ಶಾಸಕ ಎಸ್‌.ಆರ್‌.ವಿಶ್ವನಾಥ್‌ ಒಬ್ಬ ರೌಡಿ: ಎಚ್‌.ಡಿ.ಕುಮಾರಸ್ವಾಮಿ

By Kannadaprabha NewsFirst Published May 4, 2023, 7:53 AM IST
Highlights

‘ಮುನಿಗೌಡ ತಮ್ಮನ್ನೇ ತಾವೇ ಕಿಡ್ನಾಪ್‌ ಮಾಡಿಕೊಳ್ತಾರೆ’ ಎಂಬ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅವರಂತಹ ಒಬ್ಬ ರೌಡಿ ಶಾಸಕ ಮತ್ತೊಬ್ಬ ಇದ್ದಾನಾ? ಅವರ ಕುರಿತು ಎಷ್ಟು ವಿಡಿಯೋ ಇವತ್ತು ಪೊಲೀಸ್‌ ಠಾಣೆಗೆ ದಾಖಲೆ ಕೊಟ್ಟಿದ್ದಿವಿ. 

ಬಾಗಲಕೋಟೆ (ಮೇ.04): ‘ಮುನಿಗೌಡ ತಮ್ಮನ್ನೇ ತಾವೇ ಕಿಡ್ನಾಪ್‌ ಮಾಡಿಕೊಳ್ತಾರೆ’ ಎಂಬ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕುಮಾರಸ್ವಾಮಿ, ಅವರಂತಹ ಒಬ್ಬ ರೌಡಿ ಶಾಸಕ ಮತ್ತೊಬ್ಬ ಇದ್ದಾನಾ? ಅವರ ಕುರಿತು ಎಷ್ಟು ವಿಡಿಯೋ ಇವತ್ತು ಪೊಲೀಸ್‌ ಠಾಣೆಗೆ ದಾಖಲೆ ಕೊಟ್ಟಿದ್ದಿವಿ. ಕ್ಯಾಂಪೇನ್‌ ಮಾಡಲು ಹೋಗುವ ಹೆಣ್ಣು ಮಕ್ಕಳ ಮೇಲೆ, ಇವತ್ತು ರೌಡಿಗಳನ್ನು ಬಿಟ್ಟು ಹೆದರಿಸುವಂತಹ ಗೂಂಡಾ ಸಂಸ್ಕೃತಿ ರಾಜಕಾರಣಿ ವಿಶ್ವನಾಥ. ಚುನಾವಣೆ ಮುಂಚೆ ಅವರನ್ನ ಮುಗಿಸೇ ಬಿಡ್ತಿನಿ ಅಂತೇಳಿ ಮಾತಾಡಿರುವಂತಹದ್ದು ಈಗಾಗ್ಲೆ ಪ್ರಚಾರ ಆಗಿದೆ. ಅವರು ಯಾವ ರೀತಿ ಬಂದಿದ್ದಾರೆ ಅನ್ನೋದು ಗೊತ್ತಿದೆ. ಆ ಗೂಂಡಾ ಸಂಸ್ಕೃತಿಗೆ ಅಂತಿಮ ತೆರೆ ಎಳೆಯಬೇಕು ಅಂತಲೇ ಈ ಬಾರಿ ಮುನಿಗೌಡ ಅಂತಹ ಉತ್ತಮ ಅಭ್ಯರ್ಥಿ ಹಾಕಿದ್ದೇವೆ ಎಂದು ತಿಳಿಸಿದರು.

ಮುನೇಗೌಡ ವಿರುದ್ಧ ಬಿಜೆಪಿ ಪ್ರತಿಭಟನೆ: ಯಲಹಂಕ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ.ಮುನೇಗೌಡ ಚುನಾವಣೆ ವೇಳೆ ತಮ್ಮನ್ನು ತಾವೇ ಅಪಹರಿಸಿಕೊಂಡಂತೆ ನಾಟಕ ಮಾಡಿ ಅನುಕಂಪದ ಮೇಲೆ ಮತ ಪಡೆಯಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊಲೀಸ್‌ ಠಾಣೆಗಳ ಎದುರು ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಪಹರಣ ಮತ್ತು ಗಲಭೆ ರೂಪಿಸುವ ಸಂಚು ಹೂಡಿದ್ದ ವಿಡಿಯೋ ತುಣುಕುಗಳು ಮಾಧ್ಯಮಗಳಲ್ಲಿ ಬಿತ್ತರವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಆರ್‌.ವಿಶ್ವನಾಥ್‌ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಕ್ಷಣವೇ ಮುನೇಗೌಡ ವಿರುದ್ಧ ಕ್ರಮ ಜರುಗಿಸುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಹನುಮ ದೇಗುಲಗಳ ಕೆಡವಿಸಿದ ಬಿಜೆಪಿ: ರಣದೀಪ್‌ ಸುರ್ಜೇವಾಲಾ ಕಿಡಿ

