ಚಾಮರಾಜಪೇಟೆ ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಆರಂಭಗೊಂಡಿರುವ ಜಟಾಪಟಿ ಇನ್ನೂ ನಿಂತಿಲ್ಲ. ಭಾಸ್ಕರ್ ರಾವ್‌ಗೆ ಟಿಕೆಟ್ ಬದಲು ಸೈಲೆಂಟ್ ಸುನೀಲಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಬೆಂಬಲಿಗರು ಬಿಜೆಪಿ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈಗಾಗಲೇ ಭಾಸ್ಕರ್ ರಾವ್ ಬೇಡ ಅನ್ನೋ ಕೂಗು ಜೋರಾಗಿದೆ. ಇದರ ನಡುವೆ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಎಂಟ್ರಿಕೊಟ್ಟಿದ್ದಾರೆ.
ಬೆಂಗಳೂರು(ಏ.13): ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಳಿಕ ಶುರುವಾಗಿರುವ ಬಂಡಾಯ, ರಾಜೀನಾಮೆ ಪರ್ವ ನಿಂತಿಲ್ಲ. ಇದರಲ್ಲಿ ಚಾಮರಾಜಪೇಟೆ ಕ್ಷೇತ್ರವೂ ಸೇರಿದೆ. ಚಾಮರಾಜಪೇಟೆಯಲ್ಲಿ ಬಿಜೆಪಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿದೆ. ಇದು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಲೆಂಟ್ ಸುನೀಲನ ಕೆರಳಿಸಿದೆ. ಇದರ ಬೆನ್ನಲ್ಲೇ ಬೆಂಬಲಿಗರು ಬಿಜೆಪಿ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದರು. ಚಾಮಾರಾಜಪೇಟೆಯಲ್ಲಿ ಭಾಸ್ಕರ್ ರಾವ್ ಬೇಡ ಅನ್ನೋ ಕೂಗು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬಂಡಾಯ ಶಮನಕ್ಕೆ ಕರ್ನಾಟಕ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಎಂಟ್ರಿಕೊಟ್ಟಿದ್ದಾರೆ. ಇಷ್ಟೇ ಅಲ್ಲ ಸೈಲೆಂಟ್ ಸುನೀಲನ ಬೆಂಬಲಿಗರು ಮಹತ್ವದ ಸಲಹೆ ನೀಡಿದ್ದಾರೆ.
ಚಾಮರಾಜಪೇಟೆಯಲ್ಲಿ ಅಳೆದು ತೂಗಿ ಬಿಜೆಪಿ ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿದೆ. ಭಾಸ್ಕರ್ ರಾವ್ ಹಿಂದೆ ಬೆಂಗಳೂರು ಕಮಿಷನರ್ ಆಗಿ ಕೆಲಸ ಮಾಡಿದ್ದಾರೆ. ಜನರ ಸೇವೆ ಮಾಡಲು ಬಂದವರನ್ನು ಎಲ್ಲರು ಒಪ್ಪಿಕೊಳ್ಳಬೇಕು. ವ್ಯಕ್ತಿಯ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ಅಭ್ಯರ್ಥಿ ಬದಲಾವಣೆಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಆದರೆ ಈ ಪ್ರತಿಭಟನೆ ಗೌರವಯುತವಾಗಿರುಬೇಕು. ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದು ತಪ್ಪು ಎಂದರ್ಥವಲ್ಲ. ಒಬ್ಬರಿಗೆ ಟಿಕೆಟ್ ಕೊಟ್ಟಾಗ ಎಲ್ಲರೂ ಒಪ್ಪಿಕೊಂಡು ಅವರ ಪರ ಕೆಲಸ ಮಾಡಬೇಕು ಎಂದು ಅಣ್ಣಾಮಲೈ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಚಾಮರಾಜಪೇಟೆಯಲ್ಲಿ ಅಭ್ಯರ್ಥಿ ಬದಲಾವಣೆ ಇಲ್ಲ ಎಂದು ಸೈಲೆಂಟ್ ಸುನೀಲನ ಬೆಂಬಲಿಗರಿಗೆ ಹೇಳಿದ್ದಾರೆ.
