ಚುನಾವಣಾ ಆಯೋಗ ಮತದಾನದ ಹಕ್ಕನ್ನು ಚಲಾಯಿಸುವಂತೆ ಅರಿವು ಮೂಡಿಸಲು ರೂಪಿಸಿದ ಕಾರ್ಯಕ್ರಮಗಳು ಹಾಗೂ ರಾಜಕೀಯ ನಾಯಕರ ಅಬ್ಬರದ ಪ್ರಚಾರದ ಪರಿಣಾಮ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾರ್ಹವಾದ ಮತದಾನ ನಡೆದಿದ್ದು, ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದುಕೊಂಡಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಮೇ.12): ಚುನಾವಣಾ ಆಯೋಗ ಮತದಾನದ ಹಕ್ಕನ್ನು ಚಲಾಯಿಸುವಂತೆ ಅರಿವು ಮೂಡಿಸಲು ರೂಪಿಸಿದ ಕಾರ್ಯಕ್ರಮಗಳು ಹಾಗೂ ರಾಜಕೀಯ ನಾಯಕರ ಅಬ್ಬರದ ಪ್ರಚಾರದ ಪರಿಣಾಮ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ದಾಖಲಾರ್ಹವಾದ ಮತದಾನ ನಡೆದಿದ್ದು, ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದುಕೊಂಡಿದೆ. ಕಳೆದ 14 ವಿಧಾನಸಭಾ ಚುನಾವಣೆಗಳಿಗೆ ಹೋಲಿಕೆ ಮಾಡಿದಲ್ಲಿ 2023 ಚುನಾವಣೆಯಲ್ಲಿ ಶೇಕ ಡ 85.04ರಷ್ಟು ಮತದಾನ ಆಗಿರುವುದು ದಾಖಲೆಯಾಗಿದೆ. 2018ರ ಚುನಾವಣೆಗೆ (ಶೇ.84.55) ಹೋಲಿಸಿದರೆ ಈ ಬಾರಿ ಶೇ 0.49ರಷ್ಟು ಮತದಾನ ಅಧಿಕವಾಗಿದೆ.
ಈವರೆಗಿನ ಚುನಾವಣೆಗಳಲ್ಲಿ ಅತಿ ಕಡಿಮೆ ಎಂದರೆ ರಾಮನಗರ ಕ್ಷೇತ್ರದಲ್ಲಿ 1967ರಲ್ಲಿ ಶೇ 55.57, ಚನ್ನಪಟ್ಟಣ ಕ್ಷೇತ್ರದಲ್ಲಿ 1972ರಲ್ಲಿ ಶೇ.64ರಷ್ಟು , ಕನಕಪುರ ಕ್ಷೇತ್ರದಲ್ಲಿ ಶೇ.64ರಷ್ಟುಹಾಗೂ ಮಾಗಡಿ ಕ್ಷೇತ್ರದಲ್ಲಿ 1962ರಲ್ಲಿ ಶೇ.61.56 ರಷ್ಟುಮತದಾನ ನಡೆದಿದೆ. 2013ರ ಚುನಾವಣೆಯಲ್ಲಿ ರಾಮನಗರದಲ್ಲಿ ಶೇ 80.57, ಚನ್ನಪಟ್ಟಣ - ಶೇ 84.77, ಕನಕಪುರ - ಶೇ 83.63 ಹಾಗೂ ಮಾಗಡಿ ಕ್ಷೇತ್ರದಲ್ಲಿ ಶೇ83.88 ರಷ್ಟು ಮತದಾನ ನಡೆದಿತ್ತು. 2018ರಲ್ಲಿ ರಾಮನಗರ ಕ್ಷೇತ್ರದಲ್ಲಿ ಶೇ 82.55, ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ 86.32, ಕನಕಪುರ ಕ್ಷೇತ್ರದಲ್ಲಿ ಶೇ 83.40 ಹಾಗೂ ಮಾಗಡಿ ಕ್ಷೇತ್ರದಲ್ಲಿ 85.83ರಷ್ಟು ಮತದಾನ ಆಗಿತ್ತು.