ಈ ಪ್ರತಿಭಟನೆ ವೇಳೆ ಮಾತನಾಡಿದ ಯಲಹಂಕ ಕ್ಷೇತ್ರದ ಶಾಸಕ ಹಾಗೂ ಬಿಜೆಪಿ ಹುರಿಯಾಳು ವಿಶ್ವನಾಥ್‌ ಅವರು, ನೇರವಾಗಿ ರಾಜಕೀಯ ಮಾಡದೇ ಕಾನೂನು ಸುವ್ಯವಸ್ಥೆಗೆ ಭಂಗ ತಂದು ನನ್ನ ಮೇಲೆಯೂ ಆರೋಪಗಳು ಬರುವಂತೆ ಮಾಡುವ ವಿಚ್ಛಿದ್ರಕಾರಿ ಷಡ್ಯಂತ್ರವನ್ನು ಜೆಡಿಎಸ್‌ ಅಭ್ಯರ್ಥಿ ರೂಪಿಸಿದ್ದರು ಎಂದು ಆರೋಪಿಸಿದರು. ಚುನಾವಣೆಯಲ್ಲಿ ಸೋಲಿನ ಭೀತಿ ಅವರನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಇಂತಹ ಕುಕೃತ್ಯಕ್ಕೆ ಕೈ ಹಾಕಿದ್ದಾರೆ. ಅನುಕಂಪ ಗಿಟ್ಟಿಸಲು ತನ್ನ ಪತ್ನಿಯ ಮೇಲೆಯೇ ತಮ್ಮ ಹುಡುಗರ ಮೂಲಕ ಹಲ್ಲೆ ನಡೆಸುವಂತಹ ಹೀನಕೃತ್ಯಕ್ಕೆ ಮುಂದಾಗಿರುವ ಮುನೇಗೌಡ ಅವರದ್ದು ಎಂತಹ ನೀಚ ಮನಸು ಎಂಬುದನ್ನು ಸಾಬೀತುಪಡಿಸಿದೆ. ಇಂತಹ ಹೀನ ವ್ಯಕ್ತಿತ್ವದ ವ್ಯಕ್ತಿ ಜನಪ್ರತಿನಿಧಿಯಾದರೆ ಇಡೀ ಯಲಹಂಕದ ಜನರ ಶಾಂತಿ ನೆಮ್ಮದಿ ಹಾಳಾಗಲಿದೆ ಎಂದರು.

ಮುಂದಿನ ಅಧಿವೇಶನದಲ್ಲಿ ರಾಜ್ಯದ ಮೀಸಲಿಗೆ ಒಪ್ಪಿಗೆ: ಬಿ.ಎಲ್‌.ಸಂತೋಷ್‌

ನೇರಾನೇರ ಚುನಾವಣೆಯನ್ನು ಎದುರಿಸಲಿ. ಅವರು ತಮ್ಮ ಪಕ್ಷ ಮತ್ತು ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಏನು ಎಂಬುದನ್ನು ಜನತೆಯ ಮುಂದಿಟ್ಟು ಮತ ಕೇಳಲಿ. ಅದನ್ನು ಬಿಟ್ಟು ಈ ರೀತಿ ಕೀಳುಮಟ್ಟದಲ್ಲಿ ರಾಜಕೀಯ ಮಾಡಲು ಹೊರಟರೆ ಯಲಹಂಕದ ಬುದ್ಧಿವಂತ ಮತದಾರರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಹೀಗೆ ಷಡ್ಯಂತ್ರ ರೂಪಿಸಿರುವ ವ್ಯಕ್ತಿ ಮತ್ತು ಇದರ ಹಿಂದೆ ಇರುವ ಕಾಣದ ಕೈಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಬೇಕೆಂದು ಪೊಲೀಸರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!