ಬೇನಾಮಿ ಹೆಸರಲ್ಲಿ ನೈಸ್ ಕಂಪನಿ ಖರೀದಿಗೆ ಸಿಎಂ ಯತ್ನ; ಮುಂದಿನ ವಾರವೇ ದಾಖಲೆ ಬಿಡುಗಡೆ ಮಾಡುವೆ: ಹೆಚ್‌ಡಿಕೆ ಹೇಳಿಕೆ ಸಂಚಲನ!

Kannadaprabha News   | Kannada Prabha
Published : Aug 25, 2026, 05:57 AM IST
Karnataka HD Kumaraswamy Explosive Claim DK linked benami bid to take over NICE vows to release documents rav

ಸಾರಾಂಶ

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದ ಹಾಲಿ ಮುಖ್ಯಮಂತ್ರಿಯೇ ಬೇನಾಮಿ ಕಂಪನಿಗಳ ಮೂಲಕ ನೈಸ್ ಕಂಪನಿಯನ್ನು ಖರೀದಿಸಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದು ರಾಷ್ಟ್ರದ ಅತಿ ದೊಡ್ಡ ಭೂ ಲೂಟಿ ಮುಂದಿನ ವಾರ ದಾಖಲೆ ಸಮೇತ ಸತ್ಯವನ್ನು ಬಹಿರಂಗಪಡಿಸುವುದಾಗಿ ಸವಾಲು ಹಾಕಿದ್ದಾರೆ.

ಬೆಂಗಳೂರು (ಆ.25): ರಾಜ್ಯದ ಈಗಿನ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಹೊಸ ‘ಬಾಂಬ್‌’ ಸಿಡಿಸಿದ್ದಾರೆ.

ನೈಸ್ ಕಂಪನಿ ಖರೀದಿ: ಸಿಎಂ ವಿರುದ್ಧ ಮಾಜಿ ಸಿಎಂ ಹೇಳಿದ್ದೇನು?

ಸೋಮವಾರ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಈಗಿನ ಮುಖ್ಯಮಂತ್ರಿಯೇ ಬೇನಾಮಿ ಕಂಪನಿಗಳ ಮೂಲಕ ನೈಸ್ ಕಂಪನಿ ಖರೀದಿಗೆ ಹೊರಟಿದ್ದಾರೆ. ಈ ರಾಜ್ಯದಲ್ಲಿ ರೈತರಿಗೊಂದು, ಮುಖ್ಯಮಂತ್ರಿಗೊಂದು ಕಾನೂನು ಇದೆಯಾ? ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಭೂಮಿಯನ್ನು ಲೂಟಿ ಹೊಡೆಯಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕೂತು ಸಂತೆ ಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ಹೇಳುತ್ತೇನೆ ಎಂದು ಗುಡುಗಿದರು.

ನೈಸ್‌ ಅಕ್ರಮದಲ್ಲಿ ಸಿಎಂ ನೇರ ಶಾಮೀಲು:

ರಾಜ್ಯದ ಹಾಲಿ ಮುಖ್ಯಮಂತ್ರಿ ನೈಸ್ ಅಕ್ರಮಗಳಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ರಾಷ್ಟ್ರದಲ್ಲಿಯೇ ಅತಿ ದೊಡ್ಡ ಭೂ ಲೂಟಿಯ ಮಹಾನಾಯಕ ಈ ಮುಖ್ಯಮಂತ್ರಿ. ವಿಧಾನಸೌಧದ ಮೂರನೇ ಮಾಡಿಯಲ್ಲಿ ಕೂತು ಈ ಮುಖ್ಯಮಂತ್ರಿ ನೇರ ವ್ಯವಹಾರಕ್ಕೆ ಇಳಿದಿದ್ದಾರೆ. ನೈಸ್ ಕಂಪನಿಯನ್ನು ಯಾರು ಟೇಕ್ ಓವರ್ ಮಾಡುತ್ತಿದ್ದಾರೆ ಎಂಬುದನ್ನು ತಾಕತ್ತಿದ್ದರೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನತೆಯ ಮುಂದೆ ಹೇಳಲಿ ಎಂದು ಸವಾಲು ಹಾಕಿದರು.

ಯೋಜನೆಯನ್ನು ಯಾರು ಸ್ವಾಧೀನ ಮಾಡಿಕೊಳ್ಳುತ್ತಿದ್ದಾರೆ? ಬೇನಾಮಿ ಕಂಪನಿಗಳ ಮೂಲಕ ಯಾರೆಲ್ಲಾ ಈ ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ಇದೆ. ಈ ಮುಖ್ಯಮಂತ್ರಿ ಎದೆ ಮುಟ್ಟಿಕೊಂಡು ಮಾತನಾಡಲಿ. ಈ ಬಗ್ಗೆ ರಾಜ್ಯದ ಜನತೆಯ ಮುಂದೆ ಸತ್ಯವನ್ನು ಬಾಯಿ ಬಿಡಲಿ ಎಂದು ಆಗ್ರಹಿಸಿದರು.

