2 ವರ್ಷಗಳಿಂದಲೇ ಜಗದೀಶ್‌ ಶೆಟ್ಟರ್‌ ಕಡೆಗಣನೆ: ಬೆಳಗಾವಿ ಲೋಕಸಭೆ ಉಪಚುನಾವಣೆ ವೇಳೆಯೇ ಇದಕ್ಕೆ ಶ್ರೀಕಾರ

By Kannadaprabha NewsFirst Published Apr 17, 2023, 3:40 AM IST
Highlights

ಕೇಂದ್ರ ಸಚಿವರಾಗಿದ್ದ ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಎದುರಾದ ಉಪಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ತೇಲಿಬಿಡಲಾಯಿತು. ಈ ಸುದ್ದಿ ಹೊರಬಿದ್ದಿದ್ದು ಬೆಳಗಾವಿಯಿಂದ ಅಲ್ಲ. 

ವಿಜಯ್‌ ಮಲಗಿಹಾಳ

ಬೆಂಗಳೂರು (ಏ.17): ಬಿಜೆಪಿಯ ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರ ಕಡೆಗಣನೆ ಈಗ ಚುನಾವಣೆ ಬಂದಾಗ ಏಕಾಏಕಿ ನಡೆದದ್ದಲ್ಲ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹೊತ್ತಿನಲ್ಲಿ ಆರಂಭವಾದ ಕಡೆಗಣನೆ ಅದು ವ್ಯವಸ್ಥಿತವಾಗಿ ಮುಂದುವರೆದು ಕೊನೆಗೆ ಅವರು ಕನಸಿನಲ್ಲೂ ಎಣಿಸಿರದ ಪಕ್ಷ ತೊರೆಯುವಂಥ ಸ್ಥಿತಿಗೆ ಬಂದು ನಿಂತಿತು.

Latest Videos

ಕೇಂದ್ರ ಸಚಿವರಾಗಿದ್ದ ಬೆಳಗಾವಿ ಸಂಸದ ಸುರೇಶ್‌ ಅಂಗಡಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಎದುರಾದ ಉಪಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ತೇಲಿಬಿಡಲಾಯಿತು. ಈ ಸುದ್ದಿ ಹೊರಬಿದ್ದಿದ್ದು ಬೆಳಗಾವಿಯಿಂದ ಅಲ್ಲ. ಶೆಟ್ಟರ್‌ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡದಿಂದಲೇ. ಅದು ಮುಂದೆ ರಾಜ್ಯ ಮಟ್ಟದಲ್ಲೂ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಅದೇ ವೇಳೆ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ತೆರೆಮರೆಯಲ್ಲಿ ಜೋರಾಗಿಯೇ ನಡೆದಿತ್ತು ಎನ್ನುವುದು ಗಮನಾರ್ಹ.

ಲಕ್ಷ್ಮಣ ಸವದಿ ದುಡುಕಿನ ನಿರ್ಣಯ ಕೈಗೊಂಡಿದ್ದಾರೆ: ಶಾಸಕ ಬಸನಗೌಡ ಯತ್ನಾಳ

ಆ ಹಂತದಲ್ಲಿ ಶೆಟ್ಟರ್‌ ಅವರು ಸುರೇಶ್‌ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್‌ ಕೊಟ್ಟರೆ ಮಾತ್ರ ಅನುಕಂಪದ ಆಧಾರದ ಮೇಲೆ ಪಕ್ಷ ಗೆಲ್ಲಲು ಸಾಧ್ಯ ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡುವಲ್ಲಿ ನಿರತರಾಗಿದ್ದರು. ಆದರೆ, ಪಕ್ಷದಲ್ಲಿನ ಅವರ ವಿರೋಧಿಗಳು ಶೆಟ್ಟರ್‌ ಅವರ ಹೆಸರನ್ನು ತೇಲಿಬಿಟ್ಟು ಅವರನ್ನು ರಾಜ್ಯ ರಾಜಕಾರಣದಿಂದ ದೂರ ಇರಿಸುವ ಪ್ರಯತ್ನ ನಡೆಸಿದರು. ಇದು ಶೆಟ್ಟರ್‌ ಅವರಿಗೆ ತೀವ್ರ ಬೇಸರ ತರಿಸಿತ್ತು. ತಾವು ಯಾವುದೇ ಕಾರಣಕ್ಕೂ ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ ಎಂಬ ಸ್ಪಷ್ಟನೆಯನ್ನೂ ನೀಡಿದ್ದರು.

ಅಂತಿಮವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮಂಗಲಾ ಅಂಗಡಿ ಅವರನ್ನೇ ಅಭ್ಯರ್ಥಿಯನ್ನಾಗಿಸಲಾಯಿತು. ಶೆಟ್ಟರ್‌ ನುಡಿದ ಭವಿಷ್ಯ ನಿಜವಾಯಿತು. ಬಿಜೆಪಿ ಅಭ್ಯರ್ಥಿ ಮಂಗಲಾ ಅವರು ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆ ವೇಳೆ ಬೇರೆ ಯಾರಾದರೂ ಅಭ್ಯರ್ಥಿಯಾಗಿದ್ದರೆ ಬಿಜೆಪಿಗೆ ಸೋಲುವ ಸಾಧ್ಯತೆಯೇ ಹೆಚ್ಚಿತ್ತು.

ಕಡೆಗಣನೆ ತೀವ್ರ: ಬೆಳಗಾವಿ ಲೋಕಸಭಾ ಉಪಚುನಾವಣೆಯ ತೂಗುಗತ್ತಿಯಿಂದೇನೋ ಶೆಟ್ಟರ್‌ ಪಾರಾದರು. ಆದರೆ, ಅವರ ಕಡೆಗಣನೆ ಅಲ್ಲಿಂದಾಚೆಗೆ ತೀವ್ರಗೊಂಡಿತು. ಮುಂದೆ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಅದಕ್ಕೂ ಮೊದಲೇ ತಮಗಿಂತ ಕಿರಿಯರು ಮುಖ್ಯಮಂತ್ರಿಯಾದಲ್ಲಿ ತಾವು ಆ ಸಂಪುಟದಲ್ಲಿ ಮುಂದುವರೆಯುವುದಿಲ್ಲ ಎಂದು ಘೋಷಿಸಿದ್ದರು. ಅದರಂತೆ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ರಚನೆಯಾದ ಸಂಪುಟದಲ್ಲಿ ಶೆಟ್ಟರ್‌ ಮುಂದುವರೆಯಲಿಲ್ಲ.

