ಸಿಎಂ ಮೇಲಿನ ಕೇಸ್ ರದ್ದುಗೊಳಿಸಿದ ಹೈಕೋರ್ಟ್, ಯಡಿಯೂರಪ್ಪಗೆ ಬಿಗ್ ರಿಲೀಫ್..!

By Suvarna NewsFirst Published Sep 11, 2020, 5:57 PM IST
Highlights

ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಮೇಲಿನ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ಇದರಿಂದ ಬಿಎಸ್‌ವೈ ಬಿಗ್ ರಿಲೀಫ್ ಸಿಕ್ಕಿದೆ.

ಬೆಂಗಳೂರು, (ಸೆ.11): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

2019ರ ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯ ಪ್ರಚಾರದ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಜಾತಿ ಆಧರಿಸಿ ಮತಯಾಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

ಆ. 27ರಂದು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ಹೈಕೋರ್ಟ್, ಸಮನ್ಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ  ಇಂದು (ಶುಕ್ರವಾರ) ತೀರ್ಪು  ಪ್ರಕಟಿಸಿದ್ದು, ಯಡಿಯೂರಪ್ಪ ವಿರುದ್ಧದ ಮೂಲ ದೂರು ಹಾಗೂ ವಿಚಾರಣಾ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸಿ ಆದೇಶಿಸಿದೆ.

ಕೊರೋನಾ ಮಧ್ಯೆ ಬಿಎಸ್‌ ಯಡಿಯೂರಪ್ಪಗೆ ಎದುರಾಯ್ತು ಕೋರ್ಟ್ ಸಂಕಷ್ಟ

2019ರ ನವೆಂಬರ್​ 23ರಂದು ಗೋಕಾಕ್ ಉಪ ಚುನಾವನಾ ಪ್ರಚಾರದ ವೇಳೆ ಭಾಷಣ ಮಾಡಿದ್ದ ಯಡಿಯೂರಪ್ಪ, ವೀರಶೈವ ಲಿಂಗಾಯತ ಸಮಾಜದ ಹೆಸರಿನಲ್ಲಿ ಮತ ಯಾಚನೆ ಮಾಡಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ನ.26ರಂದು ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. 

ಅದನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಸೆ.1ರಂದು ಖುದ್ದು ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅದನ್ನು ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.

ಅಂದು ರಮೇಶ್ ಜಾರಕಿಹೊಳಿ ಪರ ಗೋಕಾಕ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಭಾಷಣ ಮಾಡುವ ವೇಳೆ 'ವೀರಶೈವ ಲಿಂಗಾಯತರ ಒಂದೇ ಮತಗಳು ಆ ಕಡೆ, ಈ ಕಡೆ ಆಗದಂತೆ  ಬಿಜೆಪಿಗೆ ಹಾಕಬೇಕೆಂದು ಹೇಳಿದ್ದರು. ಜಾತಿ ಹೆಸರಿನಲ್ಲಿ ಮತಯಾಚನೆ ಮಾಡಿದ್ದಾರೆ ಎಂದು ಆರೋಪಿಸಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣ ಗೋಕಾಕ್ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

click me!