
ಕೋಲಾರ (ಏ.17): ಸತ್ಯವನ್ನು ಉಳಿಸಲು ಮತ್ತು ಸತ್ಯವನ್ನು ಜನಕ್ಕೆ ತಿಳಿಸುವ ಸಲುವಾಗಿ ಜೈ ಭಾರತ್ ಯಾತ್ರೆಯನ್ನು ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ. 7 ಲಕ್ಷ ಮತಗಳ ಅಂತರದಿಂದ ಗೆದ್ದಂತಹ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರಕ್ಕೆ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ನಗರದ ಹೊರವಲಯದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ನ ಜೈ ಭಾರತ್ ಯಾತ್ರೆ ಮತ್ತು ಕರ್ನಾಟಕ ವಿಧಾನಸಭೆಯ 2023ರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ದ ಸಿಡಿದೆದ್ದಿಕ್ಕೆ ಅವರಿಗೆ ಶಿಕ್ಷೆ ಮತ್ತು ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ, ಅದರ ವಿರುದ್ದ ದೇಶದ ಜನಕ್ಕೆ ತಿಳಿಸುವ ಸಲುವಾಗಿ ಎಲ್ಲಿ ಮಾತನಾಡಿ ಶಿಕ್ಷೆ ಅನುಭವಿಸಿದ್ದಾರೋ ಅದೇ ಜಾಗದಿಂದ ಮಾತನಾಡಲು ಬಂದಿದ್ದಾರೆ ಎಂದರು.
ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ
ಮೇ 10 ಪ್ರಜಾತಂತ್ರ ಉಳಿಸುವ ದಿನ: ನಾವೆಲ್ಲ ರಾಹುಲ್ ಗಾಂಧಿಯವರ ಜೈ ಭಾರತ್ ಯಾತ್ರೆಗೆ ಶಕ್ತಿ ಕೊಡಬೇಕಾಗಿದೆ, ಆ ಶಕ್ತಿ ಮೇ 10ರಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಮೂಲಕ ಶಕ್ತಿಯನ್ನು ತುಂಬಬೇಕಾಗಿದೆ. ಅಂದಿನ ಚುನಾವಣೆ ರಾಜ್ಯಕ್ಕೆ ಆತ್ಮ ಶಕ್ತಿ ಕೊಡುವ ದಿನ ಹಾಗೂ ಭ್ರಷ್ಟಸರ್ಕಾರವನ್ನು ತೊಲಗಿಸಿ ಪ್ರಜಾ ಪ್ರಭುತ್ವವನ್ನು ಉಳಿಸುವ ದಿನವಗಿದೆ. ಆದ್ದರಿಂದ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ಮಾಡಬೆಕು ಎಂದರು. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ಕೈ ಸಹಾಯ ಮಾಡುವ ಸರ್ಕಾರ ಆಗಬೇಕು.
ಈ ನಿಟ್ಟಿನಲ್ಲಿ ನಾವು ಈಗಾಗಲೆ ನಾಲ್ಕು ಗ್ಯಾರಂಟಿಗಳಾದ ಗೃಹಲಕ್ಷ್ಮೀ, 200 ಯೂನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ, ನಿರುದ್ಯೋಗ ಭತ್ಯೆ, ಇವುಗಳನ್ನು ಕಾಂಗ್ರೆಸ್ ಸರ್ಕಾರ ರಚನೆಯಾದ ಒಂದು ತಿಂಗಳಲ್ಲಿ ಜಾರಿಗೆ ತರುವಂತಹ ಕೆಲಸ ಮಾಡಲಾಗುವುದು ಇದು ಶಪಥ ಈ ನಾಲ್ಕು ಗಾರೆಂಟಿಗಳಿಗೆ ನಾನು ಮತ್ತು ಸಿದ್ದರಾಮಯ್ಯ ಸಹಿ ಮಾಡಿದ್ದೇವೆ ಎಂದರು. ಬೇರೆ ಪಕ್ಷದವರು ನಮ್ಮ ಕಡೆ ನೋಡುವಂತಹ ದಿನಗಳು ಬಂದಿದೆ, ಸುಮಾರು 47 ಜನ ಪಕ್ಷಾಂತರಕ್ಕೆ ಕಾಯುತ್ತಿದ್ದಾರೆ, ಸಂಜೆ ಯಾರಾರಯರು ಬರುತ್ತಾರೆಂದು ನೋಡುತ್ತಾ ಇರಿ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಬಗ್ಗೆ ಸುಳಿವು ನೀಡಿದರು.
ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ ಸರ್ಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಮೇ.10ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಕಿತ್ತೊಗೆಯಬೇಕು. ಕರ್ನಾಟಕದ ಬ್ಯಾಂಕ್‌ಗಳನ್ನು ಹಾಳು ಮಾಡಿ ನುಂಗಿದ್ದೂ ಆಯಿತು, ಈಗ ಲಕ್ಷಾಂತರ ರೈತರ ಉತ್ಪಾದನೆ ಮಾಡಿ ಬದುಕು ಕಟ್ಟಿಕೊಂಡಿರುವ ಹೈನುಗಾರಿಕೆಯನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಅಮೂಲ್ ಉತ್ಪನ್ನ ತಿರಸ್ಕರಿಸಬೇಕು: ಅಮಿತ್ ಶಾ ರವರು ಸಹಕಾರ ಮಂತ್ರಿಯಾದ ನಂತರ ಕೆಎಂಎಫ್ ಅನ್ನು ಅಮೂಲ್‌ಗೆ ವಿಲೀನ ಮಾಡಲು ಪ್ರಯತ್ನಿಸಿದರು. ಈಗ ನಂದಿನ ಉತ್ಪಾದನೆಗಳನ್ನು ಮೂಲೆ ಗುಂಪು ಮಾಡಿ ಅಮೂಲ್ ಉತ್ಪಾದನೆಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ, ಇದರಿಂದ ಪ್ರತಿ ದಿನದ ಹಾಲು ಉತ್ಪಾದನೆ 99 ಲಕ್ಷ ಲೀಟರ್‌ನಿಂದ 81 ಲಕ್ಷಕ್ಕೆ ಇಳಿದಿದೆ, ಅಮೂಲ್ ಪದಾರ್ಥಗಳನ್ನು ತಿರಸ್ಕರಿಸುವ ಮೂಲಕ ಕೆಂದ್ರದ ಹುನ್ನಾರಕ್ಕೆ ಬ್ರೇಕ್ ಹಾಕಬೇಕಾಗಿದೆ ಎಂದರು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಶಾಸಕ ವೆಂಕಟರಾಮಯ್ಯ, ಮಾಜಿ ಸಚಿವ ಎಂ.ಆರ್.ಸೀತಾರಾಂ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಮಾತನಾಡಿದರು.
ಎದುರಾಳಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ: ಬಾಲಚಂದ್ರ ಜಾರಕಿಹೊಳಿ
ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್, ರಾಜ್ಯ ಮುಖಡರಾದ ಅಭಿಶೇಕ್ ದತ್, ಬಿ.ವಿ.ಶ್ರೀನಿವಾಸ್, ಯು.ಬಿ.ವೆಂಕಟೇಶ್, ಜಿಲ್ಲೆಯ ಶಾಸಕರಾದ ರಮೇಶ್ ಕುಮಾರ್, ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ರೂಪಕಲ ಶಶಿಧರ್, ಎಸ್.ಎನ್.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಶರತ್ ಬಚ್ಚೇಗೌಡ, ಬಾಗೇಪಲ್ಲಿ ಸುಬ್ಬಾರೆಡ್ಡಿ, ಗೌರಿಬಿದನೂರು ಶಿವಶಂಕರ್ ರೆಡ್ಡಿ, ಎಂ.ಎಲ್.ಸಿ.ಅ ನಿಲ್‌ಕುಮಾರ್ ಸೆರಿಂದತೆ ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.