ಭ್ರಷ್ಟಾಚಾರಕ್ಕೆ ಹೆಸರಾದ ಕಾಂಗ್ರೆಸ್ ಧಿಕ್ಕರಿಸಿ ಈ ಬಾರಿ ಕಮಲಕ್ಕೆ ಮತ ನೀಡಿ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಬೊಮ್ಮನಹಳ್ಳಿ (ಏ.21): ಭ್ರಷ್ಟಾಚಾರಕ್ಕೆ ಹೆಸರಾದ ಕಾಂಗ್ರೆಸ್ ಧಿಕ್ಕರಿಸಿ ಈ ಬಾರಿ ಕಮಲಕ್ಕೆ ಮತ ನೀಡಿ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮನವಿ ಮಾಡಿದ್ದಾರೆ. ಗುರುವಾರ ಅವರು ಬಿಟಿಎಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಧರ್ ರೆಡ್ಡಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಕೋರಮಂಗಲದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಧರ್ ರೆಡ್ಡಿ ಅವರೊಂದಿಗೆ ಕೋರಮಂಗಲದ ಲಕ್ಷ್ಮೇದೇವಿ ಮೈದಾನದಿಂದ ಬೇತಾನಿ ಶಾಲಾ ವರೆಗೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ರಾಜೀವ್, ಬಾರಿ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬದಲಾವಣೆ ತರಲು ಕಾರ್ಯಕರ್ತರು ನಿರ್ಧರಿಸಿದ್ದಾರೆ. ಈ ಚುನಾವಣೆ ತುಂಬಾ ಮಹತ್ವದ ಚುನಾವಣೆ. ಇದು ಬಿಟಿಎಂ ಜನರ ಭವಿಷ್ಯಕ್ಕಾಗಿ, ರಾಜ್ಯದ ಭವಿಷ್ಯಕ್ಕಾಗಿ ತುಂಬಾ ಮಹತ್ವದ ಚುನಾವಣೆಯಾಗಿದೆ. ಪಕ್ಷದ ಅಭ್ಯರ್ಥಿ ಶ್ರೀಧರ್ ರೆಡ್ಡಿ ಬೆಂಬಲಕ್ಕೆ ನಾನು ಬಂದಿದ್ದೇನೆ. ಮೋದಿ ನವ ಭಾರತ ನಿರ್ಮಾಣದ ಕನಸು ಕಟ್ಟಿದ್ದರು. ಹೀಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ಸೇರ್ಪಡೆ ಕಾಂಗ್ರೆಸ್ಸಿಗೆ ಆನೆ ಬಲ: ರಣದೀಪ್ ಸಿಂಗ್ ಸುರ್ಜೇವಾಲಾ
ರಾಮಲಿಂಗಾರೆಡ್ಡಿ ಅವರ ಕುಟುಂಬದ ರಾಜಕೀಯ ಈ ಬಾರಿ ನಡೆಯಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಈ ಬಾರಿ 150 ಸ್ಥಾನ ಗೆಲ್ಲಲಿದೆ ಎಂಬುದು ರಾಮಲಿಂಗಾರೆಡ್ಡಿ ಅವರ ಕನಸು. ಈ ಬಾರಿ ಬಿಜೆಪಿ 135 ರಿಂದ 150 ಸ್ಥಾನ ಗೆಲ್ಲಲಿದೆ. ಜನ ಕಾಂಗ್ರೆಸ್, ಜೆಡಿಎಸ್ ಸರ್ಕಾರದಿಂದ ಸಾಕಷ್ಟುಅನುಭವಿಸಿದ್ದಾರೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂದರು. ಶ್ರೀಧರ್ ರೆಡ್ಡಿ ಅವರು, ಈ ಬಿಸಿಲನ್ನೂ ಲೆಕ್ಕಿಸದೆ ನನ್ನನ್ನು ಬೆಂಬಲಿಸಲು ಸಾವಿರಾರು ಕಾರ್ಯಕರ್ತರು ಆಗಮಿಸಿರುವುದು ಸಂತೋಷ ತಂದಿದೆ.
ಸಿದ್ದರಾಮಯ್ಯ ಹಿಂದು ವಿರೋಧಿ, ಮುಸ್ಲಿಂ ನಾಯಕ: ಶೋಭಾ ಕರಂದ್ಲಾಜೆ
ಇದೇ ಹುಮ್ಮಸ್ಸಿನಲ್ಲಿ ಮೇ 10ರವರೆಗೆ ಕ್ಷೇತ್ರದಲ್ಲಿ ಓಡಾಡಬೇಕು. ಈ ಬಾರಿ ಬಿಟಿಎಂ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸಬೇಕು ಎಂದರು. ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜೇಂದ್ರ ರೆಡ್ಡಿ, ಯುವ ಮೋರ್ಚಾ ಖಜಾಂಚಿ ಅನಿಲ್ ಶೆಟ್ಟಿ, ಅಪಾರ ಸಂಖ್ಯೆಯ ಬೆಂಬಲಿಗರು, ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರು ಸಾಥ್ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.