ಸ್ಪರ್ಧಿಸಬೇಡಿ ಎಂದಿದ್ದು ನಿಜ, ಆದರೆ...: ಸೋಮಶೇಖರ್‌ಗೆ ವಿಶ್ವನಾಥ್‌ ತಿರುಗೇಟು!

By Kannadaprabha NewsFirst Published Jan 26, 2020, 11:43 AM IST
Highlights

ಸ್ಪರ್ಧಿಸಬೇಡಿ ಎಂದಿದ್ದು ನಿಜ, ಆದರೆ ಕ್ಷೇತ್ರ ಬಿಟ್ಟು ಕೊಡಲು ಸಾಧ್ಯವೇ?| ಎಸ್‌.ಟಿ. ಸೋಮಶೇಖರ್‌ಗೆ ಎಚ್‌. ವಿಶ್ವನಾಥ್‌ ತಿರುಗೇಟು| ಬಿಎಸ್‌ವೈ ಮಾತು ತಪ್ಪುವುದಿಲ್ಲ, ಎಲ್ಲರಿಗೂ ಹುದ್ದೆ ಕೊಡ್ತಾರೆ

ಮೈಸೂರು[ಜ.26]: ಉಪಚುನಾವಣೆಯಲ್ಲಿ ಸೋಲುಂಡವರಿಗೆ ಈ ಹಿಂದೆಯೇ ಸ್ಪರ್ಧಿಸದಂತೆ ಹೇಳಲಾಗಿತ್ತು ಎಂಬ ಶಾಸಕ ಎಸ್‌.ಟಿ.ಸೋಮಶೇಖರ್‌ ಹೇಳಿಕೆಗೆ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ನನಗೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದು ನಿಜ. ಆದರೆ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಸುತ್ತೂರಿನಲ್ಲಿ ಶನಿವಾರ ಮಾತನಾಡಿ, ನಾಲಿಗೆ ಮೇಲೆ ನಿಲ್ಲುವ ನಾಯಕ ಅಂದರೆ ಅದು ಬಿ.ಎಸ್‌. ಯಡಿಯೂರಪ್ಪ. ಅವರು ಎಂದಿಗೂ ಕೊಟ್ಟಮಾತು ತಪ್ಪುವುದಿಲ್ಲ. ಉಳಿಸಿಕೊಳ್ಳುತ್ತಾರೆ. ಸರ್ಕಾರ ರಚನೆಗೆ ಕಾರಣರಾದ ಎಲ್ಲರಿಗೂ ಸ್ಥಾನಮಾನ ಕೊಡುತ್ತಾರೆ ಎಂದರು.

‘ಯಡಿಯೂರಪ್ಪನವರು ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದು ನಿಜ. ಆದರೆ ಯಾರಾದರೂ ಕ್ಷೇತ್ರ ಬಿಟ್ಟು ಕೊಡುವರೇ? ನಾನು ಪಕ್ಷ ಸಂಘಟಿಸಿ, ಉಪ ಚುನಾವಣೆಯಲ್ಲಿ 52 ಸಾವಿರ ಮತ ಪಡೆದೆ. ಈ ಹಿಂದೆ ಎಸ್‌.ಟಿ. ಸೋಮಶೇಖರ್‌ ಮೈಸೂರಿಗೆ ಬಂದಾಗ ಎಚ್‌. ವಿಶ್ವನಾಥ್‌ ನಮ್ಮ ನಾಯಕ ಎಂದಿದ್ದರು. ಈಗ ನಾವು ಒಟ್ಟಾಗಿಯೇ ಇದ್ದೇವೆ. ಸೋಮಶೇಖರ್‌ ಹೇಳಿದಂತೆ ಒಟ್ಟಾಗಿರಬಾರದು ಎಂದೇನೂ ಇಲ್ಲವಲ್ಲ’ ಎಂದರು.

ಹುಣಸೂರಲ್ಲಿ ಬಿಜೆಪಿಗೆ ಅಸ್ತಿತ್ವವೇ ಇರಲಿಲ್ಲ. ಮೊದಲೆಲ್ಲ ಕ್ಷೇತ್ರದಲ್ಲಿ ಪಕ್ಷಕ್ಕೆ ಬರುವ ಮತಗಳು 5ರಿಂದ 6 ಸಾವಿರ ದಾಟುತ್ತಿರಲಿಲ್ಲ. ನಾನು ಸೋತಿರಬಹುದು. ಆದರೆ, 54 ಸಾವಿರ ಮತ ಪಡೆದಿದ್ದೇನೆ. ಅಲ್ಲಿ ಪಕ್ಷ ಬೆಳೆದಿದೆ ಇದನ್ನೂ ಗಮನಿಸಬೇಕು. ಹಾಗಾಗಿ ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ. 17 ಮಂದಿಗೂ ಸ್ಥಾನಮಾನ ನೀಡಬೇಕು ಎಂದು ವಿಶ್ವನಾಥ್‌ ಹೇಳಿದರು.

click me!