ರಾಜಕೀಯ ಕೃಷಿಗೆ ಕಾಲಿಟ್ಟ ಕೃಷಿ ವಿಜ್ಞಾನಿ ವಿಶುಕುಮಾರ: ಹಲವು ಡಿಗ್ರಿಗಳ ಸರದಾರ ಪುತ್ತೂರು ಆಪ್ ಅಭ್ಯರ್ಥಿ

By Kannadaprabha News  |  First Published Apr 22, 2023, 1:12 PM IST

ಹಲವು ಪದವಿಗಳ ಸರದಾರ ಇವರು. ಜೊತೆಗೆ, ಕೃಷಿ ವಿಜ್ಞಾನಿ ಕೂಡ ಹೌದು, ಕೃಷಿ ಹಾಗೂ ಔಷಧ ಸಂಶೋಧನೆಗಾಗಿ ಸ್ವಂತ ಕಂಪನಿಯೊಂದನ್ನು ತೆರೆದಿದ್ದಾರೆ. ಈ ಕಂಪನಿಯಲ್ಲಿ ರೈತರಿಗೆ ಉಪಯುಕ್ತವಾದ ಲಘು ಪೋಷಕಾಂಶವನ್ನು ಉತ್ಪಾದಿಸುತ್ತಾರೆ. 


ಆತ್ಮಭೂಷಣ್‌

ಮಂಗಳೂರು (ಏ.22): ಹಲವು ಪದವಿಗಳ ಸರದಾರ ಇವರು. ಜೊತೆಗೆ, ಕೃಷಿ ವಿಜ್ಞಾನಿ ಕೂಡ ಹೌದು, ಕೃಷಿ ಹಾಗೂ ಔಷಧ ಸಂಶೋಧನೆಗಾಗಿ ಸ್ವಂತ ಕಂಪನಿಯೊಂದನ್ನು ತೆರೆದಿದ್ದಾರೆ. ಈ ಕಂಪನಿಯಲ್ಲಿ ರೈತರಿಗೆ ಉಪಯುಕ್ತವಾದ ಲಘು ಪೋಷಕಾಂಶವನ್ನು ಉತ್ಪಾದಿಸುತ್ತಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು, ಕೃಷಿಕರ ಸಮಗ್ರ ಏಳಿಗೆಗಾಗಿ ಶ್ರಮಿಸಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಈಗ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಆಮ್‌ ಆದ್ಮಿ ಪಾರ್ಟಿ(ಆಪ್‌)ಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ವಿಶು ಕುಮಾರ್‌ ಅವರ ಸಾಹಸಗಾಥೆಯಿದು.

Tap to resize

Latest Videos

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಪಂಜದ ಬೇರ್ಯ ನಿವಾಸಿ ಇವರು. ಡಾ.ವಿಶು ಕುಮಾರ್‌ ಅವರು ಸಾವಯವ ರಸಾಯನಶಾಸ್ತ್ರದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಜೊತೆಗೆ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ, ಮೈಸೂರು ವಿವಿಯಲ್ಲಿ ಎಂಬಿಎ, ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕರಾಮುವಿ)ದಲ್ಲಿ ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಡಿಪ್ಲೊಮಾ, ಚೆನ್ನೈ ರಾಷ್ಟ್ರೀಯ ಆರೋಗ್ಯ ವಿವಿಯಲ್ಲಿ ಆಹಾರ ವಿಜ್ಞಾನ ವಿಭಾಗದಲ್ಲಿ ಡಿಪ್ಲೊಮಾ ಸೇರಿದಂತೆ ಹಲವು ಪದವಿಗಳ ಸರದಾರ ಇವರು.

