ವಿಜಯ ಸಂಕಲ್ಪ ಯಾತ್ರೆಗೆ ಸಿಕ್ಕ ಬೆಂಬಲ ನೋಡಿ ಕಾಂಗ್ರೆಸ್‌ ದಿಗ್ಭ್ರಾಂತ: ಬಿ.ಎಸ್‌.ಯಡಿಯೂರಪ್ಪ

By Kannadaprabha NewsFirst Published Mar 31, 2023, 4:00 AM IST
Highlights

ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ಅಷ್ಟೇ ಸತ್ಯ.

ಬೆಂಗಳೂರು (ಮಾ.31): ‘ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ಅಷ್ಟೇ ಸತ್ಯ. ನಾಲ್ಕು ತಂಡಗಳಲ್ಲಿ ರಾಜ್ಯಾದ್ಯಂತ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ವ್ಯಕ್ತವಾದ ಜನ ಬೆಂಬಲ ನೋಡಿದಾಗ ಈ ಬಾರಿ ಪಕ್ಷಕ್ಕೆ ಸ್ಪಷ್ಟಬಹುಮತ ಸಿಗುವುದು ನಿಚ್ಚಳವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಆಯೋಗ ಚುನಾವಣಾ ದಿನಾಂಕ ಘೋಷಿಸಿದೆ. 

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಕಾರ್ಯಕ್ರಮಗಳಿಗೆ ಅದ್ಭುತ ಸ್ವಾಗತ ಸಿಕ್ಕಿದೆ. ವಿಜಯ ಸಂಕಲ್ಪ ಯಾತ್ರೆಗೆ ವ್ಯಕ್ತವಾದ ಜನಬೆಂಬಲ ಕಂಡು ಕಾಂಗ್ರೆಸ್‌ ನಾಯಕರು ದಿಗ್ಭ್ರಾಂತರಾಗಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಪರ ಇರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದರು. ಪಕ್ಷದ ಸಂಸದರು ಚುನಾವಣೆ ಮುಗಿಯುವವರೆಗೆ ಆಯಾಯ ಜಿಲ್ಲೆಗಳಲ್ಲಿ ಇದ್ದು, ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಕೆಲಸ ಮಾಡಲು ಸೂಚಿಸಲಾಗುವುದು. ಶೀಘ್ರದಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂಸದರ ಸಭೆ ಕರೆದು ಚುನಾವಣೆಗೆ ತೊಡಗಿಸುವುದಾಗಿ ಹೇಳಿದರು. 

ಸಿದ್ದು ಪಾಳೇಗಾರಿಕೆ ಮಾಡ್ಕೊಂಡು, ದೇವೇಗೌಡರನ್ನು ಹೆದರಿಸ್ತಿದ್ರು: ಎಚ್‌.ಡಿ.ಕುಮಾರಸ್ವಾಮಿ

ಚುನಾವಣೆ ಘೋಷಣೆಯಾಗಿರುವುದರಿಂದ ಹೈಕಮಾಂಡ್‌ ಶೀಘ್ರದಲ್ಲೇ ಅಭ್ಯರ್ಥಿಗಳು ಯಾರು ಎಂಬುದನ್ನು ತೀರ್ಮಾನಿಸಲಿದೆ. ಚುನಾವಣೆ ಮುಗಿಯುವ ವರೆಗೆ ನಾನು ಸೇರಿದಂತೆ ಪಕ್ಷದ ಸಂಸದರು, ಮುಖಂಡರು ರಾಜ್ಯದ ಎಲ್ಲಾ ಕ್ಷೇತ್ರಗಳ ಪ್ರವಾಸ ಮಾಡುತ್ತೇವೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆಲ್ಲುವುದಾಗಿ ಹೇಳಿದ್ದೆ. ಬಳಿಕ ನನ್ನ ಮಾತು ಸುಳ್ಳಾಗಲಿಲ್ಲ. ಈಗ ಪಕ್ಷೇತರ ಸಂಸದೆ ಸುಮಲತಾ ನಮ್ಮ ಜತೆಗೆ ಬಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಿಕ್ಕ ಜನಬೆಂಬಲ ವಿಧಾನಸಭಾ ಚುನಾವಣೆಯಲ್ಲಿ ಪುನರಾವರ್ತನೆಯಾಗುವ ವಿಶ್ವಾಸವಿದೆ ಎಂದರು.

