Chikkamagaluru Election Result 2023: ಸಿಟಿ ರವಿ ಮುಂದೆ ಸೀಟಿ ಹೊಡೆದ ತಮ್ಮಯ್ಯ!

By Suvarna News  |  First Published May 13, 2023, 3:15 PM IST

ಬಿಜೆಪಿ ಪ್ರಧಾನ ಕಾರ್ಯದರ್ಶಿ, ಹಿಂದುತ್ವ ವಿಚಾರದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಸಿಟಿ ರವಿಗೆ ಚಿಕ್ಕಮಗಳೂರು ಜನತೆ ಸೋಲಿನ ರುಚಿ ತೋರಿಸಿದ್ದಾರೆ. ಸತತ ನಾಲ್ಕು ಬಾರಿ ಚಿಕ್ಕಮಗಳೂರು ಕ್ಷೇತ್ರದಿಂದ ಆರಿಸಿ ಬಂದ ಸಿಟಿ ರವಿ ಇದೀಗ ತಮ್ಮ ಆಪ್ತ ಡಿಸಿ ತಮ್ಮಯ್ಯ ವಿರುದ್ಧ ಸೋಲು ಕಂಡಿದ್ದಾರೆ.


ಬೆಂಗಳೂರು(ಮೇ.13): ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಇದೀಗ ಕಾಂಗ್ರೆಸ್ ಪಾಲಾಗಿದೆ. ಹಿಂದುತ್ವ ಸೇರಿದಂತೆ ಹಲವು ವಿಚಾರದಲ್ಲಿ ಸಿಟಿ ರವಿ ಪ್ರಖರ ಮಾತುಗಳಿಂದಲೇ ಜನಪ್ರಿಯರಾಗಿದ್ದ ಸಿಟಿ ರವಿಗೆ ಸೋಲಿನ ಆಘಾತ ಎದುರಾಗಿದೆ. ಕಳೆದ 20 ವರ್ಷಗಳಿಂದ ಚಿಕ್ಕಮಗಳೂರು ಕ್ಷೇತ್ರ ಆಳಿದ್ದ ಬಿಜೆಪಿ ನಾಯಕ ಸಿಟಿ ರವಿ ತಮ್ಮ ಆಪ್ತ ತಮ್ಮಯ್ಯ ವಿರುದ್ಧವೇ ಸೋಲು ಕಂಡಿದ್ದಾರೆ. ಸಿಟಿ ರವಿ 52201 ಮತಗಳನ್ನು ಪಡೆದರೆ, ಕಾಂಗ್ರೆಸ್ ನಾಯಕ ಹೆಚ್‌ಡಿ ತಮ್ಮಯ್ಯ 60101 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. 

ಈ ಬಾರಿಯ ವಿಧಾನಸಭಾ ಚುನಾವಣೆ ಹಲವು ನಾಯಕರಿಗೆ ಪಾಠ ಕಲಿಸಿದೆ. ರಾಜ್ಯ ಬಿಜೆಪಿಯ ಭ್ರಷ್ಟ ಆಡಳಿತ, ಎಲ್ಲೆ ಮೀರಿದ ಹೇಳಿಕೆಗಳು ಬಿಜೆಪಿಗೆ ಮುಳುವಾಗಿದೆ. ಪ್ರಮುಖ ಹಾಗೂ ಘಟಾನುಘಟಿ ನಾಯಕರೇ ಮಕಾಡೆ ಮಲಗಿದ್ದಾರೆ. ಸರಿಸುಮಾರು 7,900 ಮತಗಳ ಅಂತರದಿಂದ ಸಿಟಿ ರವಿ ಸೋಲಿನ ಕಹಿ ಅನುಭವಿಸಿದ್ದಾರೆ. 1989ರಿಂದ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರಿನಲ್ಲಿ ಸಿಟಿ ರವಿ  2004ರ ವಿಧಾಸಭಾ ಚುನಾವಣೆಯಲ್ಲಿ ಕಮಲ ಅರಳಿಸಿದ್ದರು. ಇದಾದ ಬಳಿಕ 2008, 2013 ಹಾಗೂ 2018ರಲ್ಲಿ ಸಿಟಿ ರವಿ ಗೆಲುವು ದಾಖಲಿಸಿದ್ದರು. 

Latest Videos

undefined

Karnataka Election Result 2023 ಎಂಬಿ ಪಾಟೀಲ್‌ಗೆ ಗೆಲುವಿನ ಸಂಭ್ರಮ, ಸಿಎಂ ರೇಸ್‌ನಲ್ಲಿ ಲಿಂಗಾಯಿತ ನಾಯಕ!

2023ರ ಚುನಾವಣೆ ಸಿಟಿ ರವಿ ರಾಜಕೀಯ ಭವಿಷ್ಯವನ್ನೇ ಅತಂತ್ರ ಮಾಡಿದೆ. ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ಸಿಟಿ ರವಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲೂ ಕಾಣಿಸಿಕೊಂಡಿದ್ದರು. ಆದರೆ ಈ ಬಾರಿ ಸೋಲು ಸಿಟಿ ರವಿ ರಾಜಕೀಯವಾಗಿ ತೀವ್ರ ಹಿನ್ನಡೆ ತಂದಿದೆ. 2018ರಲ್ಲಿ ಸಿಟಿ ರವಿ 70,863 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಈ ವೇಳೆ ಕಾಂಗ್ರೆಸ್‌ನ ಬಿಎಲ್ ಶಂಕರ್ 44,549 ಮತ ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 

ಈ ಬಾರಿಯ ಚುನಾವಣಾ ಫಲಿತಾಂಶ ಹಲವು ಅಚ್ಚರಿಗಳನ್ನು ನೀಡಿದೆ. ಕಾಂಗ್ರೆಸ್ ಅಭೂತಪೂರ್ವ ಗೆಲುವು ದಾಖಿಸಿ ಅಧಿಕಾರಕ್ಕೇರಿದೆ. ಇತ್ತ ಬಿಜೆಪಿಯ ಪ್ರಮುಖ ನಾಯಕರು ಸೋಲು ಕಂಡಿದ್ದಾರೆ. ಬಿಜೆಪಿ 65 ಸ್ಥಾನಕ್ಕೆ ಕುಸಿದಿದ್ದರೆ, ಕಾಂಗ್ರೆಸ್ 136 ಸ್ಥಾನ ಗೆದ್ದುಕೊಂಡು ಸಂಪೂರ್ಣ ಬಹುಮತದ ಗೆದ್ದುಕೊಂಡಿದೆ. 

Karnataka Election Result 2023 ಕನಕಪುರದಲ್ಲಿ ಬಂಡೆ ಪ್ರಚಂಡ, ಸಾಮ್ರಾಟ ಸಾಷ್ಟಾಂಗ!

16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
 

click me!