ಶೆಟ್ಟರ್‌, ಸವದಿ ತಪ್ಪು ಹೆಜ್ಜೆ: ವಿಧಾನಸಭಾಧ್ಯಕ್ಷ ಕಾಗೇರಿ ಬೇಸರ

ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. ಹೀಗಾಗಿ, ಅವರಿಗೆ ಪುತ್ತೂರಿನ ನಂಟು ಇದೆ. ಅಲ್ಲದೆ, ‘ಕೃಷಿ ವಿಜ್ಞಾನಿಯಾಗಿ ಸುಳ್ಯ ಮಾತ್ರವಲ್ಲದೆ, ಬೆಳ್ತಂಗಡಿ, ಬಂಟ್ವಾಳ, ಪುತ್ತೂರುಗಳಲ್ಲಿ ಅನೇಕ ಬಾರಿ ಸುತ್ತಾಡಿದ್ದೇನೆ. ಹೈನುಗಾರರು, ಕೃಷಿಕರನ್ನು ಮಾತನಾಡಿಸಿದ್ದೇನೆ. ಅವರ ಸಂಕಷ್ಟಗಳಿಗೆ ವಿಜ್ಞಾನಿಯಾಗಿ ಸ್ಪಂದಿಸಿದ್ದೇನೆ, ಪರಿಹಾರಕ್ಕೆ ಯತ್ನಿಸಿದ್ದೇನೆ. ಹಾಗಾಗಿ, ನನಗೆ ಪುತ್ತೂರು ಚಿರಪರಿಚಿತ ಊರು, ಇಲ್ಲಿಂದಲೇ ಆಪ್‌ ಚಿಹ್ನೆಯಡಿ ಸ್ಪರ್ಧಿಸುತ್ತಿದ್ದೇನೆ’ ಎನ್ನುತ್ತಾರೆ ಇವರು.

ಕೃಷಿ ಸಂಶೋಧನಾ ಕಂಪನಿಯ ಮಾಲೀಕ: ಡಾ.ವಿಶು ಕುಮಾರ್‌ಗೆ ಮೈಸೂರಿನಲ್ಲಿ ಅವೆಂಚೂರ್‌ ಆಗ್ರ್ಯಾನಿಕ್ಸ್‌ ಹೆಸರಿನ ಸ್ವಂತ ಕಂಪನಿ ಇದೆ. ಇವರ ಪತ್ನಿ ಡಾ.ವೀಣಾ ಹಾಗೂ ಇವರು ಕಂಪನಿಯ ಪಾಲುದಾರರು. ಕೃಷಿ ಹಾಗೂ ಔಷಧ ಸಂಶೋಧನೆಗೆ ಈ ಕಂಪನಿ ಮೀಸಲು. ಈ ಕಂಪನಿಯಲ್ಲಿ ರೈತರಿಗೆ ಉಪಯುಕ್ತವಾದ ಲಘು ಪೋಷಕಾಂಶವನ್ನು ಉತ್ಪಾದಿಸುತ್ತಾರೆ. ಇವರ ಪತ್ನಿ ಡಾ.ವೀಣಾ ಅವರು ಸ್ವೀಡನ್‌, ಇಟಲಿಗಳಲ್ಲಿ ಕ್ಯಾನ್ಸರ್‌ ಸಂಶೋಧಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಡಾ.ವಿಶು ಕುಮಾರ್‌ ಕೂಡ ಬೆಂಗಳೂರಿನಲ್ಲಿ ಸಿಪ್ಲಾ ಕಂಪನಿಯಲ್ಲಿ ಮಾರುಕಟ್ಟೆಮುಖ್ಯಸ್ಥರಾಗಿ, ಯಲಹಂಕದ ವೆಟರ್ನರಿ ಕಂಪನಿಯೊಂದರಲ್ಲಿ ಸಂಶೋಧನಾ ವಿಜ್ಞಾನಿಯಾಗಿ, ಮೈಸೂರಿನ ಜುಬಿಲೆಂಟ್‌ ಮೆಡಿಸನ್‌ ಕಂಪನಿಯಲ್ಲಿ ಕೆಮಿಕಲ್‌ ಘಟಕದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. 2008ರಿಂದ ಮೈಸೂರಿನಲ್ಲಿ ತಮ್ಮದೇ ಸ್ವಂತ ಕಂಪನಿಯನ್ನು ಹುಟ್ಟು ಹಾಕಿದ್ದಾರೆ. ಎರಡು ವರ್ಷ ಹಿಂದೆ ಮೈಸೂರಿನಲ್ಲಿ ಆಪ್‌ ಸೇರಿ ರಾಜಕಾರಣಕ್ಕೆ ಧುಮುಕಿದ್ದಾರೆ. ಕಳೆದ ಮೂರು ತಿಂಗಳಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆಯಲ್ಲಿ ತೊಡಗಿದ್ದು, ಸಕ್ರಿಯ ಓಡಾಟದಲ್ಲಿ ನಿರತರಾಗಿದ್ದಾರೆ. ‘ನನಗೆ ಈ ಕ್ಷೇತ್ರದ ಬಹುತೇಕ ಕೃಷಿಕರ ಪರಿಚಯವಿದ್ದು, ನನ್ನನ್ನು ಎಲ್ಲರೂ ಬೆಂಬಲಿಸುವ ವಿಶ್ವಾಸವಿದೆ’ ಎನ್ನುತ್ತಾರೆ ಇವರು.

