1 ವರ್ಷ ಮೊದಲೇ ಚುನಾವಣೆಗೆ ಬಿಜೆಪಿ ತಯಾರಿ: ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಮೋದಿ, ಶಾ, ನಡ್ಡಾ!

Published : Mar 28, 2022, 05:33 AM IST
1 ವರ್ಷ ಮೊದಲೇ ಚುನಾವಣೆಗೆ ಬಿಜೆಪಿ ತಯಾರಿ:  ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಮೋದಿ, ಶಾ, ನಡ್ಡಾ!

ಸಾರಾಂಶ

* ಈ ಮೂವರ ಭೇಟಿ ಬಳಿಕ ವಿವಿಧ ಕೇಂದ್ರ ಸಚಿವರು, ರಾಷ್ಟ್ರೀಯ ನಾಯಕ ಪ್ರವಾಸ? * ಏಪ್ರಿಲ್‌ನಲ್ಲಿ ರಾಜ್ಯಕ್ಕೆ ಮೋದಿ, ಶಾ, ನಡ್ಡಾ * ವಿಧಾನಸಭೆ ಚುನಾವಣೆಗೆ 1 ವರ್ಷ ಮುಂಚಿತವಾಗಿ ಬಿಜೆಪಿಯಲ್ಲಿ ಸಿದ್ಧತೆ ಪ್ರಾರಂಭ

ವಿಜಯ್‌ ಮಲಗಿಹಾಳ

ಬೆಂಗಳೂರು(ಮಾ.28): ಬರುವ ಏ.1ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಆಗಮನದೊಂದಿಗೆ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿಯೇ ಆಡಳಿತಾರೂಢ ಬಿಜೆಪಿಯಲ್ಲಿ ತಯಾರಿ ಆರಂಭವಾಗಲಿದೆ.

ಬಿಜೆಪಿಯ ಮೂವರು ಅಗ್ರಪಂಕ್ತಿ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಏಪ್ರಿಲ್‌ ತಿಂಗಳೊಂದರಲ್ಲೇ ಕರ್ನಾಟಕಕ್ಕೆ ಭೇಟಿ ನೀಡುವುದು ನಿಶ್ಚಿತವಾಗಿದ್ದು, ಪಕ್ಷದ ರಾಜ್ಯ ಘಟಕದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಸಿದೆ. ಈ ಮೂವರ ಬಳಿಕ ಕೇಂದ್ರ ಸಚಿವರು ಹಾಗೂ ಪಕ್ಷದ ವಿವಿಧ ಹಂತದ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಭೇಟಿ ನೀಡುವುದು ಹೆಚ್ಚಲಿದೆ ಎಂದು ತಿಳಿದು ಬಂದಿದೆ.

ಹಿಜಾಬ್‌ ಗದ್ದಲ, ದಿ ಕಾಶ್ಮೀರ ಫೈಲ್ಸ್‌ ಚಿತ್ರದ ಪ್ರಭಾವ, ಹಿಂದೂಗಳ ಧಾರ್ಮಿಕ ಕೇಂದ್ರ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವಿರೋಧ ಮತ್ತಿತರ ಬೆಳವಣಿಗೆಗಳ ಬಳಿಕ ಕರ್ನಾಟಕ ಬಿಜೆಪಿ ಪಾಳೆಯದಲ್ಲಿ ಏಕಾಏಕಿ ವಿಶ್ವಾಸ ವೃದ್ಧಿಸಿದೆ. ಈ ವಿಶ್ವಾಸವನ್ನು ಹೀಗೆಯೇ ಹಿಡಿದಿಟ್ಟುಕೊಂಡು ಸಾಗಿದಲ್ಲಿ ಚುನಾವಣೆಯಲ್ಲಿ ಮತದಾರರ ಬೆಂಬಲವನ್ನು ಸುಲಭವಾಗಿ ಪಡೆಯಬಹುದು ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ. ಇದಕ್ಕೆ ಪೂರಕವಾಗಿ ಮತ್ತಷ್ಟುರಣತಂತ್ರ ರೂಪಿಸುವ ಹಾಗೂ ಸಂಘಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿನ ಭರ್ಜರಿ ಪ್ರದರ್ಶನದ ಬಳಿಕ ರಾಷ್ಟ್ರೀಯ ನಾಯಕರ ಚಿತ್ತ ಗುಜರಾತ್‌ ಮತ್ತು ಕರ್ನಾಟಕದತ್ತ ಹರಿದಿದೆ. ಗುಜರಾತ್‌ ಬಗ್ಗೆ ಬಿಜೆಪಿ ಹೆಚ್ಚು ಆತಂಕಪಡಬೇಕಾದ ಅಗತ್ಯ ಇಲ್ಲದಿದ್ದರೂ ಕರ್ನಾಟಕದ ಮಟ್ಟಿಗೆ ತೀರಾ ಖುಷಿ ಪಡುವಂಥ ಸನ್ನಿವೇಶವೇನೂ ಇಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಗುಜರಾತ್‌ಗಿಂತ ಕರ್ನಾಟಕದ ಬಗ್ಗೆಯೇ ಹೆಚ್ಚು ಕಳವಳ. ಹೀಗಾಗಿಯೇ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಾದರೂ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಬೇಕು ಎಂಬ ಹಠ ತೊಟ್ಟಿದ್ದಾರೆ.

ಕರ್ನಾಟಕದ ವಿಧಾನಸಭಾ ಚುನಾವಣೆ ಜತೆಗೆ ಅದರ ಮುಂದಿನ ವರ್ಷ ಅಂದರೆ, 2024ರಲ್ಲಿನ ಲೋಕಸಭಾ ಚುನಾವಣೆ ಬಗ್ಗೆಯೂ ಬಿಜೆಪಿ ನಾಯಕರು ಚಿಂತಿತರಾಗಿದ್ದಾರೆ. ಕಳೆದ 2019ರ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 25ರಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಅದನ್ನು ಉಳಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆಯಲ್ಲೂ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಬೇಕಾಗುವಷ್ಟುಸ್ಥಾನಗಳನ್ನು ಗೆಲ್ಲುವ ಉದ್ದೇಶದಿಂದ ಈಗಿನಿಂದಲೇ ಸಿದ್ಧತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಕಾರ್ಯಕಾರಿಣಿ ಬಳಿಕ ಸಂಪುಟ ಕಸರತ್ತು?

ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದು ಹೋದ ಬಳಿಕ ಸಾಕಷ್ಟುಕುತೂಹಲ ಮೂಡಿಸಿರುವ ಸಂಪುಟ ಕಸರತ್ತಿನ ಬಗ್ಗೆ ಗಂಭೀರ ಚರ್ಚೆ ಆರಂಭವಾಗಲಿದೆ. ಮುಂದುವರೆದು ಏ.16 ಮತ್ತು 17ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪಕ್ಷ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಆ ಸಭೆಗೆ ಪಕ್ಷದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸುವುದು ಬಹುತೇಕ ಖಚಿತವಾಗಿದ್ದು, ಆ ಸಭೆಯ ಬಳಿಕ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್