ಎದುರಾಳಿಗಳನ್ನು ಬಿಜೆಪಿಗೆ ಕರೆತಂದು ಹೊರನಡೆದ ಶೆಟ್ಟರ್‌!

By Kannadaprabha News  |  First Published Apr 26, 2023, 2:02 AM IST
  • ಎದುರಾಳಿಗಳನ್ನು ಬಿಜೆಪಿಗೆ ಕರೆತಂದು ಹೊರನಡೆದ ಶೆಟ್ಟರ್‌!
  • ಸೋತವರೆಲ್ಲ ಈಗ ಕೇಸರಿಪಡೆ
  • ಗೆದ್ದು ಬೀಗಿದ್ದ ಶೆಟ್ಟರ್‌ ಈಗ ಕಾಂಗ್ರೆಸ್‌ ಅಭ್ಯರ್ಥಿ
  • ಅಂದು ಕರೆತಂದವರೇ ಶೆಟ್ಟರ್‌ಗೆ ಎದುರಾಳಿಗಳು

ಶಿವಾನಂದ ಗೊಂಬಿ

ಹುಬ್ಬಳ್ಳಿ (ಏ.26) : ಹಿಂದೆ ತಮ್ಮ ವಿರುದ್ಧ ಸ್ಪರ್ಧಿಸಿದ್ದವರನ್ನೆಲ್ಲ ಬಿಜೆಪಿಗೆ ಸೇರಿಸಿದ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಇದೀಗ ತಾವೇ ಕಾಂಗ್ರೆಸ್‌ ಸೇರಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಅವರೇ ಇವರಿಗೆ ವಿರೋಧಿಗಳಾಗಿದ್ದಾರೆ!

Tap to resize

Latest Videos

ಇದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ(Hubballi-dharwad central assembly constituency)ದ ವಿಶೇಷ. 1994ರಿಂದ ಈ ಕ್ಷೇತ್ರದ ಅನಭಿಷಿಕ್ತ ನಾಯಕನಂತೆ ಪ್ರತಿಸಲ ಆಯ್ಕೆಯಾಗುತ್ತಾ ಬಂದವರು ಜಗದೀಶ ಶೆಟ್ಟರ್‌.(Jagadish shettar) ಈ ಕ್ಷೇತ್ರದ ವಿಶೇಷವೆಂದರೆ ಶೆಟ್ಟರ್‌ ವಿರುದ್ಧ ಸ್ಪರ್ಧಿಸಿದವರೆಲ್ಲರೂ ಇದೀಗ ಬಿಜೆಪಿಯಲ್ಲಿದ್ದಾರೆ. ಇವರೆಲ್ಲರನ್ನು ಬಿಜೆಪಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಇದೇ ಶೆಟ್ಟರ್‌.

1994ರಲ್ಲಿ ಈ ಕ್ಷೇತ್ರ ಹುಬ್ಬಳ್ಳಿ ಗ್ರಾಮೀಣ ಎಂದು ಇತ್ತು. ಬಳಿಕ 2008ರಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಶೆಟ್ಟರ್‌ ಈ ಕ್ಷೇತ್ರದಲ್ಲಿ ಬರೋಬ್ಬರಿ 6 ಸಲ ಗೆಲವು ಕಂಡವರು. ವಿಶೇಷವೆಂದರೆ ಇವರ ವಿರುದ್ಧ ಸ್ಪರ್ಧಿಸಿದ್ದ ಆರು ಜನ ಇದೀಗ ಬಿಜೆಪಿಯಲ್ಲಿದ್ದಾರೆ.

Karnataka Assembly Elections 2023: ಸಿಎಂ, ಸಿದ್ದು, ಶೆಟ್ಟರ್‌ ಸೇರಿ ಒಂದೇ ದಿನ 935 ಜನ ನಾಮಪತ್ರ

ಆರು ಜನ ಬಿಜೆಪಿಗೆ:

1994ರಲ್ಲಿ ಶೆಟ್ಟರ್‌ ವಿರುದ್ಧ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಸ್ಪರ್ಧಿಸಿದ್ದರು. ಶೆಟ್ಟರ್‌ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಬೊಮ್ಮಾಯಿ ಜನತಾದಳದಿಂದ ಸ್ಪರ್ಧಿಸಿದ್ದರು. ಆದರೆ ಬೊಮ್ಮಾಯಿ ಸೋತಿದ್ದರು. ಇವರು 2008ರ ಚುನಾವಣೆ ವೇಳೆ ಬಿಜೆಪಿ ಸೇರಿ ಶಿಗ್ಗಾಂವಿ- ಸವಣೂರು ಕ್ಷೇತ್ರಕ್ಕೆ ಶಿಫ್‌್ಟಆಗಿ ಅಲ್ಲಿಂದ ಗೆಲ್ಲುತ್ತಾ ಬಂದರು.