ಉದ್ಯೋಗದಲ್ಲಿದ್ದರೂ ಕೃಷಿ ಮರೆತಿಲ್ಲ: ಡಾ.ವಿಶು ಕುಮಾರ್‌ ಅವರ ತಂದೆ ಕುಶಾಲಪ್ಪ ಗೌಡ ಅವರು ಗ್ರಾಮಕಾರಣಿಕರಾಗಿದ್ದರು. ತಾಯಿ ಜಾನಕಿ, ಮನೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಈ ದಂಪತಿಯ ಆರು ಗಂಡು ಮಕ್ಕಳ ಪೈಕಿ ಡಾ.ವಿಶು ಕುಮಾರ್‌ ಕೊನೆಯವರು. ಹಿರಿಯ ಸಹೋದರ ಮಾಧವ ಬಿ.ಕೆ. ಅವರು ನಿವೃತ್ತ ಸೈನಿಕರಾಗಿದ್ದು, ಯುವಜನ ಸೇವಾ ಕ್ರೀಡಾಧಿಕಾರಿಯಾಗಿದ್ದರು. ಮತ್ತೊಬ್ಬ ಅಣ್ಣ, ಕುಸುಮಾಧರ ಅವರು ಭೂ ದಾಖಲೆಗಳ ಇಲಾಖೆಯ ಅಧಿಕಾರಿಯಾಗಿದ್ದರು. ಇನ್ನೊಬ್ಬರು, ಚೆನ್ನಕೇಶವ ಎಂಬುವರು ಕೈಗಾದಲ್ಲಿ ಪ್ರಾಜೆಕ್ಟ್ ಹೆಡ್‌ ಆಗಿದ್ದಾರೆ. 

ಮತ್ತೊಬ್ಬ ಅಣ್ಣ, ವಿಜಯ ಕುಮಾರ್‌ ಎಂಬುವರು ಕೃಷಿಕರು. ಕಿರಣ್‌ಚಂದ್ರ ಎಂಬುವರು ಬೆಂಗಳೂರಲ್ಲಿ ಕಂಪನಿ ಉದ್ಯೋಗಿ. ಅಲ್ಲದೆ, ಇಬ್ಬರು ಸಹೋದರಿಯರೂ ಇದ್ದಾರೆ. ಸಹೋದರರೆಲ್ಲ ಉದ್ಯೋಗದಲ್ಲಿದ್ದರೂ, ಈ ಕುಟುಂಬ ಕೃಷಿ ಕಸುಬನ್ನು ಬಿಟ್ಟಿಲ್ಲ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಮುಂದುವರಿದ ಡಿಕೆ​ಶಿ ‌ಟೆಂಪಲ್ ರನ್: ರಾಜ್ಯದ ಮುಖ್ಯಮಂತ್ರಿ ಗಾದಿಗಾಗಿ ಈಶ್ವರನಿಗೆ ರುದ್ರಾಭಿಷೇಕ!

ನಾನು ಓದಿದ ಊರು ಪುತ್ತೂರು. ನನ್ನ ಪರಿಚಯದವರು ಅನೇಕ ಮಂದಿ ಇದ್ದಾರೆ. ಕೃಷಿ ವಿಜ್ಞಾನಿಯಾಗಿ ರೈತರ ಜತೆ ಜಾಸ್ತಿ ಒಡನಾಟ ಇರುವುದರಿಂದ ಎಲ್ಲರ ಬೆಂಬಲ ಸಿಗುವ ವಿಶ್ವಾಸದಲ್ಲಿದ್ದೇನೆ.
- ಡಾ.ವಿಶು ಕುಮಾರ್‌, ಆಪ್‌ ಅಭ್ಯರ್ಥಿ, ಪುತ್ತೂರು.

click me!