ಖರ್ಗೆ, ಸಿದ್ದು, ಡಿಕೆಶಿ ಮೂವರಲ್ಲಿ ಒಬ್ಬರು ಮುಖ್ಯಮಂತ್ರಿಯಾಗುತ್ತಾರೆ: ಸಿ.ಪುಟ್ಟರಂಗಶೆಟ್ಟಿ
2023ರಲ್ಲಿ ಚನ್ನಪಟ್ಟಣ ಹೊರತು ಪಡಿಸಿ ಕ್ಷೇತ್ರವಾರು ಚಲಾವಣೆಯಾಗಿರುವ ಮತದಾನದ ಶೇಕಡವಾರು ಪ್ರಮಾಣದಲ್ಲಿಯೂ ಹೆಚ್ಚಳ ಕಂಡು ಬಂದಿದೆ. ರಾಮನಗರ ಕ್ಷೇತ್ರದಲ್ಲಿ ಶೇ 84.09, ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ 85.27, ಕನಕಪುರ ಕ್ಷೇತ್ರದಲ್ಲಿ ಶೇ 84.52 ಹಾಗೂ ಮಾಗಡಿ ಕ್ಷೇತ್ರದಲ್ಲಿ ಶೇ 86.18ರಷ್ಟುಮತದಾನ ನಡೆದಿದೆ.
ಯಶಸ್ಸು ತಂದ ಜಾಗೃತಿ ಕಾರ್ಯಕ್ರಮ: ಚುನಾವಣಾ ಆಯೋಗವು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಮತದಾರನನ್ನು ಮತಗಟ್ಟೆಗೆ ಸೆಳೆದು ಮತದಾನ ಪ್ರಮಾಣ ಹೆಚ್ಚಿಸಲು ಅರಿವು ಮೂಡಿಸುವಂತಹ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಇದರ ಪರಿಣಾಮ 2023ರ ಜನವರಿ 1ರವರೆಗೆ 8,84,044 ಇದ್ದ ಮತದಾರರ ಸಂಖ್ಯೆ ಪರಿಷ್ಕೃತ ಪಟ್ಟಿಯಲ್ಲಿ (ಏಪ್ರಿಲ್ 20ಕ್ಕೆ ) 20,658 ಮಂದಿ ಸೇರ್ಪಡೆಯಾಗಿ 9,04,702ಕ್ಕೆ ಹೆಚ್ಚಳಗೊಂಡಿತು. ಜಿಲ್ಲಾ ಸ್ವೀಪ್ ಸಮಿತಿಯು ವಿಶೇಷ ಚೇತನರ ರ್ಯಾಲಿ, ರಂಗೋಲಿ ಬಿಡಿಸುವ ಕಾರ್ಯಕ್ರಮ, ವಿದ್ಯಾರ್ಥಿಗಳ ಜಾಥಾ ಹಾಗೂ ಮಾನವ ಸರಪಳಿ ಕಾರ್ಯಕ್ರಮ, ವಾಕಥಾನ್, ನಮ್ಮ ನಡೆ ಮತಗಟ್ಟೆಯ ಕಡೆ ಘೋಷಣೆ ಅಡಿಯಲ್ಲಿ ಬೈಕಥಾನ್ , ಪಂಜಿನ ಮೆರವಣಿಗೆ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮತದಾನದ ಅರಿವು ಮೂಡಿಸಲಾಯಿತು.
ಜಿಲ್ಲೆಯಲ್ಲಿ ಕಡಿಮೆ ಮತದಾನ ಆಗುತ್ತಿರುವ ಮತಗಟ್ಟೆಗಳನ್ನು ಗುರುತಿಸಿ ಕಾರಣ ಪತ್ತೆ ಮಾಡಲಾಯಿತು. ಆ ಭಾಗದಲ್ಲಿ ಶಾಲಾ - ಕಾಲೇಜು ವಿದ್ಯಾರ್ಥಿಗಳ ಮೂಲಕ ಮತದಾನದ ಕುರಿತು ಅರಿವು ಮೂಡಿಸಲಾಯಿತು. ಅಲ್ಲದೆ, ಬಿಡದಿ ಮತ್ತು ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಗಳ ಕಾರ್ಮಿಕರಲ್ಲಿಯೂ ಮತದಾನದ ಜಾಗೃತಿ ಮೂಡಿಸಿದೇವು. ಈ ಎಲ್ಲ ಕಾರಣಗಳಿಂದ ಮತದಾನ ಪ್ರಮಾಣ ಹೆಚ್ಚಳವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶೇಕಡ 90ರಷ್ಟುಮತದಾನದ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ ’ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದರು.
