ಪ್ರಧಾನಿ ಮೋದಿ ಬೆಂಗ್ಳೂರು ಮೆಗಾ ರೋಡ್‌ ಶೋಗೆ ಹೈಕೋರ್ಟ್‌ ಅಸ್ತು

By Kannadaprabha News  |  First Published May 6, 2023, 5:23 AM IST

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದಲ್ಲಿ ಮೇ 6 (ಸೋಮವಾರ) ಮತ್ತು ಮೇ 7ರಂದು (ಭಾನುವಾರ) ನಡೆಸಲಿರುವ ಸುಮಾರು 32.5 ಕಿ.ಮೀ. ಉದ್ದದ ರೋಡ್‌ ಶೋ ತಡೆಗೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. 


ಬೆಂಗಳೂರು (ಮೇ.06): ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರು ನಗರದಲ್ಲಿ ಮೇ 6 (ಸೋಮವಾರ) ಮತ್ತು ಮೇ 7ರಂದು (ಭಾನುವಾರ) ನಡೆಸಲಿರುವ ಸುಮಾರು 32.5 ಕಿ.ಮೀ. ಉದ್ದದ ರೋಡ್‌ ಶೋ ತಡೆಗೆ ನೀಡಲು ಹೈಕೋರ್ಟ್‌ ನಿರಾಕರಿಸಿದೆ. ಸಾರ್ವಜನಿಕರಿಗೆ ಭಾರಿ ಸಮಸ್ಯೆ ಉಂಟಾಗಲಿರುವ ಕಾರಣ ಮೋದಿ ಅವರ ರೋಡ್‌ ಶೋಗೆ ತಡೆ ನೀಡಬೇಕು ಎಂದು ಕೋರಿ ವಕೀಲ ಎನ್‌.ಪಿ. ಅಮೃತೇಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಮಾರು ಎರಡು ಗಂಟೆ ಕಾಲ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ, ರೋಡ್‌ ಶೋಗೆ ಹಸಿರು ನಿಶಾನೆ ನೀಡಿದೆ.

ರೋಡ್‌ ಶೋನಲ್ಲಿ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ, ನಗರ ಪೊಲೀಸ್‌ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿ ನೀಡಿದ ಭರವಸೆ ಪರಿಗಣಿಸಿದ ನ್ಯಾಯಪೀಠವು ಅರ್ಜಿದಾರರ ಮನವಿ ತಿರಸ್ಕರಿಸಿತು. ಅಲ್ಲದೆ, ರೋಡ್‌ ಶೋ ವೇಳೆ ಅಹಿತಕರ ಘಟನೆ ನಡೆದರೆ ಯಾವುದೇ ರಾಜಕೀಯ ಪಕ್ಷವಾದರೂ ಅದರ ಸಂಘಟಕರನ್ನು ಜವಾಬ್ದಾರರನ್ನಾಗಿ ಮಾಡಬೇಕು. ಘಟನೆಯಿಂದ ಉಂಟಾದ ಹಾನಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಘಟಕರಿಂದಲೇ ಬಾಂಡ್‌ ಪಡೆದುಕೊಳ್ಳಬೇಕು ಎಂದು ಸರ್ಕಾರ ಮತ್ತು ನಗರ ಪೊಲೀಸ್‌ ಆಯುಕ್ತರಿಗೆ ನ್ಯಾಯಪೀಠ ಸಲಹೆ ನೀಡಿದೆ.

Tap to resize

Latest Videos

ಜನರಿಗೆ ತೊಂದರೆ ಹಿನ್ನೆಲೆ: ಪ್ರಧಾನಿ ಮೋದಿ ರೋಡ್‌ ಶೋ 1 ದಿನ ಅಲ್ಲ, 2 ದಿನ

ರೋಡ್‌ ಶೋನಲ್ಲಿ ನಮ್ಮ ದೇಶದ ಪ್ರಧಾನಿ ಸೇರಿ ಹಲವು ವಿವಿಐಪಿಗಳು ಭಾಗವಹಿಸುತ್ತಿದ್ದಾರೆ. ಲಕ್ಷಾಂತರ ಜನ ಸಹ ಜಮಾಯಿಸುತ್ತಾರೆ. ಈ ಸಂದರ್ಭದಲ್ಲಿ ಯಾರೊಬ್ಬರಿಗೂ ಯಾವುದೇ ರೀತಿ ಹಾನಿಯಾಗದಂತೆ ಎಚ್ಚರ ವಹಿಸಬೇಕು. ನಮ್ಮ ಪ್ರಧಾನಿಯನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರು ಮೌಖಿಕವಾಗಿ ನುಡಿದರು. ಇದಕ್ಕೂ ಮುನ್ನ ಅರ್ಜಿದಾರ ವಕೀಲ ಎನ್‌.ಪಿ. ಅಮೃತೇಶ್‌, ಮೇ 6 ಮತ್ತು 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಗರದಲ್ಲಿ 32 ಕಿ.ಮೀ ರೋಡ್‌ ಶೋ ನಡೆಸಲಿದ್ದಾರೆ. 