ದಾವಣಗೆರೆ ಉತ್ತರ ದಕ್ಷಿಣ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ: ಹಾಲಿ ಶಾಸಕರಿಗೆ ಶಾಕ್ ನೀಡಿ ಬಿಜೆಪಿ ಹೈಕಮಾಂಡ್!
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಐಪಿಎಸ್ ಅಧಿಕಾರ ಭಾಸ್ಕರ್ ರಾವ್‌ಗೆ ಬಿಜೆಪಿ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರೌಡಿ ಶೀಟರ್ ಸೈಲೆಂಟ್ ಸುನೀಲ್‌ನ ಬೆಂಬಲಿಗರು ಬುಧವಾರ(ಏ.12) ರಾಜ್ಯ ಬಿಜೆಪಿ ಕಚೇರಿಗೆ ನುಗ್ಗಿ ಘೋಷಣೆ ಕೂಗಿ ಗಲಾಟೆ ಮಾಡಿದ್ದರು. ಮಹಿಳೆಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಗೆ ಬಳಿ ಜಮಾಯಿಸಿದ್ದ ಸೈಲೆಂಟ್ ಸುನೀಲನ ಬೆಂಬಲಿಗರು, ಏಕಾಏಕಿ ಕಚೇರಿಯ ಮೊದಲ ಮಹಡಿಗೆ ನುಗ್ಗಿ ಭಾಸ್ಕರ್ ರಾವ್ ವಿರುದ್ಧ ಧಿಕ್ಕಾರ ಕೂಗಿದರು. ಕೆಲವು ಕಾರ್ಯಕರ್ತರು ಕಚೇರಿ ಒಳಗೆ ಮಲಗಿ ಧರಣಿ ನಡೆಸಿದರು. ಕಚೇರಿ ಒಳಗೆ ಪ್ರತಿಭಟನೆ ನಿರತ ಕಾರ್ಯಕರ್ತರನ್ನು ಹೊರಗೆ ಕಳುಹಿಸಲು ಪೊಲೀಸರು ಹರಸಾಹಸಪಟ್ಟರು.
ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದರು. ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಕೆಲವು ಮುಖಂಡರನ್ನು ಸಭೆಗೆ ಆಹ್ವಾನಿಸಿ ಚರ್ಚಿಸಿದ್ದರು.
ಲಕ್ಷ್ಮಣ ಸವದಿ ಬಂಡಾಯ: ಕಾಂಗ್ರೆಸ್‌ಗೆ ಸಿಗುತ್ತಾ ಲಾಭ?
ಈ ವೇಳೆ ಮಾತನಾಡಿದ ರವಿಕುಮಾರ್, ಚಾಮರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಭಾಸ್ಕರ್ ರಾವ್ ಬದಲಾವಣೆ ಮಾಡುವಂತೆ ಹೇಳಿದ್ದಾರೆ. ಮಂಡಲ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡುತ್ತಿದ್ದೇನೆ. ನಿಮ್ಮ ಹಾಗೆ ನಾನೂ ಕಾರ್ಯಕರ್ತ. ನಿಮ್ಮ ಬೇಡಿಕೆ ಬಗ್ಗೆ ಬರೆದುಕೊಡಿ. ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ, ಮನವಿಯನ್ನು ಕೇಂದ್ರಕ್ಕೆ ಕಳುಹಿಸಿ ಕೊಡುತ್ತೇನೆ. ಚಾಮರಾಜಪೇಟೆಯ ಸದ್ಯದ ಪರಿಸ್ಥಿತಿ ಕುರಿತು ವರದಿ ಕಳುಹಿಸುತ್ತೇವೆ. ನಮ್ಮ ಕಾರ್ಯಕರ್ತರಾಗಿರುವುದರಿಂದ ನ್ಯಾಯ ಕೊಡಿಸಲೇಬೇಕಿದೆ. ಚಾಮರಾಜಪೇಟೆಯಲ್ಲಿ ಈ ಬಾರಿ ಬಿಜೆಪಿ ಬಾವುಟ ಹಾರಿಸೋಣ ಎಂದು ಕರೆ ನೀಡಿದರು.