ಅಳೆದು ತೂಗಿ ಯೋಗ್ಯರಿಗೆ ನಿಮ್ಮ ಮತ ನೀಡಿ: ಸಿ.ಟಿ.ರವಿ

By Kannadaprabha News  |  First Published Apr 27, 2023, 9:50 PM IST

ಕೃಷಿ ಚಟುವಟಿಕೆಗೆ ರೈತರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ 10 ಸಾವಿರ ರು. ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡಲು ರೈತರು ಉತ್ಪಾದಿಸುವ ಹಾಲಿಗೆ ಪ್ರೋತ್ಸಾಹದ ಹಣ ನೀಡುತ್ತಿರುವುದು ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.


ನಾಗಮಂಗಲ (ಏ.27): ಕೃಷಿ ಚಟುವಟಿಕೆಗೆ ರೈತರ ಬ್ಯಾಂಕ್‌ ಖಾತೆಗೆ ವರ್ಷಕ್ಕೆ 10 ಸಾವಿರ ರು. ಮತ್ತು ಹೈನುಗಾರಿಕೆಗೆ ಉತ್ತೇಜನ ನೀಡಲು ರೈತರು ಉತ್ಪಾದಿಸುವ ಹಾಲಿಗೆ ಪ್ರೋತ್ಸಾಹದ ಹಣ ನೀಡುತ್ತಿರುವುದು ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಾಲೂಕಿನ ದೊಡ್ಡಬಾಲ ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ನಡೆಸಿದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ವರಿಷ್ಠ ದೊಡ್ಡಗೌಡರು ಪ್ರಧಾನಿಯಾಗಿದ್ದು ನಮ್ಮ ನಾಡಿನ ಹೆಮ್ಮೆ. 

ಅವರೊಬ್ಬ ರೈತ ಮತ್ತು ಮಣ್ಣಿನ ಮಗನೂ ಹೌದು. ಆದರೆ, ದೇಶದ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಬರಬೇಕಾಯಿತು ಎಂದು ಪರೋಕ್ಷವಾಗಿ ಎಚ್ಡಿಡಿ ಅವರನ್ನು ಕುಟುಕಿದರು. ಕೋವಿಡ್‌ ವೇಳೆ ಅಮೆರಿಕಾದಂತಹ ದೇಶವೇ ಲಸಿಕೆಗೆ ಹಣ ಪಡೆದು ಲಸಿಕೆ ನೀಡಿದರೆ, ನಮ್ಮ ದೇಶದಲ್ಲಿ ಉಚಿತವಾಗಿ ಲಸಿಕೆ ಹಾಕಲಾಗಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ನಾವು ಬದುಕಿದ್ದೇವೆಂದರೆ ಪುಣ್ಯಾತ್ಮ ನರೇಂದ್ರ ಮೋದಿಯ ಶ್ರಮದಿಂದ. ಬಿಜೆಪಿ ಸರ್ಕಾರದಿಂದ ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಕೆಲಸ ಮಾಡಲಾಗಿದ್ದು, ದಲಿತರಿಗೆ ಉಚಿತವಾಗಿ ವಿದ್ಯುತ್‌ ನೀಡಲಾಗುತ್ತಿದೆ ಎಂದರು. 