ಮತದಾರರ ಗಮನ ಸೆಳೆದ ಮಾದರಿ ಮತಗಟ್ಟೆಗಳು: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 05 ಪಿಂಕ್ ಮತಗಟ್ಟೆಗಳು, 01 ಪಿಡಬ್ಲ್ಯೂಡಿ ಮತಗಟ್ಟೆ, 01 ಥೀಮ್ ಆಧಾರಿತ ಮತಗಟ್ಟೆಗಳು ಮತದಾರರನ್ನು ಆಕರ್ಷಿಸಿದವು. ವಿಶೇಷ ಚೇತನ ಮತ್ತು ಹಿರಿಯ ನಾಗರೀಕರಿಗೆ ಮತಗಟ್ಟೆಗೆ ಬರಲು ಅನುಕೂಲವಾಗುವಂತೆ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಇದರ ಮೇಲುಸ್ತುವಾರಿಯನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ವಹಿಸಿದ್ದರು. ಮತಗಟ್ಟೆಗಳಲ್ಲಿ ವಿಶೇಷಚೇತನರು ಸುಗಮವಾಗಿ ಮತ ಚಲಾಯಿಸಲು ವ್ಹೀಲ್ ಚೇರ್ ಹಾಗೂ ರ್ಯಾಂಪ್ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಚೇತನ ಮತದಾರರು ಮತ್ತು ವೃದ್ಧ ಮತದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ವಯಂ ಸೇವಕರು ಮತಕೇಂದ್ರದ ಬಳಿ ಸಹಾಯ ಮಾಡಿದರು. ಎಲ್ಲಾ ಮತಕೇಂದ್ರಗಳಲ್ಲಿ ಬೂದಗಾಜುಗಳನ್ನು ಒದಗಿಸಲಾಗಿತ್ತು. ಅಂಧ ಮತದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬ್ರೈಲ್ ಲಿಪಿಯಲ್ಲಿರುವ ಬ್ಯಾಲೆಚ್ ಪೇಪರ್ ಗಳನ್ನು ಪ್ರತಿ ಮತಗಟ್ಟೆಗಳಿಗೆ ಒದಗಿಸಲಾಗಿತ್ತು. 16ನೇ ವಿಧಾನಸಭಾ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆದಿತ್ತು. ರಾಜ್ಯದ ಎಲ್ಲೆಡೆ ಸ್ಥಾಪನೆಯಾದ 58,545 ಮತಗಟ್ಟೆಗಳಲ್ಲಿ 2615 ಅಭ್ಯರ್ಥಿಗಳ ಭವಿಷ್ಯವನ್ನು 3.8 ಕೋಟಿ ಮತದಾರರು ಬರೆದಿದ್ದು, ಒಟ್ಟಾರೆ ದಾಖಲೆಯುತ ಶೇ.73.19ರಷ್ಟು ಮತದಾನವಾಗಿತ್ತು. 224 ಅಭ್ಯರ್ಥಿಗಳು ರಾಜ್ಯ ವಿಧಾನಸಭೆಗೆ ಆಯ್ಕೆಯಾಗಲಿದ್ದು, ಸರಕಾರ ರಚಿಸಲು ಪಕ್ಷವೊಂದಕ್ಕೆ 113 ಬಲಾಬಲ ಪ್ರದರ್ಶಿಸಬೇಕು.
ಜೆಡಿಎಸ್ ಕುಟುಂಬವೇ ಬಂದರೂ ಗೆಲುವು ನನ್ನದೇ: ಪ್ರೀತಂ ಗೌಡ
ಮತದಾರರದ್ದು ಕೇವಲ ಒಂದು ಮತ ಮಾತ್ರವಲ್ಲ, ಅದು ಪ್ರಜಾಪ್ರಭುತ್ವದ ಮೌಲ್ಯ. ದೃಢವಾದ ಮತದಿಂದ ದೃಢವಾದ ಸರ್ಕಾರ ನಿರ್ಮಾಣ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಮತದಾರರು ತಪ್ಪದೇ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕಿದೆ. ಈ ಕಾರಣಕ್ಕಾಗಿ ಮತದಾರರಲ್ಲಿ ಮತದಾನದ ಕುರಿತು ಅರಿವು ಮೂಡಿಸಲು ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಮತದಾರರು ಉತ್ಸಾಹದಿಂದ ಮತದಾನ ಮಾಡಿರುವುದು ತುಂಬಾ ಖುಷಿ ತಂದಿದೆ.
-ದಿಗ್ವಿಜಯ್ ಬೋಡ್ಕೆ, ಅಧ್ಯಕ್ಷರು, ಸ್ವೀಪ್ ಸಮಿತಿ, ರಾಮಗನರ.