ತಾತಾನ ಪ್ರಭಾವ, ತಂದೆ ಮಾಡಿದ ಅಭಿವೃದ್ಧಿ ಹಾಗೂ ತಾಯಿಯ ತ್ಯಾಗಕ್ಕೂ ಮರುಗದ ರಾಮನಗರ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ಕೈ ಹಿಡಿದಿದ್ದರಿಂದ ಜೆಡಿಎಸ್ನ ನಿಖಿಲ್ ಕಮಾರಸ್ವಾಮಿ ಹೀನಾಯ ಸೋಲು ಅನುಭವಿಸುವಂತಾಗಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಮೇ.14): ತಾತಾನ ಪ್ರಭಾವ, ತಂದೆ ಮಾಡಿದ ಅಭಿವೃದ್ಧಿ ಹಾಗೂ ತಾಯಿಯ ತ್ಯಾಗಕ್ಕೂ ಮರುಗದ ರಾಮನಗರ ಕ್ಷೇತ್ರದ ಮತದಾರರು ಕಾಂಗ್ರೆಸ್ ನ ಇಕ್ಬಾಲ್ ಹುಸೇನ್ ಕೈ ಹಿಡಿದಿದ್ದರಿಂದ ಜೆಡಿಎಸ್ನ ನಿಖಿಲ್ ಕಮಾರಸ್ವಾಮಿ ಹೀನಾಯ ಸೋಲು ಅನುಭವಿಸುವಂತಾಗಿದೆ. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ ತಂದೆಯವರ ಕರ್ಮಭೂಮಿಯಲ್ಲಿ ರಾಜಕೀಯ ಆಶ್ರಯ ಪಡೆಯುವ ತವಕದಲ್ಲಿದ್ದರು. ಮಗನ ರಾಜಕೀಯ ಭವಿಷ್ಯ ರೂಪಿಸಲು ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ ರಾಮನಗರ ಕ್ಷೇತ್ರ ತ್ಯಾಗ ಮಾಡಿದ್ದರು.
ಈಗ ಆ ತ್ಯಾಗವೂ ಮಗನಿಗಾಗಿ ಫಲಿಸಲಿಲ್ಲ. ಕಳೆದ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಂಡ ಗೆಲವು ಸಾಧಿಸಿದ್ದ ಕುಮಾರಸ್ವಾಮಿರವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರು. ಉಪಚುನಾವಣೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದರು. 2023ರ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಇರಾದೆ ಹೊಂದಿದ್ದ ಅವರು ಒಲ್ಲದ ಮನಸ್ಸಿನಿಂದಲೇ ನಿಖಿಲ್ ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಇದರಿಂದಾಗಿ ನಿಖಿಲ್ ಮತ್ತು ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ನಡುವಿನ ಹಣಾಹಣಿ ತೀವ್ರ ಕುತೂಹಲ ಕೆರಳಿಸಿತ್ತು.
ಮೈಸೂರು ಜಿಲ್ಲೆಯಲ್ಲಿ ಅಪ್ಪ- ಮಗ ಒಟ್ಟಿಗೆ ವಿಧಾನಸಭೆ ಪ್ರವೇಶ ಇದೇ ಪ್ರಥಮ
ಅಂತಿಮವಾಗಿ ತಮ್ಮ ತಂದೆಯ ಭದ್ರಕೋಟೆಯಲ್ಲಿಯೇ ನಿಖಿಲ್ (76,975ಪಡೆದ ಮತ)ರವರು 10,715 ಮತಗಳ ಅಂತರದಿಂದ ಇಕ್ಬಾಲ್ ಹುಸೇನ್ ಎದುರು ಸೋಲಪ್ಪಿಕೊಂಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ 3ನೇ ತಲೆಮಾರಿನ ಎಂಟ್ರಿಗೆ ಕಾಂಗ್ರೆಸ್ ಬ್ರೇಕ್ ಹಾಕಿದಂತಾಗಿದೆ. ಜಿಪಂ ಮಾಜಿ ಅಧ್ಯಕ್ಷರಾಗಿದ್ದ ಎಚ್.ಎ.ಇಕ್ಬಾಲ್ ಹುಸೇನ್ ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. ಆದರೂ ದೃತಿಗೆಡದ ಅವರು ಕ್ಷೇತ್ರದಲ್ಲಿ ಉಳಿದು ಕೋವಿಡ್ ಸಂಕಷ್ಟದಲ್ಲಿ ಜನರ ಕಷ್ಟಸುಖಗಳಲ್ಲಿ ಭಾಗಿಯಾದರು.
