ರಾಜ್ಯದ ಚುನಾವಣೆ ಕಣಕ್ಕೆ ರಾಹುಲ್‌ ಗಾಂಧಿ ಪ್ರವೇಶ: ನಾಲ್ಕನೇ ಗ್ಯಾರಂಟಿ ಘೋಷಣೆ ಸಾಧ್ಯತೆ

By Kannadaprabha News  |  First Published Mar 20, 2023, 4:40 AM IST

‘ಭಾರತ್‌ ಜೋಡೋ ಯಾತ್ರೆ’ಯ ಭರ್ಜರಿ ಯಶಸ್ಸಿನ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಸೋಮವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. 


ಬೆಳಗಾವಿ (ಮಾ.20): ‘ಭಾರತ್‌ ಜೋಡೋ ಯಾತ್ರೆ’ಯ ಭರ್ಜರಿ ಯಶಸ್ಸಿನ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಸೋಮವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಆ ಮೂಲಕ ಕರ್ನಾಟಕ ಚುನಾವಣಾ ಅಖಾಡಕ್ಕೆ ಧುಮುಕಿ, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದ್ದಾರೆ.

ಬೆಳಗಾವಿಯಲ್ಲಿ ಸೋಮವಾರ ಕಾಂಗ್ರೆಸ್‌ ಪಕ್ಷದಿಂದ ‘ಯುವ ಕ್ರಾಂತಿ ಸಮಾವೇಶ’ ಆಯೋಜನೆಗೊಂಡಿದ್ದು, ಇದನ್ನು ರಾಹುಲ್‌ ಉದ್ಘಾಟಿಸುವ ಮೂಲಕ ಪಕ್ಷದ ಚುನಾವಣಾ ಪ್ರಚಾರಕ್ಕೆ ಚುರುಕು ಮುಟ್ಟಿಸಲಿದ್ದಾರೆ. ಸಮಾವೇಶದಲ್ಲಿ 4ನೇ ಗ್ಯಾರಂಟಿ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಜೊತೆಗೆ, ಯುವಕರ ಜೀವನ ಉಜ್ವಲಗೊಳಿಸುವ ‘ಉದ್ಯೋಗ ಗ್ಯಾರಂಟಿ ಕಾರ್ಡ್‌’ ಅನಾವರಣಗೊಳಿಸುವ ಸಾಧ್ಯತೆಯೂ ಇದೆ. ಅಂದರೆ, ಯುವಜನಾಂಗಕ್ಕೆ ‘ನಿರ್ದಿಷ್ಟಸಂಖ್ಯೆಯ ಉದ್ಯೋಗ ಸೃಷ್ಟಿ’ಸುವ ಬಗ್ಗೆ ಭರವಸೆ ಅಥವಾ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೂ ‘ಭತ್ಯೆ ಭಾಗ್ಯ’, ಈ ಎರಡರಲ್ಲಿ ಒಂದು ಘೋಷಣೆ ಈ ಗ್ಯಾರಂಟಿ ಕಾರ್ಡ್‌ ಯೋಜನೆಯಲ್ಲಿ ಇರುವ ಸಾಧ್ಯತೆ ಇದೆ.

Latest Videos

undefined

ಅಂಕೋಲಾದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನೋಡಿದರೆ ರೂಪಾಲಿ ಮತ್ತೆ ಗೆಲ್ಲುವುದು ಖಚಿತ: ಸಚಿವ ಮುರುಗೇಶ್ ನಿರಾಣಿ

ಸಿಪಿಇಡ್‌ ಮೈದಾನದಲ್ಲಿ ಬೃಹತ್‌ ವೇದಿಕೆ ಸಿದ್ಧ: ಬೆಂಗಳೂರು ಬಿಟ್ಟರೆ ಅತಿ ಹೆಚ್ಚು, 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಿಂದಲೇ ಚುನಾವಣಾ ರಣಕಹಳೆ ಮೊಳಗಿಸಲು ಕಾಂಗ್ರೆಸ್‌ ಸಜ್ಜಾಗಿದ್ದು, ನಗರದಲ್ಲಿ ‘ಯುವ ಕ್ರಾಂತಿ ಸಮಾವೇಶ’ ಆಯೋಜಿಸಿದೆ. ಸಮಾವೇಶಕ್ಕಾಗಿ ನಗರದ ಸಿಪಿಇಡ್‌ ಮೈದಾನದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಮಧ್ಯಾಹ್ನ 11.30ಕ್ಕೆ ವಿಶೇಷ ವಿಮಾನದ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಹುಲ್‌, ಬಳಿಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ, ನಾಯಕರಲ್ಲಿ ಹೊಸ ಉತ್ಸಾಹ ತುಂಬಲಿದ್ದಾರೆ. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಗೋಹತ್ಯೆ ನಿಷೇಧ, 3 ಸಾವಿರ ಪ್ರಕರಣ ದಾಖಲು: ಸಚಿವ ಪ್ರಭು ಚವ್ಹಾಣ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕಿ ಲಕ್ಷ್ಮೇ ಹೆಬ್ಬಾಳಕರ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹಾಗೂ ಇತರ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಹುಲ್‌ ಭೇಟಿ ಹಿನ್ನೆಲೆಯಲ್ಲಿ ಕುಂದಾನಗರಿ ಕಾಂಗ್ರೆಸ್‌ಮಯವಾಗಿದೆ. ನಗರದ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ರಾಹುಲ್‌ ಹಾಗೂ ಕಾಂಗ್ರೆಸ್‌ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್‌, ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ನಗರದೆಲ್ಲೆಡೆ ಕಾಂಗ್ರೆಸ್‌ ಬಾವುಟ ರಾರಾಜಿಸುತ್ತಿದೆ. ರಾಹುಲ್‌ ಭೇಟಿ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

click me!