ಕಾಂಗ್ರೆಸ್‌-60-70 ಸ್ಥಾನ ದಾಟಲ್ಲ: ನಾನು ಕಾಂಗ್ರೆಸ್‌ ಮುಖಂಡರನ್ನು ಕೇಳುತ್ತೇನೆ. ನಿಮ್ಮ ನಾಯಕರು ಯಾರು? ರಾಹುಲ್‌ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಸಮನಾಗಲು ಸಾಧ್ಯವೇನು? ಈಗಾಗಲೇ ಕಾಂಗ್ರೆಸ್‌ನವರು ಮುಖ್ಯಮಂತ್ರಿಯಾಗುವ ಹಗಲು ಕನಸು ಕಾಣುತ್ತಿದ್ದಾರೆ. ಇದು ತಿರುಕನ ಕನಸು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ 60-70 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಬಗ್ಗೆ ಭವಿಷ್ಯ ನುಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯೂರಪ್ಪ, ಇನ್ನು ಎರಡು-ಮೂರು ದಿನಗಳಲ್ಲಿ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ತೆರಳಿ ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಮೂರು ಸರ್ವೆ ಬಿಜೆಪಿಗೆ ಬಹುಮತ: ಟಿವಿ ಸರ್ವೆಗಳನ್ನು ಗಮನಿಸಿದ್ದೇನೆ. ನಾನು 50 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ತಳಮಟ್ಟದಿಂದ ಪಕ್ಷ ಬೆಳೆಸಿಕೊಂಡು ಬಂದಿದ್ದೇನೆ. ಜನರ ನಾಡಿ ಮಿಡಿತ ಏನೆಂಬುದು ನನಗೆ ಗೊತ್ತಿದೆ. ಬಿಜೆಪಿ ನಿಚ್ಚಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ. ನಾನು ಸಹ ಮೂರು ಸರ್ವೆ ಮಾಡಿಸಿದ್ದೇವೆ. ಎಲ್ಲಾ ಸರ್ವೆಗಳಲ್ಲಿ ಬಿಜೆಪಿ 130-140 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವರದಿ ಇದೆ. ನಾವು ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ಮುಖ್ಯಮಂತ್ರಿ ರಾಜ್ಯದ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯದಡಿ ಮೀಸಲಾತಿ ನೀಡಿದ್ದಾರೆ. 

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳದ ಮುಖಾಂತರ ಬಹುವರ್ಷಗಳ ಬೇಡಿಕೆ ಈಡೇರಿಸಿದ್ದೇವೆ. ಮುಸ್ಲಿಂ ಬಾಂಧವರಿಗೆ ಅನ್ಯಾಯ ಮಾಡಿಲ್ಲ. ಈ ಸಮುದಾಯಕ್ಕೆ ಧರ್ಮ ಆಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಸಮುದಾಯವನ್ನು ಆರ್ಥಿಕ ದುರ್ಬಲ ವರ್ಗ(ಇಡ್ಲ್ಯೂಎಸ್‌)ದಡಿಗೆ ತರಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ ಸ್ನೇಹಿತರು ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣಬಾರದು. ಅವರು ಅಧಿಕಾರಕ್ಕೆ ಸಿಗುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ವಿರೋಧ ಪಕ್ಷದಲ್ಲಿ ಎಲ್ಲಿ ಕೂರಬೇಕು ಎಂಬುದುನ್ನು ತೀರ್ಮಾನಿಸಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವೀರಶೈವ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿಲ್ಲ: ವೀರಶೈವ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಬಿಜೆಪಿ ಪಕ್ಷ ನನಗೆ ಎಲ್ಲವೂ ನೀಡಿದೆ. ಮುಖ್ಯಮಂತ್ರಿ ಮಾಡಿ, ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಸ್ಥಾನ ನೀಡಿದೆ. ನನಗೆ ನೀಡಿರುವ ಸ್ಥಾನಮಾನ ಬೇರೆ ಯಾರಿಗೂ ನೀಡಿಲ್ಲ. ವೀರಶೈವ-ಲಿಂಗಾಯತ ಸಮುದಾಯ ತಪ್ಪು ಗ್ರಹಿಸುವುದು ಬೇಡ ಎಂದು ಇದೇ ವೇಳೆ ಯಡಿಯೂರಪ್ಪ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಆಯನೂರು ಮಂಜುನಾಥ್‌ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನುವ ಸುದ್ದಿಗೆ ಬಗ್ಗೆ ಪ್ರತಿಕ್ರಿಯಿಸಿ, ಆಯನೂರು ಮಂಜುನಾಥ ಟಿಕೆಟ್‌ ಕೇಳಿದ್ದಾರೆ. 

ಮೀಸಲಾತಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೇಳುವುದರಲ್ಲಿ ತಪ್ಪಿಲ್ಲ. ಅವರು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಶಿವಮೊಗ್ಗಕ್ಕೆ ಹೋದಾಗ ಆ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಕೇಂದ್ರ ಸಚಿವರಾದ ಸಚಿವೆ ಶೋಭಾ ಕರಂದ್ಲಾಜೆ, ಭಗವಂತ ಕೂಬಾ, ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತಿತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!