ಧಾರ್ಮಿಕ ಕೇಂದ್ರಗಳಿಗೆ ಸಹಾಯ ಹಸ್ತ ಚಾಚುತ್ತಿದ್ದ ಕಾರಣ ಅನುಕಂಪವೂ ಇತ್ತು. ಕುಮಾರಸ್ವಾಮಿ ಕುಟುಂಬದವರನ್ನು ಮಣಿಸಲು ಸಂಸದ ಡಿ.ಕೆ.ಸುರೇಶ್ ಅವರಾಧಿಯಾಗಿ ಕೆಲವು ಘಟಾನುಘಟಿ ನಾಯಕರು ಟೊಂಕಕಟ್ಟಿನಿಂತರು. ಜೆಡಿಎಸ್ ನ ಕುಟುಂಬ ರಾಜಕಾರಣ, ಕ್ಷೇತ್ರ ಅಭಿವೃದ್ಧಿ ಹೊಂದದಿರುವ ಬಗ್ಗೆ ಕಾಂಗ್ರೆಸ್ಸಿಗರು ಮತದಾರರಲ್ಲಿ ಅರಿವು ಮೂಡಿಸುವ ಜೊತೆಗೆ ಸ್ವಾಭಿಮಾನ ಜಾಗೃತಗೊಳಿಸಿದರು. ದಳದಲ್ಲಿ ಮುನಿದಿದ್ದ ಹಿರಿಯ ಮಖಂಡರನ್ನು ತನ್ನತ್ತ ಸೆಳೆದುಕೊಂಡು ಶಕ್ತಿ ವೃದ್ಧಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಗೆಲುವು ಸಾಧಿಸಿತು.
ನಿಖಿಲ್ ಸೋಲಿಗೆ ಕಾರಣಗಳೇನು?: ಕುಮಾರಸ್ವಾಮಿ ಮುಖ್ಯಮಂತ್ರಿಯಾದರು ಜಿಲ್ಲಾ ಕೇಂದ್ರ ರಾಮನಗರ ನಿರೀಕ್ಷೆಯಂತೆ ಕ್ಷೇತ್ರ ಅಭಿವೃದ್ಧಿ ಹೊಂದಲಿಲ್ಲ. ಇಲ್ಲಿಂದ ಗೆದ್ದವರು ಕೈಗೆ ಸಿಗುವುದಿಲ್ಲ ಎಂಬ ಕೊರಗು ಜನರನ್ನು ಪದೇ ಪದೇ ಕಾಡುತ್ತಿತ್ತು. ಜೆಡಿಎಸ್ ಮೈತ್ರಿ ಸರ್ಕಾರದ ಭಾಗವಾಗಿದ್ದಾಗ ಪಕ್ಷದ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡಲಿಲ್ಲ. ಕೋವಿಡ್ ಸಂಕಷ್ಟಕಾಲದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಐದಾರು ತಿಂಗಳು ಕ್ಷೇತ್ರದತ್ತ ಸುಳಿಯಲೇ ಇಲ್ಲ. ಕಾರ್ಯಕರ್ತರು ಸ್ಪರ್ಧಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದ ಕುಮಾರಸ್ವಾಮಿ ಕುಟುಂಬದವರು ದೂರ ಉಳಿಯುತಿದ್ದರು.
Chikkaballapur Constituency: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್ ಸೋಲಿಗೆ ಕಾರಣವೇನು?
ಜೆಡಿಎಸ್ ಅಭ್ಯರ್ಥಿಯನ್ನಾಗಿ ನಿಖಿಲ್ ಅವರನ್ನು ಘೋಷಿಸುವುದಕ್ಕೂ ಮುನ್ನ ಪಕ್ಷದ ಮುಖಂಡರು - ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ತಾತಾ, ಮಗ, ಸೊಸೆಗಾಗಿ ಹೋರಾಟ ನಡೆಸಿದವರು ಮೊಮ್ಮಗನ ಪರ ನಿಲ್ಲಲು ಹಿಂದೇಟು ಹಾಕಿದರು. ಕುಮಾರಸ್ವಾಮಿರವರು ಪುತ್ರನ ಪರವಾಗಿ ಪ್ರಚಾರ ಕಾರ್ಯದಿಂದಲೂ ದೂರು ಉಳಿದರು. ಅವರ ಭಾವನಾತ್ಮಕ ಮಾತುಗಳು ಕೆಲಸ ಮಾಡಲಿಲ್ಲ. ಇದೆಲ್ಲ ಕಾರಣಗಳಿಂದಾಗಿ ನಿಖಿಲ್ ಸೋಲು ಅನುಭವಿಸಿದರು.