Tap to resize

Latest Videos

ಜನತೆಯ ಪ್ರೀತಿ ವಿಶ್ವಾಸ ಧನ್ಯತಾ ಭಾವನೆ ಮೂಡಿಸಿದೆ: ಸಚಿವ ಸುಧಾಕರ್‌

ಒಂದು ಬಾರಿ ತಿನ್ನುವ ಹಣ್ಣನ್ನೆ ಅಳೆದು ತೂಗಿ ಒಳ್ಳೆಯ ಹಣ್ಣನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆಂದರೆ ಇನ್ನು 5 ವರ್ಷ ನಮ್ಮನ್ನು ಹಾಗೂ ನಮ್ಮ ತಾಲೂಕನ್ನು ಮುನ್ನಡೆಸುವ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡುವ ಅಭ್ಯರ್ಥಿಯನ್ನು ಅಳೆದು ತೂಗಿ ಯಾರೂ ಯೋಗ್ಯರು ಎಂಬುದನ್ನು ಅವಲೋಕಿಸಿ ಆಯ್ಕೆ ಮಾಡಿ ಮತನೀಡಬೇಕಿದೆ ಎಂದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಅಭ್ಯರ್ಥಿಗಳನ್ನು ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿಯ ಜೊತೆ ತಕ್ಕಡಿಗೆ ಹಾಕಿ ತೂಗಿ ನೋಡಿದರೆ ಯಾರು ಉತ್ತಮರೆಂದು ನಿಮಗೆ ತಿಳಿಯುತ್ತದೆ. ನಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಸುಧಾ ಶಿವರಾಮೇಗೌಡಗೆ ಮತಕೊಟ್ಟು ಶಾಸಕರನ್ನಾಗಿ ಆಯ್ಕೆ ಮಾಡಿ ಎಂದು ಮನವಿಮಾಡಿದರು.

ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಮೂಡಲಬಾಗಿಲ ಆಂಜನೇಯಸ್ವಾಮಿ ದೇವಾಲಯವನ್ನು ಜಾಮೀಯ ಮಸೀದಿಯನ್ನಾಗಿಸಿ ಟಿಪ್ಪು ಸುಲ್ತಾನ್‌ ಪರಿವರ್ತನೆಗೊಳಿಸಿದ್ದಾನೆ. ಆ ದೇವಾಲಯವನ್ನು ಮತ್ತೆ ಪುನರ್ನಿರ್ಮಿಸಲು ಹಾಗೂ ಹನುಮನಿಗೆ ನ್ಯಾಯ ಕೊಡಿಸಲು ಜಿಲ್ಲೆಯ 7 ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಿ ಎಂದರು. ಹಿಂದುತ್ವಕ್ಕಾಗಿ ಬಿಜೆಪಿ ರಾಜಕಾರಣ ಮಾಡುತ್ತಿದೆಯೇ ಹೊರತು ಕುಟುಂಬವನ್ನು ಉದ್ಧಾರ ಮಾಡುವುದಕ್ಕಲ್ಲ. ಕನಕದಾಸರು, ಬಸವಣ್ಣ, ಕೆಂಪೇಗೌಡರು, ನಾಲ್ವಡಿ ಕೃಷ್ಣರಾಜ ಒಡೆಯರ್‌, ಕುವೆಂಪು ಹಾಗೂ ವಿಶ್ವೇಶ್ವರಯ್ಯರನ್ನು ಬಿಟ್ಟು ಹಿಂದುತ್ವವಿಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದರು.

ನನ್ನ ಸ್ಪರ್ಧೆ​ಯಿಂದ ಡಿಕೆಶಿ ಕುಟುಂಬಕ್ಕೆ ಭಯ: ಸಚಿವ ಅ​ಶೋಕ್‌

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ರಾಮನಿಗೆ ನ್ಯಾಯ ಕೊಟ್ಟಿದ್ದೇವೆ. ಅಂತೆಯೇ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹನುಮಮಂದಿರ ನಿರ್ಮಿಸಿ ಹನುಮನಿಗೂ ನ್ಯಾಯ ಕೊಡಿಸಬೇಕಿದೆ. ಅದಕ್ಕೆ ಪೂರಕವಾಗಿ ಜಿಲ್ಲೆಯ ಜನರು ಬಿಜೆಪಿ ಪಕ್ಷಕ್ಕೆ ಮತನೀಡುವ ಮೂಲಕ ಹೆಚ್ಚು ಶಕ್ತಿ ಕೊಡಬೇಕು ಎಂದರು. ಅಭ್ಯರ್ಥಿ ಸುಧಾ ಶಿವರಾಮೇಗೌಡ, ಮಾಜಿ ಸಂಸದ ಎಲ್.ಆರ್‌.ಶಿವರಾಮೇಗೌಡ, ಪುತ್ರ ಚೇತತ್‌ಗೌಡ ಮಾತನಾಡಿದರು. ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ವಕೀಲ ಟಿ.ಕೆ.ರಾಮೇಗೌಡ, ಮುಖಂಡರಾದ ಪಾಳ್ಯ ರಘು, ಚೇತನ್‌, ಸುರೇಶ ಟಿ.ಉಪ್ಪಾರ್‌, ಮಂಜೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಸೋಮಶೇಖರ್‌ ಸೇರಿದಂತೆ ಹಲವರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!