ಪ್ರಧಾನಿ ಮೋದಿ ಹೆಸರಿಂದಲೇ ವಿರೋಧಿಗಳಲ್ಲಿ ನಡುಕ: ಸಂಸದ ಮುನಿಸ್ವಾಮಿ

Published : Apr 27, 2023, 01:00 AM IST
ಪ್ರಧಾನಿ ಮೋದಿ ಹೆಸರಿಂದಲೇ ವಿರೋಧಿಗಳಲ್ಲಿ ನಡುಕ: ಸಂಸದ ಮುನಿಸ್ವಾಮಿ

ಸಾರಾಂಶ

ಸರ್ವವ್ಯಾಪ್ತಿ, ಸರ್ವಸ್ಪರ್ಶಿಯಾಗಿ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿರುವ ವಿಶ್ವವೇ ಮೆಚ್ಚುವ ನಾಯಕ ಪ್ರಧಾನಿ ಮೋದಿ ಹೆಸರೇ ವಿರೋಧಿಗಳಲ್ಲಿ ನಡುಕ ಹುಟ್ಟಿಸುತ್ತದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

ಕೋಲಾರ (ಏ.27): ಸರ್ವವ್ಯಾಪ್ತಿ, ಸರ್ವಸ್ಪರ್ಶಿಯಾಗಿ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿರುವ ವಿಶ್ವವೇ ಮೆಚ್ಚುವ ನಾಯಕ ಪ್ರಧಾನಿ ಮೋದಿ ಹೆಸರೇ ವಿರೋಧಿಗಳಲ್ಲಿ ನಡುಕ ಹುಟ್ಟಿಸುತ್ತದೆ. ಕೋಲಾರಕ್ಕೆ ಅವರು ಬರುತ್ತಿರುವುದರಿಂದ ಇಲ್ಲಿನ ಪಕ್ಷದ ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಗಲಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸುನಾಮಿ ಅಪ್ಪಳಿಸಿ, ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು. ಬುಧವಾರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೆಂದಟ್ಟಿಸಮೀಪ ಏ.30ರ ಪ್ರಧಾನಿಯವರ ರಾರ‍ಯಲಿಯ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ಮಾತನಾಡಿ, ಪ್ರಧಾನಿಗಳ ಪ್ರಚಾರದಿಂದ ಹಳೆ ಮೈಸೂರು ಜಿಲ್ಲೆಗಳಲ್ಲಿ ಬಿಜೆಪಿ ಮತ್ತಷ್ಟು ಹೆಚ್ಚಿನ ಸ್ಥಾನ ಗಳಿಸಲು ಸಹಕಾರಿಯಾಗಲಿದೆ. 

ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಹಾಗೂ ಮೋದಿ ನಾಮಬಲದಿಂದ ನಾನು ಸಂಸದನಾದೆ ಅದೇ ರೀತಿ ಈ ಬಾರಿಯೂ ಬಿಜೆಪಿ ಗೆಲ್ಲಲಿದೆ ಎಂದರು. ಏ.30ರಂದು ಬೆಳಗ್ಗೆ 9.30 ಗಂಟೆಗೆ ಮೋದಿ ಆಗಮಿಸಲಿದ್ದು, ಇದಕ್ಕಾಗಿ ಎಲ್ಲಾ ಸಿದ್ದತೆ ನಡೆಸಲಾಗಿದೆ. ರಾಜ್ಯದ ದೇವಮೂಲೆಯಾಗಿರುವ ಇಲ್ಲಿ ಸಮಾವೇಶ ನಡೆಯುತ್ತಿದ್ದು, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ಸುಮಾರು 2.5 ಲಕ್ಷ ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು. ಕಳೆದ ಒಂದು ವಾರದಿಂದ ಸುಮಾರು 150 ಎಕರೆ ಪ್ರದೇಶದಲ್ಲಿ ಸಿದ್ಧತೆಗಳನ್ನು ನಡೆಸಿದ್ದು, ಮೂರು ಹೆಲಿಪ್ಯಾಡ್‌ ಸಿದ್ದವಾಗುತ್ತಿದೆ. ಮಳೆ, ಬಿಸಿಲಿನಿಂದ ರಕ್ಷಣೆಗೆ ಸುಸಜ್ಜಿತ ಪೆಂಡಾಲ್‌ ಹಾಕಲಾಗುತ್ತಿದ್ದು, 10ಕ್ಕೂ ಹೆಚ್ಚು ಜೆಸಿಬಿಗಳು, ಐದು ಕ್ರೈನ್‌ಗಳು ಸಿದ್ದತಾ ಕಾರ್ಯದಲ್ಲಿ ಬಳಕೆಯಾಗುತ್ತಿವೆ ಎಂದರು.

