾಗ ಬಿಟ್ಟುಕೊಟ್ಟರೆ ಒಳಿತು. ತಪ್ಪಿದರೆ ಅಧಿಕಾರಿಗಳು ಮುಲಾಜಿಲ್ಲದೆ ಅಂಥ ಒತ್ತುವರಿ ತೆರವು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಅ.10): ಕೆರೆಗಳ ಸಂರಕ್ಷಣೆ ಸರ್ಕಾರ ಹಾಗೂ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಹಾಗಾಗಿ ರಾಜ್ಯದಲ್ಲಿ ಕೆರೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ತಾವಾಗಿಯೇ ಆ ಜಾಗ ಬಿಟ್ಟುಕೊಟ್ಟರೆ ಒಳಿತು. ತಪ್ಪಿದರೆ ಅಧಿಕಾರಿಗಳು ಮುಲಾಜಿಲ್ಲದೆ ಅಂಥ ಒತ್ತುವರಿ ತೆರವು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮನುಷ್ಯನೂ ಸೇರಿ ಎಲ್ಲಾ ಜೀವರಾಶಿಗಳು ಬದುಕುಳಿಯಲು ಜೀವಜಲ ಅತ್ಯಂತ ಅಗತ್ಯ. ಹಾಗಾಗಿ ಕೆರೆ, ಕಟ್ಟೆಗಳು ಸೇರಿ ನಮ್ಮ ಜಲಮೂಲಗಳನ್ನು ಸಂರಕ್ಷಿಸುವ, ಅವುಗಳ ಹೂಳು ತೆಗೆದು ಪುನರುಜ್ಜೀವನಗೊಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆ ಕೆಲಸ ಮಾಡಬೇಕು.

ರಾಜ್ಯದಲ್ಲಿ ಸಾಕಷ್ಟು ಕೆರೆಗಳ ಒತ್ತುವರಿ ಜಾಗ ತೆರವು ಆಗಬೇಕಿದೆ. ಅಂಥ ಒತ್ತುವರಿ ಮಾಡಿರುವ ರೈತರು, ಇತರರು ಯಾರೇ ಆಗಿರಲಿ ತಾವಾಗಿಯೇ ಬಿಟ್ಟುಕೊಡಬೇಕು. ಇಲ್ಲದಿದ್ದರೆ ಇಲಾಖೆ ಅಧಿಕಾರಿಗಳು ಮುಲಾಜಿಲ್ಲದೆ ತೆರವು ಮಾಡಿಸಬೇಕು ಎಂದು ಸೂಚಿಸಿದರು. ಕೆರೆಗಳ ಗೋಡು ಮಣ್ಣು ಕೃಷಿಗೆ, ತೋಟಗಳಿಗೆ ಬಹಳ ಉಪಯುಕ್ತ. ರೈತರು ಅದನ್ನು ತಮ್ಮ ಕೃಷಿ ಭೂಮಿಗೆ ಬಳಸಿಕೊಳ್ಳಬೇಕು. ಆಗ ಕೆರೆಗಳಲ್ಲಿ ಹೆಚ್ಚು ನೀರು ತುಂಬಿ, ಅಂತರ್ಜಲ ಹೆಚ್ಚು ಮರುಪೂರಣ ಸಾಧ್ಯವಾಗುತ್ತದೆ. ನಾನು ಕೂಡ ರೈತನ ಮಗನೆ, ರೈತ ಸಂಘಟನೆಯಲ್ಲಿದ್ದವನು. ಹಿಂದೆಲ್ಲಾ ನಾವು ಕೆರೆ ನೀರನ್ನೇ ಕುಡಿಯಲು ಬಳಸುತ್ತಿದ್ದೆವು. ಕೆರೆಗಳು ಅಷ್ಟು ಶುದ್ಧವಾಗಿದ್ದವು. ಈಗ ಎಲ್ಲಾ ಮಲಿನವಾಗಿವೆ, ಕೆಲವು ನೀರೇ ಇಲ್ಲದೆ ಬತ್ತಿಹೋಗಿವೆ.