ಇನ್ನೂ ಮೊದಲು ಬಿಜೆಪಿಯಲ್ಲಿದ್ದ ವಿಜಯ ಸಂಕೇಶ್ವರ(Vijaya sankeshwar) 2003ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಕನ್ನಡನಾಡು ಪಕ್ಷ ಕಟ್ಟಿದ್ದರು. ಆಗ ಶೆಟ್ಟರ್‌ ವಿರುದ್ಧ ತಮ್ಮ ಪಕ್ಷದಿಂದ ಕಣಕ್ಕಿಳಿದಿದ್ದರು. ಆದರೆ ಗೆಲವು ಸಿಗಲಿಲ್ಲ. ನಂತರ ನಡೆದ ರಾಜಕೀಯ ಬೆಳವಣಿಗೆಯಿಂದಾಗಿ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಂಕರಣ್ಣ ಮುನವಳ್ಳಿ ಆ ಚುನಾವಣೆಯಲ್ಲಿ ಸೋತ ಬಳಿಕ ಕೇಸರಿ ಪಡೆ ಸೇರಿದರು. ಇನ್ನು 2013 ಹಾಗೂ 2018ರಲ್ಲಿ ಶೆಟ್ಟರ್‌ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಹೇಶ ನಾಲ್ವಾಡ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ರಾಜಣ್ಣ ಕೊರವಿ ಇಬ್ಬರು ಬಿಜೆಪಿ ಸೇರಿದ್ದಾರೆ. ಹೀಗೆ ಶೆಟ್ಟರ್‌ ವಿರುದ್ಧ ಸೋತ ಬಹುತೇಕರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರೆಲ್ಲರೂ ಬಿಜೆಪಿಗೆ ಆತ್ಮೀಯರೂ ಆಗಿದ್ದವರು.

ಹೊರನಡೆದ ಶೆಟ್ಟರ್‌:

ಇವರೆಲ್ಲರನ್ನು ಬಿಜೆಪಿಗೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದ್ದವರು ಶೆಟ್ಟರ್‌. ಎಲ್ಲರನ್ನು ಕೇಸರಿಪಡೆಗೆ ಕರೆತಂದು ವಿರೋಧಿಗಳೇ ಇಲ್ಲದಂತೆ ಮಾಡಿದ್ದ ಕೀರ್ತಿ. ಆದರೆ ಇದೀಗ ಅವರೇ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಇವರೆಲ್ಲರೂ ಒಟ್ಟಾಗಿ ಇದೀಗ ಶೆಟ್ಟರ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಸಮರ ಸಾರಿದ್ದಾರೆ. ಎಲ್ಲರನ್ನು ಪಕ್ಷಕ್ಕೆ ಕರೆತಂದು ತಾವೇ ಹೊರಹೋಗಿ ಅವರ ವಿರುದ್ಧವೇ ಸೆಣಸಬೇಕಾದ ಸ್ಥಿತಿ ಶೆಟ್ಟರ್‌ ಅವರದ್ದಾಗಿದೆ.

 

ಕಾಂಗ್ರೆಸ್‌ನ 40 ಸ್ಟಾರ್‌ ಪ್ರಚಾರಕರ ಪಟ್ಟಿ ಬಿಡುಗಡೆ: ರಮ್ಯಾ, ಜಗದೀಶ್‌ ಶೆಟ್ಟರ್‌ಗೂ ಸ್ಥಾನ

ಪಾಟೀಲ, ರಾಯನಗೌಡರ್‌ ಸಾಥ್‌:

ಇನ್ನು ಇದೇ ಶೆಟ್ಟರ್‌ ವಿರುದ್ಧ 1994ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ರಾಜಾ ದೇಸಾಯಿ, 2004ರಲ್ಲಿ ಸ್ಪರ್ಧಿಸಿದ್ದ ಮಾಜಿ ಮೇಯರ್‌ ಅನಿಲಕುಮಾರ ಪಾಟೀಲ, ಪಾಲಿಕೆ ಮಾಜಿ ಸದಸ್ಯ ಪಿ.ಕೆ.ರಾಯನಗೌಡರ ಇದೀಗ ಶೆಟ್ಟರ್‌ಗೆ ಸಾಥ್‌ ನೀಡುತ್ತಿರುವುದು ವಿಶೇಷ. ಈ ಮೂವರು ಇದೀಗ ಕಾಂಗ್ರೆಸ್‌ನಲ್ಲೇ ಇದ್ದು, ಶೆಟ್ಟರ್‌ ಗೆಲುವಿಗೆ ಬೆವರಿಳಿಸುತ್ತಿರುವುದು ವಿಶೇಷ. ರಾಜಕೀಯದಲ್ಲಿ ಯಾರು ಶತ್ರುಗಳೂ ಅಲ್ಲ; ಯಾರೂ ಮಿತ್ರರೂ ಅಲ್ಲ ಎಂಬ ಮಾತಿಗೆ ಸೆಂಟ್ರಲ್‌ ಕ್ಷೇತ್ರ ಸಾಕ್ಷಿಕರಿಸುತ್ತಿರುವುದಂತೂ ಸತ್ಯ.

click me!