ಸಾ.ರಾ. ಆಯ್ಕೆಮಾಡಿ, ಎಚ್‌ಡಿಕೆಗೆ ಬಹುಮತ ನೀಡಿ: ಎಚ್‌.ಡಿ.ದೇವೇಗೌಡ

ರಾಹುಲ್‌ ವಿರುದ್ಧ ವಾಗ್ದಾಳಿ: ಬೆಮೆಲ್‌ ಖಾಸಗೀಕರಣವಿಲ್ಲ ಎಂದು ಈಗಾಗಲೇ ಸಚಿವ ರಾಜನಾಥಸಿಂಗ್‌ ಸ್ಪಷ್ಟಪಡಿಸಿರುವುದರಿಂದ ಅದರ ಕುರಿತು ಮತ್ತೆ ಪ್ರಸ್ತಾಪ ಅಗತ್ಯವಿಲ್ಲ. ರಾಹುಲ್‌ ಮೋದಿಗೆ ಸರಿಸಾಟಿಯಾಗಲು ಸಾಧ್ಯವೇ? ರಾಹುಲ್‌ ಇರುವೆಯಾದರೆ ಮೋದಿ ಆನೆಯಿದ್ದಂತೆ ಅವರ ಹೆಸರೇ ಶತ್ರುಗಳ ಎದೆಯಲ್ಲಿ ನಡುಕ ಸೃಷ್ಟಿಸುತ್ತದೆ, ವಿಶ್ವಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಆದರೆ ರಾಹುಲ್‌ ವಿದೇಶಗಳಿಗೆ ಹೋಗಿ ದೇಶದ ಮಾನ ಹರಾಜು ಹಾಕುವ ಮೂಲಕ ಕಾಂಗ್ರೆಸ್‌ ಸಂಸ್ಕೃತಿ ಬಿಂಬಿಸಿದ್ದಾರೆ ಎಂದರು. ಕ್ಲಾಕ್‌ ಟವರ್‌ ಮೇಲೆ ನಮ್ಮ ರಾಷ್ಟ್ರಧ್ವಜ ಹಾರಿಸಿದ್ದನ್ನು ಹೇಳಿಕೊಂಡು ಕಾಂಗ್ರೆಸ್‌ ಮತ ಕೇಳಲು ಹೊರಟಿರುವುದು ನಾಚಿಕೇಗೇಡು, ರಾಷ್ಟ್ರಧ್ವಜ ಹಾರಿಸಿದ್ದು ತಪ್ಪೇ ಎಂದು ಪ್ರಶ್ನಿಸಿದರು.

135 ಕೋಟಿ ಜನರಿಗೆ ಉಚಿತ ಸ್ವದೇಶಿ ತಯಾರಿತ ವ್ಯಾಕ್ಸಿನ್‌ ಒದಗಿಸಿ, ಇಡೀ ವಿಶ್ವಕ್ಕೆ ಮಾರಣಾಂತಿಕವಾಗಿದ್ದ ಕೋವಿಡ್‌ನಿಂದ ಜೀವ ಉಳಿಸಿದ ಮೋದಿ ಕಾಣಲು ಜನತೆ ಸ್ವಯಂಪ್ರೇರಿತರಾಗಿ ಬರುತ್ತಾರೆ. ಕಿಸಾನ್‌ ಸಮ್ಮಾನ್‌ ಮೂಲಕ ರೈತರ ಖಾತೆಗಳಿಗೆ 10 ಸಾವಿರ ಹಾಕುತ್ತಿರುವುದು, ಆಯುಷ್ಮಾನ್‌ ಭಾರತ್‌, ಸ್ತ್ರೀಶಕ್ತಿ ಸಂಘಗಳಿಗೆ ಸೌಲಭ್ಯ, ಜಲಜೀವನ್‌ ಮಿಷನ್‌ನಡಿ ಪ್ರತಿ ಮನೆಗೂ ನಳದ ಮೂಲಕ ನೀರು, ಷಟ್ಪಥ ರಸ್ತೆಗೆ ಅನುದಾನ, ಅಮೃತ ಸರೋವರ ಯೋಜನೆ, ಶ್ರೀನಿವಾಸರಪುರ ಬೈಪಾಸ್‌ ರಸ್ತೆಗೆ 250 ಕೋಟಿ, ಚಿಂತಾಮಣಿ ಬೈಪಾಸ್‌ ರಸ್ತೆಗೆ 256 ಕೋಟಿ ಹೀಗೆ ವಿವಿಧ ಯೋಜನೆಗಳನ್ನು ಜಿಲ್ಲೆಗೆ ನೀಡಿರುವ ಮೋದಿ ಕಾಣಲು ಜನರಲ್ಲಿ ಕಾತರವಿದೆ ಎಂದರು.

ಹನುಮ ಮಂದಿರಕ್ಕಾಗಿ ಬಿಜೆಪಿಗೆ ಮತ ನೀಡಿ: ಸಿ.ಟಿ.ರವಿ

ಭೋವಿ, ಗೊಲ್ಲ, ಒಕ್ಕಲಿಗ, ಬಲಿಜ, ಬ್ರಾಹ್ಮಣ, ವಿಶ್ವಕರ್ಮ ಹೀಗೆ ಎಲ್ಲಾ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ನೀಡಿ ಬಿಜೆಪಿ ಸರ್ಕಾರ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿದೆ. ಅಲ್ಪಸಂಖ್ಯಾತರು ಬೆಂಬಲಿಸಲಿದ್ದಾರೆ ಎಂದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ, ದಿಶಾಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ನಗರಸಭಾ ಸದಸ್ಯ ಪ್ರವೀಣ್‌ ಗೌಡ, ಬಿಜೆಪಿ ಮುಖಂಡರಾದ ಗುರುನಾಥ ರೆಡ್ಡಿ, ಬೆಗ್ಲಿ ಸಿರಾಜ್‌, ಮಮತಾ, ಗಾಂಧಿನಗರ ವೆಂಕಟೇಶ್‌, ನಗರ ಪ್ರ.ಕಾರ್ಯದರ್ಶಿ ಮಂಜುನಾಥ್‌, ಯುವಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಅಮರ್‌, ಅನಿಲ್‌ ಬಾಬು, ಸತೀಶ್‌ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Karnataka News Live: ಅಭಿವೃದ್ಧಿಗಾಗಿ ಬೆಳಗಾವಿ ಜಿಲ್ಲೆ ವಿಭಜನೆ ಅತ್ಯಗತ್ಯ - ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!