ನಂತರದ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತಿತರ ರಾಷ್ಟ್ರೀಯ ನಾಯಕರ ವಿವಿಧ ಸಭೆ ಸಮಾರಂಭಗಳಲ್ಲಿ ಶೆಟ್ಟರ್‌ ಅವರನ್ನು ದೂರವಿಡುವ ವ್ಯವಸ್ಥಿತ ಪ್ರಯತ್ನ ಹಂತ ಹಂತವಾಗಿ ಹೆಚ್ಚಾಯಿತು. ಆಹ್ವಾನ ಪತ್ರಿಕೆಯಿಂದ ಹೆಸರನ್ನೇ ಕೈಬಿಡಲಾಯಿತು. ಕಿತ್ತೂರು ಕರ್ನಾಟಕ ಅಥವಾ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಪಕ್ಷ ಹಾಗೂ ಸರ್ಕಾರದ ಹಲವು ಪ್ರಮುಖ ತೀರ್ಮಾನಗಳ ವೇಳೆಯೂ ಶೆಟ್ಟರ್‌ ಅವರ ಅಭಿಪ್ರಾಯವನ್ನೇ ಕೇಳಲಿಲ್ಲ. ಒಂದು ರೀತಿಯಲ್ಲಿ ಶೆಟ್ಟರ್‌ ಅವರನ್ನು ಇದ್ದೂ ಇಲ್ಲದಂತೆ ನಡೆಸಿಕೊಳ್ಳಲಾಯಿತು ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಮುಂದೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಶೆಟ್ಟರ್‌ ಅವರಿಗೆ ಟಿಕೆಟ್‌ ಇಲ್ಲ ಎಂಬ ವದಂತಿಯೂ ಮೊದಲು ತೇಲಿಬಂದಿದ್ದು ಹುಬ್ಬಳ್ಳಿ-ಧಾರವಾಡದಿಂದಲೇ ಹೊರತು ಬೆಂಗಳೂರು ಅಥವಾ ದೆಹಲಿಯಿಂದ ಅಲ್ಲ. ‘ಅದು ಸುಳ್ಳು. ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಲಾಗುತ್ತದೆ’ ಎಂಬ ಹೇಳಿಕೆ ಹುಬ್ಬಳ್ಳಿ-ಧಾರವಾಡದ ಹಿರಿಯ ನಾಯಕರೂ ಸೇರಿದಂತೆ ರಾಜ್ಯದ ಯಾವುದೇ ನಾಯಕರಿಂದಲೂ ಬರಲಿಲ್ಲ. ಅಲ್ಲಿನ ಸ್ಥಳೀಯ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹದಲ್ಲೂ ಶೆಟ್ಟರ್‌ ಅವರ ಹೆಸರಿತ್ತು. ಎರಡು ದಿನಗಳ ಕಾಲ ನಡೆದ ರಾಜ್ಯ ಕೋರ್‌ ಕಮಿಟಿ ಸಭೆಯಲ್ಲೂ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಲಾಗುವುದಿಲ್ಲ ಎಂಬ ಅಂಶ ಪ್ರಸ್ತಾಪವಾಗಿಲ್ಲ. ಸ್ವತಃ ಶೆಟ್ಟರ್‌ ಅವರೂ ಕೋರ್‌ ಕಮಿಟಿ ಸದಸ್ಯರಾಗಿದ್ದರಿಂದ ಅದನ್ನು ಗೌಪ್ಯವಾಗಿ ಇಟ್ಟಿರಬಹುದು ಎನ್ನಲಾಗುತ್ತಿದೆ.

ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ: ಎಚ್‌.ವೈ.ಮೇಟಿ

ಅಂತಿಮವಾಗಿ ಅಭ್ಯರ್ಥಿಗಳ ಮೊದಲ ಟಿಕೆಟ್‌ ಪ್ರಕಟಗೊಳ್ಳುವ ಹಿಂದಿನ ದಿನ ವರಿಷ್ಠರಿಂದ ಜಗದೀಶ್‌ ಶೆಟ್ಟರ್‌ ಅವರಿಗೆ ದೂರವಾಣಿ ಕರೆ ಬಂದು ಕಡ್ಡಾಯ ನಿವೃತ್ತಿಯ ಸೂಚನೆ ನೀಡಲಾಯಿತು. ಮೊದಲ ಪಟ್ಟಿಯಲ್ಲಿ ಶೆಟ್ಟರ್‌ ಪ್ರತಿನಿಧಿಸುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದ ಟಿಕೆಟ್‌ ಘೋಷಿಸಲಿಲ್ಲ. ಎರಡನೇ ಪಟ್ಟಿಯಲ್ಲೂ ಘೋಷಿಸಲಿಲ್ಲ. ‘ಚುನಾವಣಾ ರಾಜಕಾರಣದಿಂದ ನಿವೃತ್ತಿಗೊಳಿಸುವ ಬಗ್ಗೆ 2-3 ತಿಂಗಳು ಮೊದಲೇ ಹೇಳಬಹುದಿತ್ತಲ್ಲ. ಹೇಳಿದ್ದರೆ ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಿದ್ದೆ. ಈ ರೀತಿ ಅಪಮಾನ ಮಾಡಿರುವುದು ಎಷ್ಟುಸರಿ?’ ಎಂಬ ಶೆಟ್ಟರ್‌ ಪ್ರಶ್ನೆಗೆ ಬಿಜೆಪಿ ನಾಯಕರ ಬಳಿ ಸ್ಪಷ್ಟಉತ್ತರವಿಲ್ಲದಂತಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!