ಸಚಿವರಾಗುವ ಹಂಬಲದಲ್ಲಿದ್ದ ಎಚ್. ವಿಶ್ವನಾಥ್‌ಗೆ ಹೈಕೋರ್ಟ್ ಶಾಕ್ ನೀಡಿದ್ದು, ಆರ್. ಶಂಕರ್, ಎಂಟಿಬಿ ನಾಗರಾಜ್ಗೆ ಬಿಗ್ ರಿಲೀಫ್ ಸಿಕ್ಕಿದೆ.
ಬೆಂಗಳೂರು, (ನ.30): ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸಚಿವರಾಗಲು ಅನರ್ಹ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಇದರಿಂದ ಮಂತ್ರಿಗಿರಿ ಕನಸು ಕಾಣುತ್ತಿದ್ದ ಹಳ್ಳಿಹಕ್ಕಿ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಸಂವಿಧಾನದ ಆರ್ಟಿಕಲ್ 164 (1B), 361 B ಅಡಿ ವಿಶ್ವನಾಥ್ ಅವರು ಅನರ್ಹ ಎಂದು ಇಂದು (ಸೋಮವಾರ) ಹೈಕೋರ್ಟ್ ವಿಭಾಗೀಯ ಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಎಚ್ ವಿಶ್ವನಾಥ್ ವಿಧಾನ ಪರಿಷತ್‌ಗೆ ನಾಮನಿರ್ದೇಶನ: ಸರ್ಕಾರಕ್ಕೆ ಕೋರ್ಟ್ ನೋಟಿಸ್
ಇನ್ನು ಆರ್. ಶಂಕರ್, ಎಂಟಿಬಿ ನಾಗರಾಜ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸಂವಿಧಾನದಡಿ ಮರುಆಯ್ಕೆ ಆಗಿರುವುದರಿಂದ ಅನರ್ಹತೆಯಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.
ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜ್ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದ್ರೆ, ವಿಶ್ವನಾಥ್ ಅವರು ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡಿದ್ದರು.
ಪ್ರಕರಣದ ಹಿನ್ನೆಲೆ
ಮೂವರು ಶಾಸಕರಿಗೆ ಸಚಿವ ಸ್ಥಾನ ನೀಡದಂತೆ ಕೋರಿ ವಕೀಲ ಎ.ಎಸ್. ಹರೀಶ್ ಪಿಐಎಲ್ ಸಲ್ಲಿಸಿದ್ದರು. ಅರ್ಜಿದಾರರ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದಿಸಿದ್ದರು. ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಎಚ್. ವಿಶ್ವನಾಥ್ ನಾಮನಿರ್ದೇಶಿತ ಶಾಸಕರಾಗಿದ್ದಾರೆ. ಅನರ್ಹರಾದವರು ಹಿಂಬಾಗಿಲಿನಿಂದ ಶಾಸಕರಾಗುವಂತಿಲ್ಲ. ಅನರ್ಹರಾದವರು ಮರು ಆಯ್ಕೆಯಾಗಲಷ್ಟೇ ಅವಕಾಶವಿದೆ. ಹೀಗಾಗಿ ಸಚಿವರಾಗಿಸದಂತೆ ತಡೆಯಾಜ್ಞೆ ನೀಡಲು ಮನವಿ ಮಾಡಿದ್ದರು.