* ಲಸಿಕೆಗೆ 100 ಕೋಟಿ ರೂ ನೀಡಲು ಮುಂದಾಗಿದ್ದ ಕಾಂಗ್ರೆಸ್ ಗರ ಬಿಗ್ ಶಾಕ್
* ಕಾಂಗ್ರೆಸ್ ಪ್ರಸ್ತಾವನೆ ತಿರಸ್ಕರಿಸಿದ ಸಿಎಂ ಯಡಿಯೂರಪ್ಪ
* ಲಸಿಕೆಗಾಗಿ ಕಾಂಗ್ರೆಸ್ ತಮ್ಮ ಶಾಸಕರ ಪ್ರದೇಶಾಭಿವೃದ್ಧಿಯ 100 ಕೋಟಿ ರೂ. ನೀಡಲು ಮುಂದಾಗಿತ್ತು.
ಬೆಂಗಳೂರು, (ಜೂನ್.09): ಲಸಿಕೆಗೆ 100 ಕೋಟಿ ರೂ ನೀಡಲು ಮುಂದಾಗಿದ್ದ ಕಾಂಗ್ರೆಸ್ನ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ.
ಲಸಿಕೆಗಾಗಿ ಕಾಂಗ್ರೆಸ್ ತಮ್ಮ ಶಾಸಕರ ಪ್ರದೇಶಾಭಿವೃದ್ಧಿಯ 100 ಕೋಟಿ ರೂ. ನೀಡಲು ಮುಂದಾಗಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕಾಂಗ್ರೆಸ್ ನೀಡಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಿದೆ.
ಕರ್ನಾಟಕ ಕಾಂಗ್ರೆಸ್ ಶಾಸಕರ 100 ಕೋಟಿ ರೂ. ನಿಧಿ ಲಸಿಕೆಗೆ!
ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ಪೂರೈಕೆ ಮಾಡಲಿದೆ. ಹೀಗಾಗಿ ಸರ್ಕಾರದಲ್ಲಿ ಸಂಪನ್ಮೂಲ ಕೊರತೆಯಾಗಿಲ್ಲ. ನೀವು ಸಹಾಯಧನ ಕೊಡಲು ಇಚ್ಛಿಸಿದರೆ ಸರ್ಕಾರ ನಿಗದಿಪಡಿಸಿದ ನಿಧಿಗೆ ನೀಡಬಹುದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪತ್ರ ಬರೆದಿದೆ.
ಈಗಾಗಲೇ ಸರ್ಕಾರ ಶಾಸಕರ ನಿಧಿಯ ಶೇ.25 ರಷ್ಟು ಅನುದಾನವನ್ನು ಕೊವಿಡ್ ನಿಯಂತ್ರಣ ಕಾರ್ಯಗಳಿಗೆ ಬಳಸಲು ಅವಕಾಶವಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲು ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗೆ ಸರ್ಕಾರದಲ್ಲಿ ಸಂಪನ್ಮೂಲ ಕೊರತೆ ಇಲ್ಲ. ಕಾಂಗ್ರೆಸ್ ಪಕ್ಷ ಮತ್ತು ಶಾಸಕರು ಲಸಿಕೆ ಕಾರ್ಯಕ್ರಮಕ್ಕೆ ಸಹಾಯಧನ ನೀಡಲು ಇಚ್ಛಿಸಿದಲ್ಲಿ ತಮ್ಮ ವೈಯಕ್ತಿಕ ಹಣವನ್ನು ಸರ್ಕಾರ ನಿಗದಿಪಡಿಸಿದ ನಿಧಿಗೆ ದೇಣಿಗೆ ನೀಡಬಹುದು ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ಲಸಿಕೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳ ಮೂಲಕ ಸಹಾಯ ಮಾಡಬಹುದು. ಸರ್ಕಾರದ ನಿರ್ದಿಷ್ಟ ಯೋಜನೆಯ ಹಣವನ್ನು ಒಂದು ಪಕ್ಷದ ಹಣದೊಂದಿಗೆ ಹೊಂದಾಣಿಕೆ ಮಾಡುವುದು ಸೂಕ್ತವಲ್ಲ. ಸರ್ಕಾರದ ಹಣವನ್ನು ಒಂದು ಪಕ್ಷದ ಹಣವೆಂದು ಬಿಂಬಿಸಿ ಜನರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಸಿಎಂ ತಮ್ಮ ಪ್ರಸ್ತಾವನೆಯನ್ನು ಒಪ್ಪಿರುವುದಿಲ್ಲ ಎಂದು ಸಿದ್ದರಾಮಯ್ಯಗೆ ಯೋಜನೆ ಖಾತೆ ಸಚಿವ ನಾರಾಯಣ ಗೌಡ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.