ಕಳೆದ ಒಂದೂವರೆ ದಶಕಗಳಿಂದ ಕೇಸರಿ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬೆಳಗಾವಿಯನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿಗೆ ಎಲ್ಲ ರಾಜಕೀಯ ಪಕ್ಷಗಳಿಗೆ ಮಹತ್ವ ನೀಡುತ್ತವೆ.
ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಮೇ.13): ಕಳೆದ ಒಂದೂವರೆ ದಶಕಗಳಿಂದ ಕೇಸರಿ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬೆಳಗಾವಿಯನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಬೆಳಗಾವಿಗೆ ಎಲ್ಲ ರಾಜಕೀಯ ಪಕ್ಷಗಳಿಗೆ ಮಹತ್ವ ನೀಡುತ್ತವೆ. ಬೆಳಗಾವಿಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲುವ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬ ಪ್ರತೀತಿಯೂ ಇದೆ. ಈ ಸಲವೂ ಅದು ಸಾಬೀತಾಗಿದೆ. ಪ್ರಭಾವಿ ನಾಯಕರಾದ ಸತೀಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಂಬಿನೇಷನ್ ವರ್ಕೌಟ್ ಮಾಡಿದ್ದರ ಪರಿಣಾಮ ಕಾಂಗ್ರೆಸ್‍ಗೆ ಈ ಅಭೂತಪೂರ್ವ ಗೆಲುವು ದಕ್ಕಿದೆ. ಬೆಳಗಾವಿಯ 18 ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ದೊಡ್ಡ ಮಟ್ಟದ ಗೆಲುವು ದಾಖಲಿಸಿದೆ. ಖಾನಾಪುರದ ಡಾ. ಅಂಜಲಿ ನಿಂಬಾಳ್ಕರ್ ಈ ಸಲ ಸೋತರೂ ಆರು ಹೊಸ ಕ್ಷೇತ್ರಗಳಲ್ಲಿ ಈ ಸಲ ಕಾಂಗ್ರೆಸ್ ಗೆದ್ದಿರುವುದು ಐತಿಹಾಸಿಕ. ಹೊಸ ಮುಖಗಳಾದ ಕುಡಚಿಯ ಮಹೇಂದ್ರ ತಮ್ಮಣ್ಣವರ, ಕಿತ್ತೂರಿನ ಬಾಬಾಸಾಹೇಬ್ ಪಾಟೀಲ ಈ ಸಲ ಗೆದ್ದಿದ್ದು, ಕಾಂಗ್ರೆಸ್ ತಂತ್ರವೂ ಫಲಿಸಿದಂತಾಗಿದೆ.
ಕಾಂಬಿನೇಷನ್ ಮ್ಯಾಜಿಕ್: ಜಿಲ್ಲೆಯ ಪ್ರಭಾವಿ ನಾಯಕರಾದ ಲಕ್ಷ್ಮಣ ಸವದಿ, ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಂಬಿನೇಷನ್ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಕಾರಣವಾಯಿತು. ಚುನಾವಣೆ ಘೋಷಣೆ ಬಳಿಕ ಕೊನೆ ಕ್ಷಣದಲ್ಲಿ ಲಕ್ಷ್ಮಣ ಸವದಿ ಅವರನ್ನು ಸೆಳೆದ ಕಾಂಗ್ರೆಸ್‍ಗೆ ಮೂರು ಕ್ಷೇತ್ರಗಳಲ್ಲಿ ಲಾಭವೂ ಆಯಿತು. ತಾವು ಪ್ರತಿನಿಧಿಸಿದ್ದ ಅಥಣಿಯಲ್ಲಿ ದಾಖಲೆಯ ಮತಗಳ ಅಂತರದಿಂದ ಗೆಲ್ಲುವ ಜೊತೆಗೆ ಲಕ್ಷ್ಮಣ ಸವದಿ ತಮ್ಮದೇ ಪ್ರಭಾವ ಹೊಂದಿರುವ ಇನ್ನೆರಡು ಕ್ಷೇತ್ರಗಳಾದ ಕಾಗವಾಡ, ಕುಡಚಿಯಲ್ಲೂ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಲಿಂಗಾಯತ ಪಂಚಮಸಾಲಿ ಮತಗಳನ್ನು ಲಕ್ಷ್ಮಿ ಹೆಬ್ಬಾಳ್ಕರ್ ಸೆಳೆದರೆ, ಇನ್ನುಳಿದ ಲಿಂಗಾಯತ ಮತಗಳನ್ನು ಲಕ್ಷ್ಮಣ ಸವದಿ ಗೆಲ್ಲಿಸಿದರು. ಇತ್ತ ಸತೀಶ ಜಾರಕಿಹೊಳಿ ಹಿಂದುಳಿದ ಮತಗಳನ್ನು ಸೆಳೆಯುವ ಮೂಲಕ ಕಾಂಗ್ರೆಸ್ ಅಭೂತಪೂರ್ವ ಗೆಲುವಿಗೆ ಕೊಡುಗೆ ನೀಡಿದರು.
Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!
ಕತ್ತಿ ಕುಟುಂಬದ ಮೂರನೇ ತಲೆಮಾರು ಸೌಧಕ್ಕೆ: ಜಿಲ್ಲೆಯ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಕತ್ತಿ ಕುಟಂಬವೂ ಒಂದು. ವಿಶ್ವನಾಥ ಕತ್ತಿ 1985ರಲ್ಲಿ ಜನತಾ ಪಕ್ಷದಿಂದ ಗೆದ್ದಿದ್ದರು. ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ವಿಶ್ವನಾಥ ಕತ್ತಿ ನಿಧನರಾದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರ ಹಿರಿಯ ಪುತ್ರ ಉಮೇಶ ಕತ್ತಿ ಹುಕ್ಕೇರಿ ಕ್ಷೇತ್ರದಲ್ಲಿ 9 ಸಲ ಸ್ಪರ್ಧಿಸಿ 8 ಸಲ ಗೆದ್ದಿದ್ದರು. ಅದರಲ್ಲಿ ನಾಲ್ಕು ಸಲ ಸಚಿವರೂ ಆಗಿದ್ದರು. ಬೊಮ್ಮಾಯಿ ಸರ್ಕಾರದಲ್ಲಿ ಆಹಾರ ಸಚಿವರೂ ಆಗಿದ್ದ ಉಮೇಶ ಕತ್ತಿ ಕೆಲ ತಿಂಗಳ ಹಿಂದೆಯಷ್ಟೇ ಹೃದಯಘಾತದಿಂದ ಮೃತರಾಗಿದ್ದರು. 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಉಮೇಶ ಕತ್ತಿ ಪುತ್ರ ನಿಖಿಲ್ ಕತ್ತಿ ಹುಕ್ಕೇರಿಯಿಂದ ಬಿಜೆಪಿ ಅಭ್ಯರ್ಥಿ ಆಗಿ ಸ್ಪರ್ಧಿಸಿ 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದಿದ್ದು, ವಿಧಾನಸೌಧ ಮೆಟ್ಟಿಲು ಹತ್ತಲು ಸನ್ನದ್ಧರಾಗಿದ್ದಾರೆ.
Dharwad Election Result 2023: ಶೆಟ್ಟರ್ ಸೋತರೂ ಧಾರವಾಡದಲ್ಲಿ 'ಕೈ' ಹಿಡಿದ ಮತದಾರ!
ಹೆಬ್ಬಾಳ್ಕರ್- ಸವದಿ ಮುಂದೆ ಮಂಕಾದ ರಮೇಶ ತಂತ್ರ: ರಮೇಶ ಜಾರಕಿಹೊಳಿ ಹೇಳಿದ ನಾಲ್ವರಿಗೆ ಬಿಜೆಪಿ ಹೈಕಮಾಂಡ್ ಈ ಸಲ ಟಿಕೆಟ್ ನೀಡಿತ್ತು. ಅಥಣಿಯಲ್ಲಿ ಮಹೇಶ ಕುಮಟಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ, ಬೆಳಗಾವಿ ಗ್ರಾಮೀಣದಲ್ಲಿ ನಾಗೇಶ ಮನ್ನೋಳ್ಕರ್, ರಾಮದುರ್ಗದಲ್ಲಿ ಚಿಕ್ಕರೇವಣ್ಣಗೆ ಟಿಕೆಟ್ ನೀಡಲಾಗಿತ್ತು. ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಎದುರಾಳಿ ಆಗಿದ್ದ ಕಾಂಗ್ರೆಸ್‍ನ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಲಕ್ಷ್ಮಣ ಸವದಿ ಅವರನ್ನೇ ರಮೇಶ ಟಾರ್ಗೆಟ್ ಮಾಡಿದ್ದರು. ಇಬ್ಬರನ್ನೂ ಸೋಲಿಸುವುದಾಗಿ ಹೇಳಿಕೆ ನೀಡುತ್ತಿದ್ದರು. ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ತಂತ್ರದ ಎದುರು ರಮೇಶ ಜಾರಕಿಹೊಳಿ ಪ್ರಯತ್ನಗಳು ಫಲ ಕೊಡಲಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಲಕ್ಷ್ಮಣ ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರೂ ಮಂತ್ರಿ ಆಗುವ ಸಾಧ್ಯತೆಯೂ ಇದೆ.