ಮೇ ಏಳರಂದು ನೀಟ್‌ ಪರೀಕ್ಷೆ ಕೂಡ ಇದೆ. ಈ ರೋಡ್‌ಶೋ ದಿಂದಾಗಿ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳ, ಉದ್ಯೋಗಕ್ಕೆ ತೆರಳುವ ಸಾಮಾನ್ಯ ಜನರ ಸಂಚಾರಕ್ಕೆ ಭಾರಿ ಸಮಸ್ಯೆಯಾಗಲಿದೆ. 3-6 ಕಿ.ಮೀ. ರೋಡ್‌ ಶೋ ನಡೆಸಿದರೆ ಪರವಾಗಿಲ್ಲ. ಆದರೆ, 32 ಕಿ.ಮೀ ನಡೆಯಲಿದ್ದು, ಸುಮಾರು 10 ಲಕ್ಷ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ. ಈ ಹೇಳಿಕೆ ಗಮನಿಸಿದರೆ ರೋಡ್‌ ಶೋವನ್ನು ನಿಭಾಯಿಸುವುದು ಕಷ್ಟಹೀಗಾಗಿ ರೋಡ್‌ ಶೋಗೆ ತಡೆ ನೀಡಬೇಕು ಎಂದು ಕೋರಿದರು.

ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆರ್‌.ಸುಬ್ರಹ್ಮಣ್ಯ, ಹಲವು ವರ್ಷಗಳಿಂದ ಪ್ರಚಾರದ ಭಾಗವಾಗಿ ಚುನಾವಣೆ ವೇಳೆ ರಾಜಕೀಯ ಪಕ್ಷಗಳು ರಾರ‍ಯಲಿಗಳನ್ನು ನಡೆಸುತ್ತಾ ಬಂದಿವೆ. ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆಯಾದ ದಿನದಿಂದಲೂ ಈವರೆಗೂ ರಾಜ್ಯಾದ್ಯಂತ ಒಟ್ಟು 2,517 ರಾರ‍ಯಲಿಗಳು ನಡೆದಿವೆ. ಬೆಂಗಳೂರು ನಗರವೊಂದರಲ್ಲೇ 371 ರಾರ‍ಯಲಿಗಳು ನಡೆದಿವೆ. ಆದರೆ, ಇದುವರೆಗೆ ಯಾವೊಂದು ಅಹಿತಕರ ಘಟನೆ ನಡೆದಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ವಾದಾಂಶ ಪರಿಗಣಿಸಿದ ನ್ಯಾಯಪೀಠ, ರೋಡ್‌ ಶೋವನ್ನು ತಡೆ ಹಿಡಿಯಲು ನಿರಾಕರಿಸಿ ಅರ್ಜಿ ವಿಲೇವಾರಿ ಮಾಡಿತು.

ಭ್ರಷ್ಟವ್ಯೂಹ ಭೇದಿಸಿದ್ದಕ್ಕಾಗಿ ಕಾಂಗ್ರೆಸ್‌ಗೆ ನನ್ನ ಕಂಡ್ರೆ ಸಿಟ್ಟು: ಪ್ರಧಾನಿ ಮೋದಿ

ಸುರಕ್ಷಿತ ರೋಡ್‌ ಶೋಗೆ ಕ್ರಮ: ವಿಚಾರಣೆ ವೇಳೆ ಖುದ್ದು ಹಾಜರಿದ್ದ ಬೆಂಗಳೂರು ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ, ರೋಡ್‌ ಶೋ ವೇಳೆ ಉಂಟಾಗಬಹುದಾದ ಕಾಲ್ತುಳಿತವನ್ನು ತಪ್ಪಿಸಲು ಸಭಿಕರ ಸ್ಕ್ರೀನಿಂಗ್‌ ಹಾಗೂ ಬ್ಯಾರಿಕೇಡ್‌ ಹಾಕಲಾಗುತ್ತದೆ. ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗುತ್ತದೆ. ಈ ಕುರಿತು ಒಂದು ದಿನ ಮುನ್ನವೇ ಪತ್ರಿಕೆ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ರಸ್ತೆಯಲ್ಲಿ ಯಾವುದಾದರೂ ಆಂಬುಲೆನ್ಸ್‌ ಸಿಲುಕಿಕೊಂಡರೆ ಆ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿ ಸಂಚಾರಕ್ಕೆ ಹಾದಿ ಮುಕ್ತಗೊಳಿಸಲಾಗುತ್ತದೆ. ಸುರಕ್ಷಿತವಾಗಿ ರೋಡ್‌ ಶೋ ನಡೆಸಲು ಸಾಕಷ್ಟುಸಿಬ್ಬಂದಿ ನಿಯೋಜಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!