ನೈಸ್‌ಗೂ ಸಿಎಂಗೂ ಸಂಬಧವೇನು?

ಈ ಮುಖ್ಯಮಂತ್ರಿಗೂ ನೈಸ್ ಯೋಜನೆಗೂ ಇರುವ ಸಂಬಂಧವೇನು? ನೈಸ್ ಜೊತೆ ಸಿಎಂ ಒಡಂಬಡಿಕೆ ಏನು? ಈ ಕಂಪನಿಯ ಮಾಲೀಕರ ಜೊತೆ ಈ ವ್ಯಕ್ತಿಗೆ ಇರುವ ಸಂಬಂಧಗಳು ಮತ್ತು ವ್ಯವಹಾರಗಳು ಏನು? ಧೈರ್ಯವಿದ್ದರೆ ಜನರ ಮುಂದೆ ಈ ಬಗ್ಗೆ ಮಾತನಾಡಲಿ. ನಾನು ಸತ್ಯ ಹೇಳುವುದಕ್ಕೆ ಅಂಜುವುದಿಲ್ಲ ಎಂದು ಹೇಳಿದರು.

ನೈಸ್ ರಸ್ತೆ ಅಕ್ರಮದ ಬಗ್ಗೆ ರಾಜ್ಯ ಸರ್ಕಾರ ಮೌನಕ್ಕೆ ಶರಣಾಗಿದೆ. ಯೋಜನಾ ಚೌಕಟ್ಟು ಒಪ್ಪಂದ ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ. ರೈತರ ಭೂಸ್ವಾಧೀನವಾಗಿ 20 ವರ್ಷಗಳೇ ಆಗಿದೆ. ರೈತರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಒಪ್ಪಂದದಂತೆ ನೈಸ್‌ ಕಂಪನಿ 111 ಕಿ.ಮೀ. ರಸ್ತೆ ನಿರ್ಮಿಸುವ ಬದಲು ಕೇವಲ 5 ಕಿ.ಮೀ. ನಿರ್ಮಿಸಿದೆ. ಒಪ್ಪಂದ ಅಂಶಗಳ ಉಲ್ಲಂಘಿಸಿ ಅನೇಕ ವರ್ಷಗಳಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಯುವ ಜನತೆ ಹೋರಾಟಬೇಕು ಎಂದು ಕರೆ ನೀಡಿದರು.

ಇಷ್ಟೆಲ್ಲಾ ಅಕ್ರಮಗಳನ್ನು ಎಸಗಿರುವ ಕಾರಣದಿಂದಲೇ ರಾಜ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ಕಠಿಣವಾದ ಶಬ್ದಗಳ ಮೂಲಕ ತನ್ನ ಅಭಿಪ್ರಾಯವನ್ನು ದಾಖಲಿಸಿದೆ. ದುರಂತವೆಂದರೆ ರಾಜ್ಯದ ಮುಖ್ಯಮಂತ್ರಿಯೇ ನೇರವಾಗಿ ನೈಸ್ ಕಂಪನಿ ಜೊತೆ ಶಾಮೀಲಾಗಿದ್ದಾರೆ. ಅಲ್ಲಿ ಸುಲಿಗೆ ಮಾಡುವ ಹಣವನ್ನು ಇವರೆಲ್ಲರೂ ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ಬೇನಾಮಿ ಆಸ್ತಿ ಯಾವುದಾದರೂ ಇದ್ದರೆ ತೋರಿಸಲಿ. ಈ ಸರ್ಕಾರಕ್ಕೆ ನನ್ನ ನೇರ ಸವಾಲು. ಅಂತಹ ಒಂದು ಬೇನಾಮಿ ಆಸ್ತಿ ಇದ್ದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ

- ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಕೈಗಾರಿಕಾ ಸಚಿವ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

BJP Protest: ವಾಲ್ಮೀಕಿ ನಿಗಮ ಹಗರಣ: ನಾಗೇಂದ್ರ ತಲೆದಂಡಕ್ಕೆ ಗದ್ದಲ, 3 ದಿನ ಮೊದಲೇ ಕಲಾಪ ಖತಂ! ನಿನ್ನೆ ಏನೇನಾಯ್ತು?
ಸಚಿವ ನಾಗೇಂದ್ರಗಾಗಿ ತೀವ್ರ ಕದನ: ಬಿಜೆಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆಯ ರಣತಂತ್ರ?