ಈಗ ಕೆರೆ ನೀರು ಕುಡಿದರೆ ರೋಗ ಬರುತ್ತದೆ. ಬೋರ್‌ವೆಲ್‌ ನೀರು ಕುಡಿಯಲೂ ಆಗುತ್ತಿಲ್ಲ. ಬಾಟಲಿ ನೀರಿಗೆ ಬಂದು ನಿಂತಿದ್ದೇವೆ. ಈಗಲಾದರೂ ಎಚ್ಚೆತ್ತು ನಮ್ಮ ಎಲ್ಲ ಜಲಮೂಲಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದರು. ರಾಜ್ಯದಲ್ಲಿ 37 ಲಕ್ಷ ಕೊಳವೆಬಾವಿಗಳ ಮೂಲಕ ಅಂತರ್ಜಲ ಬಳಕೆ ಆಗುತ್ತಿದೆ. ದಾಖಲೆಗಳಲ್ಲಿ ಇಲ್ಲದ ಲಕ್ಷಾಂತರ ಅನಧಿಕೃತ ಬೋರ್‌ ವೆಲ್‌ಗಳೂ ಇವೆ. ಇವುಗಳಿಂದ ವಾರ್ಷಿಕ 408 ಟಿಎಂಸಿ ನೀರು ಹೊರ ತೆಗೆಯಲಾಗುತ್ತಿದೆ. ಆದರೆ, ಸಿಗುತ್ತಿರುವುದು 661 ಟಿಎಂಸಿ. ಇದು ರಾಷ್ಟ್ರೀಯ ಸರಾಸರಿಗಿಂತ ಶೇ.8 ರಷ್ಟು ಹೆಚ್ಚಿನ‌ ಬಳಕೆ ಆಗುತ್ತಿದೆ ಎನ್ನುವ ವರದಿಗಳಿವೆ. ಹಾಗಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಅಂತರ್ಜಲ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ರಾಜ್ಯದ 144 ತಾಲೂಕುಗಳನ್ನು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ನೀರಿನ, ಅಂತರ್ಜಲದ ಪ್ರಮಾಣ ಕೊರತೆ ಇದೆ.

ಅಂತಹ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿ ಅಥವಾ ಮರುಪೂರಣಕ್ಕೆ ಚೆಕ್‌ಡ್ಯಾಮ್‌, ಕೃಷಿ ಹೊಂಡ ನಿರ್ಮಾಣದಂತಹ ಅನೇಕ ಯೋಜನೆ ರೂಪಿಸಿ ಸಾವಿರಾರು ಕೋಟಿ ರು. ವೆಚ್ಚ ಮಾಡಿದೆ. ನಮ್ಮ ಹಿಂದಿನ ಸರ್ಕಾರದಲ್ಲಿ ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳನ್ನು ತುಂಬಿಸುವ ಕೆ.ಸಿ.ವ್ಯಾಲಿ, ಎಚ್‌ಎನ್‌ ವ್ಯಾಲಿ ಯೋಜನೆಗಳನ್ನು ಜಾರಿ ಮಾಡಲಾಯಿತು ಎಂದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್, ಮ್ಯಾಗ್ಸೆಸ್ಸೇ ಪ್ರಶಸ್ತಿ ಪುರಸ್ಕೃತ ಪರಿಸರವಾದಿ ರಾಜೇದ್ರ ಸಿಂಗ್, ನಟ ವಸಿಷ್ಠ ಸಿಂಹ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಡಿಸೆಂಬರ್‌ ವೇಳೆಗೆ 41,849 ಕೆರೆಗಳ ಒತ್ತುವರಿ ತೆರವು

ಬರುವ ಡಿಸೆಂಬರ್ ವೇಳೆಗೆ 41, 849 ಕೆರೆಗಳ ಒತ್ತುವರಿ ತೆರವುಗೊಳಿಸಿ ನೀರು ತುಂಬಿಸುವ ಕೆಲಸ ಮಾಡುವ ಮೂಲಕ ಅಂತರ್ಜಲ ವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು ತಿಳಿಸಿದರು. ಅಂತರ್ಜಲ ಪ್ರಮಾಣ ಸರಿಪಡಿಸದಿದ್ದರೆ ಬರುವ ದಿನಗಳಲ್ಲಿ ನಾವು ಸಂಕಷ್ಟಕ್ಕೆ ಸಿಲುಕುತ್ತೇವೆ. 44 ತಾಲೂಕುಗಳಲ್ಲಿ ಅಂತರ್ಜಲ ಅತಿಯಾಗಿ ದುರ್ಬಳಕೆಯಾಗುತ್ತಿದೆ. ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ 8 ಸಾವಿರಕ್ಕೂ ಅಧಿಕ ಸಣ್ಣ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್